ಬೋನು ಇಟ್ರೆ ಚಿರತೆ ಹಿಡಿಯೋರು ಯಾರು: ನಂಜನಗೂಡು ರೈತರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ, 20: ರೈತರ ಸಾಕುಪ್ರಾಣಿಗಳನ್ನು ತಿನ್ನುತ್ತಿದ್ದ ಚಿರತೆ ಹಿಡಿಯಲು ತಂದಿರಿಸಿದ ಬೋನು ಇಟ್ಟಲ್ಲೇ ತುಕ್ಕು ಹಿಡಿಯುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮರಳಿ ಬಂದೇ ಇಲ್ಲ. ನಂಜನಗೂಡು ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಚಿರತೆ ಮಾತ್ರ ಯಾವುದೇ ಭಯವಿಲ್ಲದೆ ತನ್ನ ಆಟಾಟೋಪ ಮುಂದುವರೆಸಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ಚಿರತೆ ರೈತರ ಕೊಟ್ಟಿಗೆಗೆ ನುಗ್ಗಿ ಕರುಗಳನ್ನು ತಿಂದು ಹಾಕುತ್ತಿದೆ. ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಗಳನ್ನು ಹೊತ್ತೊಯ್ಯುತ್ತಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.[ಚಿರತೆ ಸಂತತಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ]

Nanjangud

ಈ ಹಿಂದೆಯೇ ಚಿರತೆ ಗ್ರಾಮದಲ್ಲಿ ಇರುವ ಬಗ್ಗೆ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹೆಜ್ಜೆ ಗುರುತನ್ನು ಪತ್ತೆಹಚ್ಚಿ ದೃಢಪಡಿಸಿದ್ದರು. ಬಳಿಕ ಚಿರತೆಯನ್ನು ಸೆರೆ ಹಿಡಿಯಲು ಬೋನೊಂದನ್ನು ಯಶವಂತಪುರ ಗ್ರಾಮಕ್ಕೆ ತಂದು ಬಸ್ ನಿಲ್ದಾಣದ ಮುಂಭಾಗವಿರುವ ಜಮೀನಲ್ಲಿ ಇಟ್ಟಿದ್ದರು.

ಬೋನ್ ಇಟ್ಟು ವಾರವೇ ಕಳೆದರೂ ಅರಣ್ಯ ಸಿಬ್ಬಂದಿ ಮಾತ್ರ ಬಂದಿಲ್ಲ. ಕೇವಲ ಬೋನಿಟ್ಟ ತಕ್ಷಣ ಅದರೊಳಗೆ ಬಂದು ಚಿರತೆ ಮಲಗುವುದಿಲ್ಲ. ಅದರಲ್ಲಿ ನಾಯಿಯನ್ನೋ ಮೇಕೆಯನ್ನೋ ಕಟ್ಟಬೇಕು. ಅಷ್ಟೇ ಅಲ್ಲ ಕಾದು ಕೂರಬೇಕು ಆದರೆ ಈ ಯಾವ ಕೆಲಸವನ್ನು ಮಾಡದೆ ನೆಪಮಾತ್ರಕ್ಕೆ ಬೋನಿಟ್ಟು ಹೋಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.[ಮದುವೆ ಮನೆಯಿಂದ ವರ ಓಡಿಹೋದ, ಏಕೆ ಗೊತ್ತೆ..?]

ಗ್ರಾಮವು ಕಾಡಂಚಿನ ಸಮೀಪವಿರುವ ಕಾರಣ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಇತ್ತೀಚಿನ ಕೆಲವು ದಿನಗಳಿಂದ ಚಿರತೆ ಕಾಟ ಆರಂಭವಾಗಿದೆ. ಪ್ರಾಣಿಗಳನ್ನು ಹೊತ್ತೊಯ್ಯುವ ಚಿರತೆ ಮನುಷ್ಯರನ್ನು ಬಿಡುತ್ತದೆಯೇ ದಯವಿಟ್ಟು ಸೆರೆ ಹಿಡಿಯಿರಿ ಎಂದು ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysore: The leopards of Yashavantapura Village, Nanjangud Taluk life and death question to villagers. Leopards caught and murdered many cow, dogs.
Please Wait while comments are loading...