ರಸ್ತೆ ಮಧ್ಯೆ ಚಾಪೆ ಹಾಸಿಕೊಂಡು ಮಲಗಿ ವಾಟಾಳ್ ಪ್ರತಿಭಟನೆ

Posted By:
Subscribe to Oneindia Kannada

ಮೈಸೂರು, ನವೆಂಬರ್ 9: ರಾಜ್ಯ ನಾಯಕರು ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್- ಕರ್ನಾಟಕದತ್ತ ಪ್ರಾಮಾಣಿಕವಾಗಿ ಗಮನ ಹರಿಸುತ್ತಿಲ್ಲ ಎಂದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.

ಬಾಂಡಲಿ, ಮಾವುಟಿ ಹಿಡಿದು ವಾಟಾಳ್ ನಾಗರಾಜ್ ಪ್ರತಿಭಟನೆ

ಮೈಸೂರಿನ ರೈಲು ನಿಲ್ದಾಣದ ಬಳಿ ಚಾಪೆ ಹಾಸಿ ಮಲಗಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಕಳಸಾ ಬಂಡೂರಿ, ಮಹದಾಯಿ ಕುರಿತು ಎರಡು ವರ್ಷಗಳಿಂದ ಸತತ ಚಳವಳಿ ನಡೆದಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವ ಪಕ್ಷದವರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

Vatal Nagaraj protest in Mysuru urging for various demands

ಗೋವಾ, ಮಹಾರಾಷ್ಟ್ರ ಹಠಮಾರಿತನದಿಂದ ಕುಡಿಯುವ ನೀರು ಬಂದಿಲ್ಲ. ಕುಡಿಯುವ ನೀರನ್ನು ತರಿಸಿಕೊಡುವ ಶಕ್ತಿ ಭಾರತೀಯ ಜನತಾ ಪಕ್ಷಕ್ಕಿತ್ತು. ಮಹಾರಾಷ್ಟ್ರ, ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಮಂತ್ರಿಯವರೂ ಬಿಜೆಪಿಯಿಂದಲೇ ಆಯ್ಕೆಯಾದವರು. ನಮ್ಮಲ್ಲಿ ಬಹಳಷ್ಟು ಮಂದಿ ಸಂಸತ್ ಸದಸ್ಯರಿದ್ದಾರೆ. ತೀವ್ರ ಒತ್ತಡ ಮಾಡಿ ನೀರು ಕೊಡಿಸಬಹುದಿತ್ತು ಎಂದರು.

ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನ್ಯಾಯಮಂಡಳಿ ಸಲಹೆ ನೀಡಿದ್ದರೂ ನಮ್ಮಲ್ಲಿ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರಿಗೆ ಶಕ್ತಿ ಇಲ್ಲ, ಪ್ರಾಮಾಣಿಕ ಪ್ರಯತ್ನ ಇಲ್ಲ. ಒಂದು ದಿನ ಸಂಸತ್ ನಲ್ಲಿ ಧರಣಿ, ಸಭಾತ್ಯಾಗ, ಕೆಂಪುಕೋಟೆಯ ಮುಂದೆ ಸತ್ಯಾಗ್ರಹ ಏನೂ ಮಾಡಿಲ್ಲ. ನಾಲ್ಕು ವರ್ಷ ಆಯಿತು. ಎಲ್ಲಿದ್ದಾರೆ ಅಂತಲೇ ಗೊತ್ತಿಲ್ಲ. ಊರಿಗೆ ಬರ್ತಾರೆ ಹೋಗ್ತಾರೆ ಎಂದು ಆರೋಪಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ವಜಾಗೊಳಿಸಲು 24 ಗಂಟೆ ಗಡುವು ನೀಡಿದ ವಾಟಾಳ್

ತಮಿಳುನಾಡು, ಆಂಧ್ರ, ತೆಲಂಗಾಣದವರನ್ನು ನೋಡಿ ಬುದ್ಧಿ ಕಲಿಯಬೇಕು. ತಮಿಳುನಾಡಿಗೆ ಪ್ರಧಾನಿ ಎದ್ದು ಬಿದ್ದು ಓಡಿ ಬರುತ್ತಾರೆ. ಆದರೆ ಕರ್ನಾಟಕ ಕುರಿತು ಪ್ರಾಮಾಣಿಕತೆ ಇಲ್ಲ. ಬಂದು ಹಾರ ಹಾಕಿಸಿಕೊಂಡು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಬಾವುಟದ ವಿನ್ಯಾಸ ಬದಲಾವಣೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಮಿತಿಯನ್ನೂ ರಚಿಸಿದ್ದಾರೆ. ಈಗಿರುವ ಕನ್ನಡ ಬಾವುಟವನ್ನು ಕನ್ನಡಿಗರೆಲ್ಲರೂ ಒಪ್ಪಿಕೊಂಡಿದ್ದಾರೆ. ನಾನು ಮತ್ತು ರಾಮಮೂರ್ತಿ ಸೇರಿದಂತೆ ಹಲವು ಜನ ಇದಕ್ಕಾಗಿ ದುಡಿದಿದ್ದೇವೆ. ಆದರೆ ಕನ್ನಡ ಹೋರಾಟಗಾರರನ್ನು ಸಮಿತಿಗೆ ಸೇರಿಸಿಕೊಂಡಿಲ್ಲ ಎಂದರು.

18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?

ಹಳದಿ- ಕೆಂಪು ಬಾವುಟದ ಒಂದು ಗೆರೆ ಬದಲಾದರೂ ರಾಜ್ಯಾದ್ಯಂತ ಸರಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಮೂರು ದಿನ ಕೂತ್ಕೋತಾರೆ, ನಿರ್ಣಯ ತಗೋತಾರೆ, ಹೋಗ್ತಾರೆ. ಹನ್ನೊಂದು ತಿಂಗಳು ಕನ್ನಡ ಸಾಹಿತ್ಯ ಪರಿಷತ್ ಮಲಗಿರುತ್ತದೆ. ಯಾವ ನಿರ್ಣಯಗಳೂ ಕಾರ್ಯರೂಪಕ್ಕೆ ಬರುವುದಿಲ್ಲ. ಕನ್ನಡ ಕುರಿತು, ಕನ್ನಡದ ಸಮಗ್ರ ಅಭಿವೃದ್ಧಿಗೆ ಸಾಹಿತ್ಯ ಸಮ್ಮೇಳನ ಸಾಧುವಲ್ಲ ಎಂದರು.

ಕನ್ನಡ ಶಾಲೆ ಮುಚ್ಚುತ್ತಿದ್ದಾರೆ. ಪರಭಾಷೆ ಹಾವಳಿ ಜಾಸ್ತಿ ಆಗಿದೆ. ಇವೆಲ್ಲ ನಿಲ್ಲಬೇಕು. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರೆಯಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಾಪೆ ಹಾಸಿ ಪ್ರತಿಭಟನೆ ಮಾಡುತ್ತಿದ್ದೇನೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pro Kannada activist Vatal Nagaraj protested in Mysuru urging for various demands related to Kannada language, water, flag and others on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ