ಸಹಸ್ರಾರು ಭಕ್ತರ ಸಮಾಗಮದಲ್ಲಿ ನಂಜನಗೂಡು ರಥೋತ್ಸವ

By: ಬಿ.ಎಂ.ಲವಕುಮಾರ್
Subscribe to Oneindia Kannada

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲೀಗ ಪಂಚ ಮಹಾರಥೋತ್ಸವದ ಸಂಭ್ರಮ. ಹಾಗಾಗಿ ಎಲ್ಲೆಡೆಯಿಂದ ಭಕ್ತ ಸಾಗರವೇ ನಂಜನಗೂಡಿಗೆ ಹರಿದು ಬರತೊಡಗಿದೆ. ಮೈಸೂರಿನಿಂದ ಸುಮಾರು 25ಕಿ.ಮೀ ದೂರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ.

ಈ ಜಾತ್ರೆಯು ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಉತ್ತಮ ಲಗ್ನದಲ್ಲಿ ನಡೆಯುತ್ತದೆ. ಪ್ರಸಕ್ತ ವರ್ಷ ಮಾರ್ಚ್ 21ರಂದು ಬೆಳಿಗ್ಗೆ 6.08 ರಿಂದ 6.30ರೊಳಗೆ ಶ್ರೀಕಂಠೇಶ್ವರ ಪಂಚರಥೋತ್ಸವ ನಡೆಯಲಿದೆ. ತೆಪ್ಪೋತ್ಸವವು ಮಾ.23ರಂದು ಸಂಜೆ 7ಗಂಟೆಗೆ ಕಪಿಲ ನದಿಯಲ್ಲಿ ತೆಪ್ಪೋತ್ಸವವು ನಡೆಯಲಿದೆ.[ಶಿರಸಿ ಮಾರಿಕಾಂಬಾ ಜಾತ್ರೆಗೆ ಎಲ್ಲರೂ ಬನ್ನಿ]

Thounsands of devotees witness Nanjangud Rathotsava

ಗೌತಮರಥ ಪ್ರಮುಖ ಆಕರ್ಷಣೆ:

ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ. ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿರಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.[ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ನುಡಿದ ಭವಿಷ್ಯವಾಣಿ]

ಮುಗಿಲು ಮುಟ್ಟುವ ಘೋಷಣೆ:

ರಥೋತ್ಸವದ ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ದವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ರಾಜಗೋಪುರಕ್ಕೆ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

thounsands-of-devotees-witness-nanjangud-rathotsava

ಎಲ್ಲೆಡೆ ಸಂಭ್ರಮ:

ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಂಚರಥೋತ್ಸವಕ್ಕೆ ಇಡೀ ನಂಜನಗೂಡು ಪಟ್ಟಣವೇ ತಳಿರು ತೋರಣಗಳಿಂದ ಅಲಂಕಾರಗೊಂಡು ನವವಧುವಿನಂತೆ ಕಂಗೊಳಿಸಿದರೆ, ಮನೆಮನೆಗಳಲ್ಲಿ ಹಬ್ಬದ ವಾತಾವರಣ ನೆಲೆಸುತ್ತದೆ.[ಮೈಸೂರಿನ ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ]

ರಥೋತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳು ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲು ಮುಂದಾಗಿವೆ. ತನ್ನದೇ ಆದ ಇತಿಹಾಸ ಪರಂಪರೆ ಹೊಂದಿರುವ ನಂಜನಗೂಡಿನ ಪಂಚರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಶ್ರೀಕಂಠನ ಕೃಪೆಗೆ ಪಾತ್ರರಾಗಲು ಬನ್ನಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thounsands of devotees witness Nanjangu Rathotsava. Rathotsava will be started on Monday, March 21st
Please Wait while comments are loading...