ವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 16: ಅರಮನೆಗಳ ನಗರಿ ಎಂದೇ ಪ್ರಸಿದ್ಧವಾಗಿರುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು ಈ ಅಂಬಾ ವಿಲಾಸ ಅರಮನೆ.

ಕರುನಾಡ ಹೆಮ್ಮೆಯ ರಾಜಮನೆತನಗಳಲ್ಲಿ ಮೈಸೂರು ಒಡೆಯರ ವಂಶವೂ ಒಂದು. ಕರ್ನಾಟಕದ ಇಂದಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆಗಳ ನಗರಿ ಎಂದು ಖ್ಯಾತವಾಗಿದ್ದೇ ಒಡೆಯರ ಕಾಲದಲ್ಲಿ.

ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ!

ಮೈಸೂರು ದಸರೆಯಷ್ಟೇ ಮೈಸೂರು ಅರಮನೆಯೂ ವಿಶ್ವವಿಖ್ಯಾತ. ಕರುನಾಡ ನೆಲದಲ್ಲಿ ಕಟ್ಟಲಾದ ಇತ್ತೀಚಿನ ಅರಮನೆ ಎಂಬ ಖ್ಯಾತಿಯೂ ಇದಕ್ಕಿದೆ. ಭಾರತೀಯ ಸಾಂಪ್ರದಾಯಿಕ ವಾಸ್ತುಶಿಲ್ಪದಿಂದ ಒಡಮೂಡಿದ ಈ ಸುಂದರ ಸೌಧ, ಬ್ರಿಟಿಷರು ಭಾರತದಲ್ಲಿ ಬಲವಾದ ಹಿಡಿತ ಹೊಂದಿದ್ದ ಕಾಲದಲ್ಲಿ ಹಾಗೂ ಆಧುನಿಕತೆಯ ಗಾಳಿ ಬೀಸುತ್ತಿದ್ದ ಕಾಲದಲ್ಲಿ ನಿರ್ಮಾಣವಾದ ಭವ್ಯ ಬಂಗಲೆ.

ನಿರ್ಮಾಣದ ಹಿಂದೆ ವೈಭವದ ಕಥೆ

ನಿರ್ಮಾಣದ ಹಿಂದೆ ವೈಭವದ ಕಥೆ

ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಅಂಬಾವಿಲಾಸ ಅರಮನೆಯನ್ನು ಕಲ್ಲಿನಲ್ಲಿ ಕಟ್ಟಲಾಗಿದೆ. ಮೂರು ಮಹಡಿಗಳಿರುವ ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ. ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ.

ಮೈಸೂರು ಸಂಸ್ಥಾನ 1399 ರಿಂದ 1947 ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ 'ಒಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು. ಒಡೆಯರ್ ಅರಸರು 14 ನೆಯ ಶತಮಾನದಲ್ಲಿಯೇ ಮೈಸೂರಿನಲ್ಲಿ ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು.

1912ರಲ್ಲಿ ಎದ್ದುನಿಂತ ಈಗಿನ ಅರಮನೆ

1912ರಲ್ಲಿ ಎದ್ದುನಿಂತ ಈಗಿನ ಅರಮನೆ

ಆದರೆ 18ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ 1793 ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. 1803ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ 1897 ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಇನ್ನು ಇದೇ ವರುಷದಲ್ಲಿ ಈಗ ಇರುವ ಅಂಬಾವಿಲಾಸ ಅರಮನೆ ಕಟ್ಟಲು ಆರಂಭಿಸಿ 1912 ರಲ್ಲಿ ಅರಮನೆ ನಿರ್ಮಾಣ ಕಾರ್ಯ ಸಂಪೂರ್ಣವಾಯಿತು.

ಶತಮಾನಗಳ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್

ತಜ್ಞರಿಂದ ನೀಲನಕ್ಷೆ

ತಜ್ಞರಿಂದ ನೀಲನಕ್ಷೆ

72 ಎಕರೆ ಪ್ರದೇಶದಲ್ಲಿ ಹಿಂದೂ, ಇಸ್ಲಾಮಿಕ್ ಹಾಗೂ ಪಾಶ್ಚಿಮಾತ್ಯ ವಾಸ್ತುಶೈಲಿಯ ಸಮ್ಮಿಲನದಿಂದ ವೇಸರ (ಇಂಡೋ ಸಾರ್‌ಸಾನಿಕ್) ಶೈಲಿಯಲ್ಲಿ ಮೈಸೂರು ಅರಮನೆ ಸುಂದರವಾಗಿ ಮೈದಳೆಯಿತು. ಮೈಸೂರು ಸಂಸ್ಥಾನದ ಆಳ್ವಿಕೆಯ ಹೊಣೆಯನ್ನು ಹೊತ್ತಿದ್ದ ವಾಣಿವಿಲಾಸ ಸನ್ನಿಧಾನ ಬಿರುದಾಂಕಿತರಾದ ಕೆಂಪನಂಜಮ್ಮಣ್ಣಿಯವರು ಅರಮನೆ ನಿರ್ಮಾಣದ ದಿಟ್ಟ ನಿರ್ಧಾರ ತಳೆದರೆಂಬುದು ವಿಶೇಷ ಅಂಶ.

ಈ ಅರಮನೆಗೆ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ನಕಾಶೆ ತಯಾರಿಸಿದರೆಂದು ಇತಿಹಾಸ ಹೇಳುತ್ತದೆ. ಈ ವಾಸ್ತು ವಿನ್ಯಾಸಕ್ಕಾಗಿ ಆತ ಆಗಿನ ಕಾಲದಲ್ಲೇ 12 ಸಾವಿರ ರೂ.ಗಳನ್ನು ವಾಸ್ತುಶುಲ್ಕವಾಗಿ ಪಡೆದಿದ್ದನಂತೆ. ಅರಮನೆ ನಿರ್ಮಾಣಕ್ಕೆ ಮುನ್ನ ಚಿತ್ರಕಲಾವಿದರನ್ನು ಅಧ್ಯಯನಾರ್ಥ ಯುರೋಪ್ ರಾಷ್ಟ್ರಕ್ಕೆ ಹಾಗೂ ಭಾರತದ ಹೆಸರಾಂತ ಹಳೆಬೀಡು, ಬೇಲೂರು, ತಂಜಾವೂರು, ಮಧ್ಯಪ್ರದೇಶ, ಜಯಪುರ ಸೇರಿದಂತೆ ವಿವಿಧೆಡೆಗೆ ಕಳುಹಿಸಲಾಗಿತ್ತು.

ಅರಮನೆ ನಗರಿ ಎಂಬ ಹೆಸರು ಬಂದಿದ್ದೇ ಇದದರಿಂದ!

ಅರಮನೆ ನಗರಿ ಎಂಬ ಹೆಸರು ಬಂದಿದ್ದೇ ಇದದರಿಂದ!

ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲಿರುವ ಗಜಲಕ್ಷ್ಮಿಯ ಶಿಲ್ಪ ಹೃದಯಂಗಮವಾಗಿದೆ. ಮೈಸೂರಿಗೆ ಅರಮನೆಗಳ ನಗರಿ ಎಂದು ಹೆಸರು ಬರಲು ಮೂರು ಅಂತಸ್ತಿನ ಈ ಭವ್ಯ ಸೌಧದ ಕೊಡುಗೆ ಅಪಾರ. ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು, ಸುಂದರ ಶಿಲ್ಪದ ಪ್ರವೇಶದ್ವಾರದ ನೋಟವೇ ಒಂದು ಸೊಬಗು.

ಮೈಸೂರು ಸಿಲ್ಕ್ ಸೀರೆ ಹಿಂದಿದೆ ಕುತೂಹಲಕಾರಿ ಕಥೆ

ಅರಮನೆಯ ವಿಶೇಷತೆ

ಅರಮನೆಯ ವಿಶೇಷತೆ

ರಾಜರುಗಳು ದರ್ಬಾರು ನಡೆಸುತ್ತಿದ್ದ, ದರ್ಬಾರ್ ಹಾಲ್, ದಿವಾನ್-ಇ-ಆಮ್ ಕಲ್ಯಾಣ ಮಂಟಪ, ಗೊಂಬೆ ತೊಟ್ಟಿ ಇವುಗಳು ಇತಿಹಾಸವನ್ನು ಸಾರುತ್ತವೆ. ಕಲ್ಯಾಣ ಮಂಟಪದ ಗೋಡೆಯ ಮೇಲೆ ಬರೆದಿರುವ ಚಿತ್ತಾರಗಳು, ತೈಲವರ್ಣದ ಕಲಾಕೃತಿಗಳು ಹಿಂದಿನ ಕಾಲದ ಮೆರವಣಿಗೆ ಮತ್ತು ದಸರಾದ ಭವ್ಯತೆಯನ್ನು ಬಿಂಬಿಸುತ್ತವೆ. ಗೊಂಬೆತೊಟ್ಟಿಯಲ್ಲಿ ಹಳೆಯ ಸಾಂಪ್ರದಾಯಿಕ ಗೊಂಬೆಗಳಿವೆ. ಆಗ ಅರಸೊತ್ತಿಗೆಯ ಮಂದಿಯನ್ನೊಯ್ಯಲು ಬಳಸುತ್ತಿದ್ದ 84 ಕೆಜಿ ಚಿನ್ನದ ಕುಸುರಿಯಿಂದ ಅಲಂಕರಿಸಿರುವ ಮರದ ಅಂಬಾರಿ ಇಲ್ಲಿದೆ.

ಆಯುಧ ಶಾಲೆ

ಆಯುಧ ಶಾಲೆ

ಅರಮನೆಯಲ್ಲಿರುವ ಬೇರೆಲ್ಲ ಕೋಣೆಯದ್ದು ಒಂದು ತೂಕವಾದರೆ, ಆಯುಧಶಾಲೆಯದ್ದೇ ಒಂದು ತೂಕ. ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಆಯುಧಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. 14ನೆ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರನಖ ಮುಂತಾದ ಆಯುಧಗಳ ತಾಳಕ್ಕೆ 20ನೆಯ ಶತಮಾನದ ಪಿಸ್ತೂಲುಗಳು, ಬ೦ದೂಕುಗಳ ಮೇಳವಿದೆ.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ವಜ್ರಮುಷ್ಠಿ

ವಜ್ರಮುಷ್ಠಿ

ಒಡೆಯರ್ ವ೦ಶದ ಪ್ರಸಿದ್ಧ ಅರಸು ರಣಧೀರ ಕ೦ಠೀರವ ಅವರು ಉಪಯೋಗಿಸಿದ್ದ ಖಡ್ಗಗಳಲ್ಲಿ ಒ೦ದಾದ 'ವಜ್ರಮುಷ್ಠಿ' ಇಲ್ಲಿದೆ. ಮೈಸೂರು ಹುಲಿ ಟಿಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳು ಕೂಡ ಇಲ್ಲಿವೆ. ಅರಮನೆಯ ಆವರಣದಲ್ಲಿ 12 ದೇವಾಲಯಗಳಿವೆ. ಇವುಗಳಲ್ಲಿ ಸೋಮೇಶ್ವರ ಮತ್ತು ಲಕ್ಷ್ಮೀರಮಣ ದೇವಾಲಯಗಳು ಸುಪ್ರಸಿದ್ಧ. 14ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಡಿಭೈರವನ ದೇವಾಲಯ ಅತ್ಯಂತ ಪುರಾತನವಾಗಿದೆ.

ಆ ಸೊಬಗು ಬಲ್ಲವನೇ ಬಲ್ಲ!

ಆ ಸೊಬಗು ಬಲ್ಲವನೇ ಬಲ್ಲ!

ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯ. ಮೈಸೂರು ಅರಸರ ಕಾಲದ ಗತ ವೈಭವನ್ನು ಕಣ್ಣಲ್ಲಿ ತುಂಬಿಕೊಂಡಷ್ಟೂ ತುಳುಕುತ್ತದೆ. ನೋಡಿದಷ್ಟೂ ಮುಗಿಯುವುದಿಲ್ಲ. ಮತ್ತೆ ಮತ್ತೆ ಕಣ್ಮನ ಸೆಳೆಯುತ್ತದೆ ಅಂಬಾ ವಿಲಾಸ ಅರಮನೆ. ಮೈಸೂರು ಅರಮನೆಯು 97ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಕಂಗೊಳಿಸುವಾಗ ಸೊಬಗು ಬಲ್ಲವನೇ ಬಲ್ಲನೇನೋ! ಮೊದಲೇ ಸುಂದರವಾಗಿರುವ ಮೈಸೂರು ಅರಮನೆಗೆ ಮತ್ತಷ್ಟು ಶೋಭೆ ಬಂದದ್ದು ರಾಜಾ ರವಿವರ್ಮನ ಚಿತ್ರಗಳಿಂದ. ಖ್ಯಾತ ಶಿಲ್ಪಿ ವೆಂಕಟಪ್ಪನವರ ಕೊಡುಗೆಯೂ ಅರಮನೆಗೆ ಅಪಾರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Palace of Mysore is a historical palace in the city of Mysore. It is the official residence and seat of the Wodeyars and rulers, the royal family of Mysore. The architectural style of domes of the palace is commonly described as Indo-Saracenic and blends Hindu, Muslim, Rajput, and Gothic styles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ