ಕೃಷಿಯ ಬಗ್ಗೆ ಮಂಡ್ಯ ರೈತರಿಗೆ ವಿದ್ಯಾರ್ಥಿಗಳ ಪಾಠ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,08: ವಾಣಿಜ್ಯ ಬೆಳೆಗಳತ್ತ ಮಾರು ಹೋಗಿ ಲಕ್ಷಾಂತರ ರೂ. ಬಂಡವಾಳ ಸುರಿದು ಕೃಷಿ ಮಾಡಿ ಕೊನೆಗೆ ನಿರೀಕ್ಷಿಸಿದ ಲಾಭ ಬಾರದೆ ನಷ್ಟ ಅನುಭವಿಸುವವರಿಗೆ ಮಿಶ್ರ ಕೃಷಿ ಮೂಲಕ ಬದುಕಲು ಸಾಧ್ಯ ಎಂಬುದನ್ನು ಮಂಡ್ಯ ತಾಲೂಕು ವಿ.ಸಿ. ಫಾರಂನ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.

ರೈತರ ಸಂಕಷ್ಟ ಮನಗಂಡ ವಿ.ಸಿ.ಫಾರಂ ವಿಶ್ವವಿದ್ಯಾಲಯದ ಅಂತಿಮ ವರ್ಷದ 85 ಮಂದಿ ವಿದ್ಯಾರ್ಥಿಗಳ 6 ತಂಡ ಸುತ್ತಮುತ್ತಲಿನ ಆರು ಗ್ರಾಮಗಳ ರೈತರ 8 ರಿಂದ 10 ಗುಂಟೆ ಪಾಳು ಜಮೀನಿನ ಪರಿಶೀಲನೆ ನಡೆಸಿ ಈ ಜಮೀನಿನಲ್ಲಿ ಭತ್ತ, ರಾಗಿ, ಸೂರ್ಯಕಾಂತಿ, ಏಕದಳ, ದ್ವಿದಳ, ತರಕಾರಿ, ಎಣ್ಣೆಕಾಳುಗಳು ಸೇರಿದಂತೆ 62 ವಿವಿಧ ಬಗೆಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಆಧುನಿಕ ಕೃಷಿ ವಿಧಾನ ಸೇರಿದಂತೆ ಹಲವು ವಿಚಾರಗಳನ್ನು ರೈತರಿಗೆ ತಿಳಿಸುತ್ತಿದ್ದಾರೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

Mandya

ಕೆಲವು ರೈತರು ವಿದ್ಯಾರ್ಥಿಗಳ ಕೃಷಿ ಚಟುವಟಿಕೆಯನ್ನು ನೋಡಲು ಸ್ವಯಂ ಪ್ರೇರಿತರಾಗಿ ಬಂದರೆ, ಮತ್ತೆ ಕೆಲವು ರೈತರನ್ನು ವಿದ್ಯಾರ್ಥಿಗಳೇ ಕರೆತಂದು ಅವರಿಗೆ ಆಹಾರ ಬೆಳೆಗಳ ಬಗ್ಗೆ ಮಾಹಿತಿ, ಬೆಳೆಯುವ ವಿಧಾನದ ಕುರಿತು ಹೇಳುತ್ತಾ ಆ ಮೂಲಕ ಕಬ್ಬು ಬೆಳೆಗೆ ಪರ್ಯಾಯವಾಗಿ ಬೆಳೆಉಬಹುದಾದ ಬೆಳೆಗಳ ಕಡೆ ಗಮನಹರಿಸಲು ಉತ್ತೇಜನ ನೀಡಲಾಗುತ್ತಿದೆ.

ಈ ವಿದ್ಯಾರ್ಥಿಗಳ ಸಾಧನೆಗೆ ಕೃಷಿ ವಿದ್ಯಾಲಯದ ಪ್ರಾಧ್ಯಾಪಕ ಡಾ. ರಘುಪತಿ ಅವರ ಸಹಕಾರ ನೀಡಿದ್ದಾರೆ. ಅವರು ಹೇಳುವ ಪ್ರಕಾರ ರೈತರು ಮಾಹಿತಿ ಕೊರತೆಯಿಂದಾಗಿ ಕೃಷಿಯಲ್ಲಿ ನಷ್ಟಕ್ಕೀಡಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಮತ್ತು ವಿನೂತನ ಪ್ರಯೋಗ ಮಾಡಬೇಕೆಂಬ ಉದ್ದೇಶದಿಂದ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಈ ಉತ್ತಮ ಕಾರ್ಯಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದರು.['ನೆಲ್ಲಿಕಾಯಿ' ಮರದಿಂದ ಬದುಕು ಕಟ್ಟಿಕೊಂಡ ಮೈಸೂರು ದಿವಾಕರ್]

Mandya

ನಮ್ಮಲ್ಲಿ ಹೆಚ್ಚಿನವರು ಕೃಷಿಕರು. ಅವರಿಗೆ ಕೃಷಿಯನ್ನು ಹೊರತು ಪಡಿಸಿದರೆ ಜೀವನ ಸಾಗಿಸಲು ಬರುವುದೇ ಇಲ್ಲ. ಹೀಗಾಗಿ ಇವರು ಮೊದಲಿನಿಂದಲೂ ಪರಂಪರಾಗತ ಕೃಷಿಗೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಇದರಲ್ಲಿ ಆಗುತ್ತಿರುವ ಕಷ್ಟ, ನಷ್ಟಗಳನ್ನು ಅನುಭವಿಸುತ್ತಲೇ ಸಾಗುತ್ತಿದ್ದಾರೆ. ಹೀಗಿರುವಾಗ ಕೇವಲ ಒಂದೇ ಬೆಳೆಗೆ ಜೋತು ಬಿದ್ದು ನಷ್ಟ ಅನುಭವಿಸುವ ಬದಲು ಆಹಾರ ಬೆಳೆಗಳನ್ನು ಬೆಳೆದು ಲಾಭ ನಷ್ಟ ಸರಿದೂಗಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ವಿ.ಸಿ.ಫಾರಂನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]

ಇವತ್ತು ನಮ್ಮ ರಾಜ್ಯದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿದ್ದರೂ ಅವುಗಳಿಂದ ರೈತರಿಗೆ ಸಮರ್ಪಕವಾದ ಮಾಹಿತಿ ಸಿಗುತ್ತಿಲ್ಲ. ಜೊತೆಗೆ ಕೃಷಿ ಇಲಾಖೆಯ ಮಾಹಿತಿ ಪಡೆದು ರೈತ ಕೂಡ ಕೃಷಿ ಮಾಡುತ್ತಿಲ್ಲ. ಇಲಾಖೆ ಮತ್ತು ರೈತರ ನಡುವೆ ಅಂತರ ಏರ್ಪಟ್ಟಿದ್ದರಿಂದಲೋ ಏನು ಕೃಷಿ ಕ್ಷೇತ್ರ ಇನ್ನೂ ಕೂಡ ಆಧುನಿಕತೆಗೆ ತೆರೆದುಕೊಳ್ಳುತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
VC Farm University students teaching to farmer how to grow the crops their own agriculture lands in Mandya from some days.
Please Wait while comments are loading...