ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಲು ಶ್ರೀನಿವಾಸ ಪ್ರಸಾದ್ ಸಜ್ಜು

By: ಮೈಸೂರು ಪ್ರತಿನಿಧಿ
Subscribe to Oneindia Kannada

ನಂಜನಗೂಡು, ನವೆಂಬರ್ 3: ಈಗಾಗಲೇ ನಂಜನಗೂಡಿನಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ತಮ್ಮ ಪ್ರಾಬಲ್ಯ ತೋರಿಸಿದ ಕೈಪಕ್ಷದ ನಾಯಕರು, ನಮ್ಮನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಂಜನಗೂಡನ್ನು ನಾನಾಗಿದ್ದರೆ ಸಿಂಗಾಪುರ ಮಾಡುತ್ತಿದ್ದೆ. ಶ್ರೀನಿವಾಸಪ್ರಸಾದ್ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂಬ ಮತ್ತೊಂದು ಟೀಕೆಯನ್ನು ಮಾಡಿದರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ನಂಜನಗೂಡಿನಲ್ಲಿ ಪುತ್ರ ಸುನಿಲ್ ಬೋಸ್ ನನ್ನು ಅಖಾಡಕ್ಕಿಳಿಸುವ ಪ್ರಯತ್ನವೂ ನಡೆಯುತ್ತಿದೆ.

ಶೀಘ್ರವೇ ಚುನಾವಣೆ: ಶ್ರೀನಿವಾಸ ಪ್ರಸಾದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಶೀಘ್ರವೇ ನಡೆಯಲಿದ್ದು, ಕೆಲವು ರಾಜಕೀಯ ಮೂಲಗಳ ಪ್ರಕಾರ ಸುನಿಲ್ ಬೋಸ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲ, ಹೇಗಾದರೂ ಮಾಡಿ ಗೆಲುವು ಸಾಧಿಸಿ ಶ್ರೀನಿವಾಸ ಪ್ರಸಾದ್ ಅವರನ್ನು ಮೂಲೆಗುಂಪು ಮಾಡಬೇಕೆನ್ನುವ ಇರಾದೆಯೂ ಇದೆ.[ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ ಶ್ರೀನಿವಾಸ ಪ್ರಸಾದ್]

Srinivasa Prasad preparing to retaliate siddaramaiah

ಇದಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಟೊಂಕ ಕಟ್ಟಿ ನಿಂತಿದ್ದಾರೆ. ಇಡೀ ರಾಜ್ಯದ ಆಡಳಿತ ಇಲ್ಲಿ ಬಂದು ಕಾರ್ಯ ನಿರ್ವಹಿಸುವುದರಲ್ಲಿ ಅಚ್ಚರಿಯಿಲ್ಲ. ಏಕೆಂದರೆ, ಸಮಾವೇಶದಲ್ಲಿ ನಾನು ನಿಮ್ಮಿಂದ ಗೆದ್ದಿದ್ದೇನೆ. ಶ್ರೀನಿವಾಸಪ್ರಸಾದ್ ಅವರಿಂದಲ್ಲ ಎಂದು ರಾಜಾರೋಷವಾಗಿ ಮಾತನಾಡಿರುವ ಮುಖ್ಯ ಮಂತ್ರಿಗಳಿಗೆ ನಂಜನಗೂಡು ಉಪಚುನಾವಣೆ ಪ್ರತಿಷ್ಠೆ ಪ್ರಶ್ನೆಯಾಗಿದೆ.

ಜಿದ್ದಾಜಿದ್ದಿ: ಇದೊಂದು ರೀತಿ ಸಿದ್ದರಾಮಯ್ಯ ಮತ್ತು ಶ್ರೀನಿವಾಸ ಪ್ರಸಾದ್ ನಡುವಿನ ಜಿದ್ದಾಜಿದ್ದಿ. ಗೆಲುವಿಗಾಗಿ ಬೇಕಾದ ಎಲ್ಲ ತಂತ್ರಗಳು ಈಗಾಗಲೇ ಆರಂಭವಾಗಿವೆ. ಅದರ ಮೊದಲ ಭಾಗವಾಗಿ ನಂಜನಗೂಡಿನ ಪ್ರಮುಖ ಮುಖಂಡರು ಸೇರಿದಂತೆ ಕಾರ್ಯಕರ್ತರನ್ನು ಕರೆತಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬಾಡೂಟ ಹಾಕಲಾಗಿದೆ. ಇಲ್ಲಿಗೆ ಬಂದು ಊಟ ಮಾಡಿ ಹೋದವರ ಸಂಖ್ಯೆ ಸುಮಾರು ಐದು ಸಾವಿರ.[ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ, ಕಾಂಗ್ರೆಸ್ ಶಕ್ತಿ ಪ್ರದರ್ಶನ]

Srinivasa Prasad preparing to retaliate siddaramaiah

ಇದು ಸುನಿಲ್ ಬೋಸ್ ಅವರ ನೇತೃತ್ವದಲ್ಲೇ ನಡೆದಿದೆ ಎಂದರೆ ಚುನಾವಣೆಗೆ ಯಾವ ರೀತಿಯಲ್ಲಿ ತಯಾರಿ ನಡೆಯುತ್ತಿರಬಹುದು ಎಂಬುದು ಗೊತ್ತಾಗಿ ಬಿಡುತ್ತದೆ. ನಂಜನಗೂಡು ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ತಂತ್ರಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿಯಾದಿಯಾಗಿ ಸಚಿವ ಸಂಪುಟದ ಸಚಿವರು ನಂಜನಗೂಡು ಕ್ಷೇತ್ರಕ್ಕೆ ಭೇಟಿ ನೀಡಿ, ಪ್ರಚಾರ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಗೆಲುವು ನಮ್ಮದೇ ಎಂಬಂತೆ ಬೀಗುತ್ತಿದ್ದಾರೆ.

ಪ್ರತಿತಂತ್ರ: ಮೌನವಾಗಿ ಎಲ್ಲವನ್ನೂ ಗಮನಿಸುತ್ತಿರುವ ಶ್ರೀನಿವಾಸ ಪ್ರಸಾದ್, ಪ್ರತಿತಂತ್ರ ರೂಪಿಸಲು ಸಿದ್ದರಾಗಿದ್ದಾರೆ. ನವೆಂಬರ್ 8ರಂದು ನಂಜನಗೂಡಿನಲ್ಲಿ ಸಮಾವೇಶ ನಡೆಸಲು ತಯಾರಾಗಿದ್ದಾರೆ. ಈಗಾಗಲೇ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ಅವರು ಅಭಿಮಾನಿಗಳ, ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ದಿಟ್ಟ ಉತ್ತರ ನೀಡುವ ಸಂದೇಶ ರವಾನಿಸಿದ್ದಾರೆ.[ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಗುರಿ: ಶ್ರೀನಿವಾಸ ಪ್ರಸಾದ್]

ರಾಜಕೀಯದಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಪದವಿ ಬಿಟ್ಟರೆ ಯಾವುದೇ ವೈಯಕ್ತಿಕ ವರ್ಚಸಿಲ್ಲ. ನನಗೆ ಅವರು ಯಾವುದೇ ರೀತಿಯಲ್ಲೂ ಸಾಟಿಯಲ್ಲ ಎಂದು ಸವಾಲು ಹಾಕಿದ್ದಾರೆ. ಒಂದು ಕಾಲದಲ್ಲಿ ಅಹಿಂದ ಕಟ್ಟಲು ಪ್ರೇರಕ ಶಕ್ತಿಯಾಗಿದ್ದವನು ನಾನು. ಐದು ಬಾರಿ ಗೆದ್ದುದಾಗಿ ತಿಳಿಸುವ ಮುಖ್ಯಮಂತ್ರಿಗಳೇ ಆರನೇ ಬಾರಿ ಗೆಲ್ಲಲು ಯಾರ ಮನೆ ಬಾಗಿಲಿಗೆ ಬಂದಿದ್ದರೆಂದು ನೆನಪು ಮಾಡಿಕೊಳ್ಳಿ ಎಂದಿದ್ದಾರೆ.

ವರುಣಾ ಕ್ಷೇತ್ರಕ್ಕೆ ನಿಮ್ಮನ್ನು ಕರೆತಂದವನು ನಾನು ಎಂಬುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ. ಜತೆಗೆ ಅವತ್ತು ತನ್ನನ್ನು ಟೀಕಿಸಿದವರಿಗೆ ಪ್ರತ್ಯುತ್ತರ ನೀಡುವುದಾಗಿಯೂ ಹೇಳಿದ್ದಾರೆ. ಸಮಾವೇಶದ ಬಳಿಕವಷ್ಟೆ ಸ್ಪಷ್ಟ ಚಿತ್ರಣ ಸಿಗಲಿದೆ. ಯಾವ ರೀತಿ ಪ್ರತ್ಯುತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Srinivasa Prasad, Ex-minister preparing to retaliate Siddaramaiah in Nanjangud election. Srinivasa prasad left the congress party recently. He was in Siddaramaiah cabinet, after he sacked from cabinet, gave resigntion.
Please Wait while comments are loading...