ಮೋದಿ ಕಾರಿಗೆ ಅಡ್ಡ ಬಂದವನು ಯಾರು ಗೊತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 04 : ಮೈಸೂರಿನ ಮಹಾರಾಜ ಮೈದಾನದಲ್ಲಿ ಶನಿವಾರ ನಡೆದ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರಿಗೆ ಅಡ್ಡ ಬಂದ ಯುವಕನ ಪ್ರಕರಣ ಭಾರೀ ಸುದ್ದಿಯಾಗಿತ್ತು.

ಹುಡುಗನನ್ನು ಉಗ್ರವಾದಿ ಎಂಬಂತೆ ಬಿಂಬಿಸಿ ಕೆಲವರು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ತಕ್ಷಣವೇ ವಶಕ್ಕೆ ಪಡೆದ ಭದ್ರತಾಪಡೆ ವಿಚಾರಣೆ ನಡೆಸಿ ಆತ ಮೋದಿ ಅಭಿಮಾನಿ ಎಂಬುದು ಖಚಿತಪಡಿಸಿಕೊಂಡು ಬಿಟ್ಟು ಕಳಿಸಿತ್ತು.

ಇದಾದ ನಂತರ ಮೈಸೂರಿನ ಲಕ್ಷ್ಮಿಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಬಗ್ಗೆ ಇನ್ನೊಂದಷ್ಟು ಮಾಹಿತಿಗಳು ಲಭ್ಯವಾಗಿವೆ. ಆತ ಪ್ರತಿಭಾವಂತ ವಿದ್ಯಾರ್ಥಿ ಅಷ್ಟೇ ಅಲ್ಲ ಮೋದಿಯ ಅಪ್ಪಟ ಅಭಿಮಾನಿ. ತಾನು ಸಿದ್ದಪಡಿಸಿದ್ದ ಪ್ರಾಜೆಕ್ಟ್‌ನ್ನು ಮೋದಿ ಅವರಿಗೆ ನೀಡಲು ಈ ತಂತ್ರ ರೂಪಿಸಿದ್ದ ಎನ್ನುವುದು ಈಗ ಗೊತ್ತಾಗಿರುವ ಸತ್ಯ. [ನರೇಂದ್ರ ಮೋದಿ ಭಾಷಣ, ಸಿದ್ದುಗೆ ನಿದ್ದೆಯೇ ಭೂಷಣ!]

The person who came in the way of Narendra Modi in Mysuru

ಮೈಸೂರು ನರಸೀಪುರ ರಸ್ತೆಯಲ್ಲಿರುವ ವರಕೋಡು ಗೇಟ್ ನಿವಾಸಿ ಕಿಶೋರ್ ಹಾಗೂ ಸುನೀತಾ ದಂಪತಿಗಳ ಮಗನಾದ ಈತನ ಹೆಸರು ವಿನಯ್(19). ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ವಿನಯ್‌ಗೆ ಏನಾದರೊಂದು ಮಾಡಬೇಕೆಂಬ ಬಯಕೆ. ಮೋದಿಯ ಅಭಿಮಾನಿಯಾಗಿದ್ದು ಅವರ ಭಾಷಣ ಕೇಳುವುದೆಂದರೆ ಎಲ್ಲಿಲ್ಲ ಪ್ರೀತಿ.

ಈ ನಡುವೆ ಈತ 'ಕಾನ್ಸೆಪ್ಟ್ ಆಫ್ ಗ್ರೀನ್' ಎಂಬ ಪ್ರಾಜೆಕ್ಟ್ ತಯಾರಿಸಿದ್ದು ಅದನ್ನು ಮೋದಿ ಅವರಿಗೆ ತೋರಿಸಬೇಕೆಂಬ ಅದಮ್ಯ ಬಯಕೆ ಹೊಂದಿದ್ದನಂತೆ. ಆದರೆ ಆತನಿಗೆ ಮಾರ್ಗದರ್ಶನದ ಕೊರತೆಯಿಂದಾಗಿ ಪ್ರಧಾನಿಗೆ ತನ್ನ ಪ್ರಾಜೆಕ್ಟ್ ತೋರಿಸುವ ಮಾರ್ಗ ತಿಳಿಯದೆ ಅಡ್ಡದಾರಿ ಹಿಡಿದು ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.

ಮಗ ಮಾಡಿರುವುದು ತಪ್ಪು ಆದ್ದರಿಂದ ಅವನನ್ನು ಕ್ಷಮಿಸಿ ಎಂಬುದಾಗಿ ಹೆತ್ತವರು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. [ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]

ವಿನಯ್ ಹಿಂದೆ ವರಕೋಡು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಲ್ಲಿನ ಸಮಸ್ಯೆಗಳನ್ನು ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಬರೆದು ಗಮನಸೆಳೆದಿದ್ದನು. ಅವನ ಪತ್ರಕ್ಕೆ ಮನ್ನಣೆ ನೀಡಿ ದಿಢೀರ್ ಭೇಟಿ ನೀಡಿದ ಸಿದ್ದರಾಮಯ್ಯನವರು ವಾರ್ಡನ್‌ನ ಅಮಾನತು ಮಾಡಲು ಶಿಫಾರಸ್ಸು ಮಾಡಿದ್ದರಂತೆ. ಒಟ್ಟಾರೆ ಪ್ರತಿಭಾವಂತನಾಗಿದ್ದ ವಿನಯ್ ಹುಚ್ಚು ಆವೇಶದಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗಿ ಸಂಕಷ್ಟಪಡುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The young student who came in the way of Narendra Modi, when he was in Mysuru to inaugurate Indian Science Congress, is not a terrorist, but a talented student. The student Vinay (19) wanted to show his project work to prime minister Narendra Modi, but got into trouble.
Please Wait while comments are loading...