ಸಂಪರ್ಕ ಬೆಸೆದ ತೆಪ್ಪದಕಂಡಿಯ ತೂಗುಸೇತುವೆಯ ಕಂಡೆಯಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 02 : ಒಂದು ಕಾಲದಲ್ಲಿ ಕಾವೇರಿ ನದಿ ಉಕ್ಕಿಹರಿಯಿತೆಂದರೆ ಮೈಸೂರು ಮತ್ತು ಕೊಡಗಿನ ಗಡಿಭಾಗ ತೆಪ್ಪದಕಂಡಿಯ ಜನರು ಸಂಪರ್ಕ ಕಳೆದುಕೊಂಡು ಪರದಾಡಬೇಕಿತ್ತು. ನದಿ ದಾಟಿ ದಡ ಸೇರಬೇಕಾದವರು ಹತ್ತಾರು ಕಿ.ಮೀ. ಸುತ್ತಿಬಳಸಿ ತೆರಳಬೇಕಾಗಿತ್ತು.

ಬೇಸಿಗೆಯ ದಿನಗಳಲ್ಲಿ ತೆಪ್ಪ, ಪಾಂಡಿಯ ಮೂಲಕ ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳುತ್ತಿದ್ದವರು, ಮಳೆಗಾಲ ಆರಂಭವಾಗಿ ಕಾವೇರಿ ಉಕ್ಕಿಹರಿದಾಗ ಆತಂಕಕ್ಕೀಡಾಗಿ ಬಿಡುತ್ತಿದ್ದರು. ಮೈಸೂರು ಭಾಗದಿಂದ ಕೊಡಗಿನತ್ತ ಕೆಲಸಕ್ಕೆ ತೆರಳಬೇಕಾದ ಜನ ಮತ್ತು ಶಾಲೆಗೆ ತೆರಳಬೇಕಾದ ಮಕ್ಕಳು ನದಿದಾಟಲಾಗದೆ ಮನೆಯಲ್ಲೇ ಉಳಿಯುಂತಾಗಿತ್ತು. [ಕೊಡಗಿನ ಹಾರಂಗಿ, ಚಿಕ್ಲಿಹೊಳೆ ಜಲಾಶಯಗಳಲ್ಲಿ ಜೀವಕಳೆ!]

Teppadakandi hanging bridge connects Mysuru with Kodagu

ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡುತ್ತಾ ಬರುತ್ತಿದ್ದರೂ ಸರ್ಕಾರದಿಂದ ಯಾವುದೇ ರೀತಿಯ ಭರವಸೆ ದೊರೆಯದಿದ್ದಾಗ ತೆಪ್ಪದಕಂಡಿಯ ಜನ ತಮಗೆ ಬವಣೆ ತಪ್ಪಿದಲ್ಲ ಎಂದು ಗೊಣಗುತ್ತಾ ದಿನಕಳೆಯ ತೊಡಗಿದ್ದರು.

ಈ ವ್ಯಾಪ್ತಿಯಲ್ಲಿ ಹೆಚ್ಚಿನ ಜನರು ಕೂಲಿಕಾರ್ಮಿಕರಾಗಿದ್ದು, ಮೈಸೂರಿನ ಕೊಪ್ಪದಿಂದ ತೆಪ್ಪದಕಂಡಿ ಮೂಲಕ ಕೊಡಗಿನತ್ತ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಾರೆ. ಕೊಡಗು ಮತ್ತು ಮೈಸೂರು ಜಿಲ್ಲೆಯನ್ನು ಕಾವೇರಿ ನದಿ ಬೇರ್ಪಡಿಸಿದ್ದು, ನದಿ ದಾಟಿದರೆ ಕೂಗಳತೆಯ ದೂರ. ಆದರೆ ಸುತ್ತಿಬಳಸಿ ತೆರಳುವುದಾದರೆ ಹತ್ತಾರು ಕಿ.ಮೀ. ಸಾಗಬೇಕಾಗುತ್ತದೆ. [ಕೊಡಗಿನಲ್ಲಿ ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ]

Teppadakandi hanging bridge connects Mysuru with Kodagu

ಮೊದಲಿನಿಂದಲೂ ಮರೂರು, ರಾಣಿಗೇಟ್, ದೊಡ್ಡೆಹೊಸೂರು, ದೊಡ್ಡರವೆ ಸೇರಿದಂತೆ ಹಲವು ಗ್ರಾಮಗಳ ಜನರು ಈ ತೆಪ್ಪದಕಂಡಿ ಮೂಲಕವೇ ಸಾಗಬೇಕಾಗಿತ್ತು. ಕೆಲ ವರ್ಷಗಳ ಹಿಂದಿನ ತನಕವೂ ಬಿದಿರಿನ ತೆಪ್ಪ ಬಳಸಿ ಜನ ನದಿದಾಟುತ್ತಿದ್ದರು. ಹೀಗಾಗಿ ಇದನ್ನು ತೆಪ್ಪದಕಂಡಿ ಎಂದೇ ಕರೆಯುವುದು ರೂಢಿಯಾಗಿತ್ತು.

ಕಾಂಕ್ರಿಟ್‌ನ ಸೇತುವೆ ಕಟ್ಟುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಕೋಟ್ಯಂತರೂ ಹಣ ಖರ್ಚಾಗುತ್ತಿತ್ತು. ಕೆಲವೇ ಗ್ರಾಮಗಳ ಅನುಕೂಲಕ್ಕಾಗಿ ಅಷ್ಟೊಂದು ಹಣ ಖರ್ಚು ಮಾಡಿ ಸೇತುವೆ ನಿರ್ಮಾಣ ಮಾಡಲು ಸರ್ಕಾರ ತಯಾರಿರಲಿಲ್ಲ. ಆಗ ಕಡಿಮೆ ಖರ್ಚಿನಲ್ಲಿ ಸಂಪರ್ಕ ನೀಡುವುದು ಹೇಗೆ ಎಂದು ಯೋಚಿಸುತ್ತಿದ್ದವರಿಗೆ ಮೊದಲು ನೆನಪಿಗೆ ಬಂದಿದ್ದು ತೂಗುಸೇತುವೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

Teppadakandi hanging bridge connects Mysuru with Kodagu

ಅವತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸದಾನಂದಗೌಡರಿದ್ದರು. ಅವರ ಪತ್ನಿಯ ತವರು ಕೂಡ ಅದೇ ಭಾಗದಲ್ಲಿದ್ದುದರಿಂದ ಅವರಿಗೆ ಅಲ್ಲಿನ ಸಮಸ್ಯೆಯ ಅರಿವಿತ್ತು. ಹೀಗಾಗಿ ಅವರು ವಿಶೇಷ ಆದ್ಯತೆ ನೀಡಿದರು. ಪರಿಣಾಮ ಸುಳ್ಯದ ಇಂಜಿನಿಯರ್ ಗಿರೀಶ್ ಭಾರಧ್ವಾಜ್ ಅವರ ನೇತೃತ್ವದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲಾಯಿತು. ಈಗ ನದಿ ಉಕ್ಕಿ ಹರಿದರೂ ಜನ ಯಾವುದೇ ಆತಂಕವಿಲ್ಲದೆ ನದಿ ದಾಟಿ ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಾರೆ.

ಇದೀಗ ಕಾವೇರಿ ಉಕ್ಕಿ ಹರಿಯುತ್ತಿರುವುದರಿಂದ ಈ ಸುಂದರ ರಮಣೀಯ ದೃಶ್ಯವನ್ನು ನೋಡಲು ತೂಗುಸೇತುವೆ ಕಡೆಗೆ ಬರುತ್ತಿದ್ದಾರೆ. ಕಾವೇರಿ ನಿಸರ್ಗಧಾಮದಿಂದ ದುಬಾರೆಯತ್ತ ತೆರಳುವವರು, ಅಥವಾ ಇದೆರಡು ಸ್ಥಳಗಳಿಂದ ಕೊಪ್ಪದ ಗೋಲ್ಡನ್ ಟೆಂಪಲ್‌ಗೆ ತೆರಳುವ ಪ್ರವಾಸಿಗರು ಈ ಸೇತುವೆ ಮೂಲಕ ತೆರಳುವುದಾದರೆ ಕೇವಲ 3 ಕಿ.ಮೀ. ದೂರವಷ್ಟೆ. ಇದೀಗ ಈ ತೆಪ್ಪದಕಂಡಿಯ ಜನರು ತಮ್ಮ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಈಗಿನ ನೆಮ್ಮದಿಯ ಬದುಕಿಗೆ ಖುಷಿಪಡುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Few years back whenever Cauvery river overflow during monsoon, the connecting path between Mysuru and Coorg would cut. Now, a hanging bridge has been constructed during the tenure of DV Sadananda Gowda as CM. People at Teppadakandi do not have to take lengthy road to reach Madikeri.
Please Wait while comments are loading...