ಪಿರಿಯಾಪಟ್ಟಣದಲ್ಲಿ ಕೃಷಿಗೆ ಕೆರೆ ನೀರು ಬಳಸದಂತೆ ತಹಸೀಲ್ದಾರ್ ಆದೇಶ!

By: ಬಿಎಂ ಲವಕುಮಾರ್
Subscribe to Oneindia Kannada

ಮೈಸೂರು, ಜುಲೈ 16: ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಆದರೆ ತಮ್ಮ ಊರಿನಲ್ಲಿರುವ ಕೆರೆಯ ನೀರನ್ನು ಮಾತ್ರ ಕೃಷಿ ಬಳಸಿಕೊಳ್ಳುವಂತಿಲ್ಲ. ಬಳಸಿದರೂ ಕ್ರಮ ಕೈಗೊಳ್ತಾರಂತೆ!

ಇದು ನಡೆದಿರುವುದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯಲ್ಲಿ. ಇಲ್ಲಿನ ರೈತರು ಕೆರೆಯಲ್ಲಿದ್ದ ನೀರನ್ನು ಮೋಟಾರ್ ಬಳಸಿ ಮೇಲೆತ್ತಿ ಅದನ್ನು ಕೃಷಿಗೆ ಬಳಸಿಕೊಂಡಿದ್ದರು. ಇದೀಗ ಈ ರೈತರ ಮೋಟಾರ್‍ಗಳನ್ನು ತೆರವುಗೊಳಿಸಿ ನೀರಿನ ದುರ್ಬಳಕೆ ತಡೆದಿದ್ದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Tahsildar orders not to use lake water for farming in Periyapatna

ಈಗಿರುವ ಕೆರೆಯ ನೀರನ್ನು ಕೃಷಿಗೆ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ಜನಜಾನುವಾರುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಯಾರು ಕೂಡ ನೀರನ್ನು ಕೃಷಿ, ಇನ್ನಿತರ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ತಾಲೂಕಿನ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.

ತಹಸೀಲ್ದಾರ್ ಆದೇಶದ ಹಿನ್ನಲೆಯಲ್ಲಿ ಬೆಟ್ಟದಪುರ ಉಪತಹಶಿಲ್ದಾರರಾದ ಕುಬೇರ ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ಆರ್.ಐ.ರಮೇಶ, ವಿ.ಎ.ಶ್ರೀಧರ್, ನಟರಾಜು ಸೇರಿದಂತೆ ಹಲವರು ಬೆಟ್ಟದಪುರ, ಅತ್ತಿಗೋಡು, ಕೊತ್ತವಳ್ಳಿ, ಮೇಲೂರು ಮೊದಲಾದ ಕಡೆ ದಿಢೀರ್ ದಾಳಿ ನಡೆಸಿದ್ದಾರೆ.

ಈ ವೇಳೆ ಮೇಲೂರಿನ ಕೆರೆಯಲ್ಲಿ ಹದಿನಾಲ್ಕು, ಕೊತ್ತವಳ್ಳಿಯ ಕೆರೆಯಲ್ಲಿ ಏಳು ಮೋಟಾರುಗಳನ್ನಿಟ್ಟುಕೊಂಡು ಕೃಷಿ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭ ಅಧಿಕಾರಿಗಳು ಮೋಟಾರುಗಳನ್ನು ಕೆರೆಯಿಂದ ಹೊರಕ್ಕೆ ತೆಗೆಸಿದ್ದಾರೆ.

ಅಷ್ಟೇ ಅಲ್ಲದೆ ಇನ್ನುಮುಂದೆ ಯಾವುದೇ ಕೆರೆಗಳಲ್ಲಿ ಮೋಟಾರು ಅಳವಡಿಸಿ ನೀರನ್ನು ಕೃಷಿಗೆ ಬಳಸುವುದು ತಿಳಿದು ಬಂದರೆ ಮೋಟಾರುಗಳನ್ನು ವಶಪಡಿಸಿಕೊಂಡು, ನೀರಿನ ಬಳಕೆ ಮಾಡುತ್ತಿರುವವರ ವಿರುದ್ದ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರಗಾಲ ತಲೆದೋರಿದ್ದು, ಉಳಿದಿರುವ ಅಲ್ಪ-ಸಲ್ಪ ನೀರನ್ನು ಕೃಷಿಗೆ ಬಳಸಿದರೆ, ಜನ-ಜಾನುವಾರುಗಳಿಗೆ ಮುಂದಿನ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಈಗಿನಿಂದಲೇ ಕೆರೆಯ ನೀರನ್ನು ಉಳಿಸಿಕೊಳ್ಳಬೇಕಿದೆ. ಹೀಗಾಗಿ ಮೋಟಾರ್ ಬಳಸಿ ನೀರನ್ನು ಕೆರೆಯಿಂದ ತೆಗೆದು ಕೃಷಿ ಮಾಡಬೇಡಿ ಎಂದು ಹೇಳುತ್ತಿರುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

H D Kumaraswamy slams State Governemnt in Mysuru | Oneindia Kannada

ಮತ್ತೊಂದೆಡೆ ರೈತರು ನಾವೇನು ಅಪರಾಧ ಮಾಡಿಲ್ಲ. ನಾವು ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ಬೆಳೆ ಬೆಳೆಯದೆ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹೀಗಾಗಿ ಈ ಬಾರಿಯಾದರೂ ಬೆಳೆ ಬೆಳೆದು ಬದುಕೋಣ ಎಂಬ ಉದ್ದೇಶದಿಂದಷ್ಟೆ ಕೆರೆ ನೀರಿನಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದೇವೆ. ಈಗ ಅದು ಕೂಡ ಸಾಧ್ಯವಾಗುತ್ತಿಲ್ಲ. ಹೀಗೆ ಆದರೆ ನಾವು ಬದುಕುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tahsildar orders not to use lake water for farming in Bettadapura of Periyapatna talluk, Mysuru.
Please Wait while comments are loading...