ಮೈಸೂರು ವಿವಿ ಉಪ ಕುಲಪತಿ ಹುದ್ದೆಗೆ ತೀವ್ರ ಪೈಪೋಟಿ, 150 ಅರ್ಜಿಗಳು!

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು,ಜನವರಿ. 19 : ಶತಮಾನವನ್ನು ಪೂರೈಸಿರುವ ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಸ್ಥಾನಕ್ಕೆ ಭಾರಿ ಪೈಪೋಟಿ ಆರಂಭವಾಗಿದ್ದು, ಸುಮಾರು 150ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಉಪ ಕುಲಪತಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಅವರ 4 ವರ್ಷ ಅವಧಿ ಜನವರಿ 10ಕ್ಕೆ ಪೂರ್ಣಗೊಂಡು ಅವರ ನಿವೃತ್ತಿಯಿಂದ ಈ ಸ್ಥಾನ ತೆರವಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಉಪ ಕುಲಪತಿ ಆಯ್ಕೆ ಕಸರತ್ತು ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಸರ್ಕಾರ ಅರ್ಜಿ ಆಹ್ವಾನಿಸಿದೆ.

ಮೂಲಗಳ ಪ್ರಕಾರ ಉನ್ನತ ಶಿಕ್ಷಣ ಇಲಾಖೆಗೆ 150ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸುವ ಅವಧಿ ಜನವರಿ 13 ಕೊನೆಯಾಗಿದ್ದು, ಇನ್ನು ಅರ್ಜಿಗಳ ಪರಿಶೀಲನೆ ನಡೆಯಬೇಕಿದೆ.[ಮೈಸೂರು: ನಾನು ರಾಜಕೀಯ ಪ್ರವೇಶಿಸುವುದಿಲ್ಲ, ಪ್ರೊ.ರಂಗಪ್ಪ]

Sudden rush for the post of mysuru vv Vice chancellor

ಉಪ ಕುಲಪತಿ ಆಯ್ಕೆಗೆ ರಚಿಸಿರುವ ಶೋಧನಾ ಸಮಿತಿ 150ಕ್ಕೂ ಹೆಚ್ಚು ಮಂದಿಯ ಅರ್ಜಿಗಳನ್ನು ಪರಿಶೀಲಿಸಿ ಅವರಲ್ಲಿ ನಾಲ್ವರು ಸಂಭಾವ್ಯರ ಹೆಸರುಗಳನ್ನು ಶಿಫಾರಸು ಮಾಡಬೇಕಿದೆ.

ಸರ್ಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಡಾ.ಎಚ್.ಪಿ.ಕಿಂಚ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಶೋಧನಾ ಸಮಿತಿಯಲ್ಲಿ ರಾಜ್ಯಪಾಲರ ಪ್ರತಿನಿಧಿಯಾಗಿ ಎಂ.ಮುನಿಯಮ್ಮ, ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸೂಚಿಸಿರುವ ಸದಸ್ಯರಾಗಿ ಹರಿ ಗೌತಮ್, ಯುಜಿಸಿ ಪ್ರತಿನಿಧಿಯಾಗಿ ವಿ.ಎಸ್.ಚೌಹಾಣ್ ಇದ್ದಾರೆ.

ಮೈಸೂರು ವಿಶ್ವ ವಿದ್ಯಾನಿಲಯದಿಂದಲೇ ಸುಮಾರು 15ಕ್ಕೂ ಹೆಚ್ಚು ಮಂದಿ ಅವಕಾಶಕ್ಕಾಗಿ ಪ್ರಯತ್ನ ಮಾಡಿದ್ದಾರೆ. ಸಾಹಿತಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ಲೇಖಕ, ವೈಚಾರಿಕ ಚಿಂತಕ ಪ್ರೊ.ಅರವಿಂದ ಮಾಲಗತ್ತಿ,

ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ.ಬಿ.ಕೆ.ತುಳಸಿಮಾಲಾ, ಮೈಸೂರು ವಿವಿ ಕುಲಸಚಿವರಾಗಿ ಕಾರ್ಯನಿರ್ವಹಿಸಿರುವ ಪ್ರೊ.ಸಿ.ಬಸವರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಡಾ.ವಿ. ರವಿಶಂಕರ್ ರೈ, ಡಾ.ಬಿ.ಎಚ್. ಸುರೇಶ್, ಡಾ.ಜಿ. ಕೊಟ್ರೇಶ್ವರ್, ಪ್ರೊ. ಬ.ಸ.ಸುಂದರಯ್ಯ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಇವರಲ್ಲದೆ, ರಾಜ್ಯದ ಇತರ ವಿವಿಗಳ ಅರ್ಹ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ನಿವೃತ್ತ ಪ್ರಾಧ್ಯಾಪಕರುಗಳೂ ಅರ್ಜಿ ಸಲ್ಲಿಸಿದ್ದು, ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಮಲ್ಲಿಕಾ ಎಸ್.ಘಂಟಿ ಅವರು ಮೈಸೂರು ವಿವಿ ಉಪ ಕುಲಪತಿ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.

ಕೆಲವರು ನೇರವಾಗಿ ಉನ್ನತ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿರುವುದರಿಂದ ಇನ್ನು ಯಾರು ಯಾರು ಆಕಾಂಕ್ಷಿಗಳಾಗಿದ್ದಾರೆ ಎಂಬ ಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಶೋಧನಾ ಸಮಿತಿ ಮುಂದಿನ ವಾರ ಸಭೆ ಸೇರಲಿದ್ದು, ಅರ್ಜಿಗಳನ್ನು ಪರಿಶೀಲಿಸಿ ನಾಲ್ವರ ಹೆಸರುಗಳನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಿದೆ. ಅರ್ಜಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಭೆ 2ರಿಂದ 3 ದಿನಗಳವರೆಗೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over 150 academicians, including 15 more from the University of Mysore, have applied for the post of Vice Chancellor of the prestigious university.
Please Wait while comments are loading...