ಬ್ಯಾಂಕ್ ನಲ್ಲಿ ಮೊಬೈಲ್ ಎಗರಿಸಿದ ಆರ್ ಟಿಐ ಕಾರ್ಯಕರ್ತ ಕಂಬಿ ಹಿಂದೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 6: ಆರ್.ಟಿ.ಐ ಕಾರ್ಯಕರ್ತನೊಬ್ಬ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಿಸೆಗಿಳಿಸಿ ಪರಾರಿಯಾಗಿದ್ದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಘಟನೆ ನಡೆದಿರುವುದು ಮೈಸೂರಿನಲ್ಲಿ. ಬಂಧಿತ ಮೈಸೂರು ಅಗ್ರಹಾರದ ನಿವಾಸಿ, ಸದ್ಯ ಗೋಕುಲಂನಲ್ಲಿ ವಾಸವಿರುವ ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ. ಈತ ಜನವರಿ 23ರಂದು ಗೋಕುಲಂನಲ್ಲಿರುವ ವಿಜಯಾ ಬ್ಯಾಂಕ್ ಗೆ ಬಂದು, ಅಲ್ಲಿನ ಸಿಬ್ಬಂದಿ ಗುರುಪ್ರಸಾದ್ ಎಂಬವರು ಹೊರಗೆ ಇರಿಸಿದ್ದ 40 ಸಾವಿರ ರುಪಾಯಿ ಮೌಲ್ಯದ ಮೊಬೈಲ್ ಜೇಬಿಗಿಳಿಸಿದ್ದಾನೆ.

Various crime incidents in Mysuru

ಈ ಕೃತ್ಯವು ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಪರಿಶೀಲಿಸಿದಾಗ ಗಮನಕ್ಕೆ ಬಂದಿದೆ. ಕೂಡಲೇ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪಾರ್ಕಿಂಗ್ ವಿಚಾರಕ್ಕೆ ಹಲ್ಲೆ
ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆ ಮಗನ ಮೇಲೆ ವ್ಯಕ್ತಿಯೊಬ್ಬ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಂಡಿಮೊಹಲ್ಲಾ ನಿವಾಸಿ ಯಶೋದಾ ಹಾಗೂ ಆಕೆಯ ಮಗ ಹರೀಶ್ ಹಲ್ಲೆಗೊಳಗಾದವರು. ಪಕ್ಕದ ಮನೆಯ ಹೇಮಂತ್ ಎಂಬವನೇ ಹಲ್ಲೆ ನಡೆಸಿದ ವ್ಯಕ್ತಿ. ಗಾಡಿ ಇಡುವ ಕುರಿತಂತೆ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹೇಮಂತ್ ಇಬ್ಬರಿಗೂ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ.

Various crime incidents in Mysuru

ಸ್ಥಳಕ್ಕೆ ಮಂಡಿಮೊಹಲ್ಲಾ ಠಾಣೆ ಇನ್ ಸ್ಪೆಕ್ಟರ್ ತಲ್ವಾರ್ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಗೊಂಡ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ, ವಿದ್ಯಾರ್ಥಿ ಸಾವು
ವಿದ್ಯಾರ್ಥಿಗಳೀರ್ವರು ಬಿ.ಎಂ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರಿಗೆ ಕಾಲು ಮುರಿದು, ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದ ಉದಯ್ ಎಂಬುವರ ಮಗ ಹೃತಿಕ್ (17) ಮೃತ ಯುವಕ. ಈತ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮತ್ತೊಬ್ಬ ವಿದ್ಯಾರ್ಥಿ ಅಜಯ್, ಬಸವರಾಜು ಎಂಬುವರ ಮಗನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Various crime incidents in Mysuru

ಕಾಲೇಜಿಗೆ ರಜಾ ಇದ್ದ ಪರಿಣಾಮ ತಮ್ಮ ಜಾನುವಾರುಗಳನ್ನು ಹೊಲದ ಹತ್ತಿರ ಮೇಯಿಸಲು ಬಿಟ್ಟು, ರಸ್ತೆ ಬದಿಯಲ್ಲಿ ಮನೆಗೆ ಹಿಂತಿರುವಾಗ ಈ ದುರ್ಘಟನೆ ಸಂಭವಿಸಿದೆ. ಹೃತಿಕ್ ಮರಣೋತ್ತರ ಪರೀಕ್ಷೆಯನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಘಟನೆ ಕುರಿತು ಬೈಲಕುಪ್ಪೆ ಪೋಲಿಸ್ ಠಾಣೆ ಸಬ್‍ ಇನ್ ಸ್ಪೆಕ್ಟರ್ ದೂರು ದಾಖಲಿಸಿಕೊಂಡಿದ್ದು, ವಾಹನ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mobile theft, assault, accident..crime incidents reported in Mysuru
Please Wait while comments are loading...