ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ

ತೀವ್ರ ಕುತೂಹಲ ಕೆರಳಿಸಿರುವ ಏ.9 ರ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಕುರಿತ ವಿಶೇಷ ವರದಿ ಇಲ್ಲಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 17 : ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿರುವ ಏಪ್ರಿಲ್ 9 ರ ಉಪಚುನಾವಣೆಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರ ಸಜ್ಜಾದಂತೆ ಕಾಣುತ್ತಿದೆ. ಭೀಕರ ಬರ ಪರಿಸ್ಥಿತಿ ಹಾಗೂ ಬೇಸಿಗೆ ಬಿಸಿಲಿನ ಪ್ರಖರತೆ ನಡುವೆ ಎದುರಾಗಿರುವ ಉಪಚುನಾವಣೆ ಮೆಲ್ಲನೆ ಕಾವು ಪಡೆದುಕೊಳ್ಳುತ್ತಿದೆ.

ನಂಜನಗೂಡು ಉಪ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಇಲ್ಲಿ ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹಾಗೂ ಕಾಂಗ್ರೆಸ್‌ನ ಕಳಲೆ ಎನ್‌. ಕೇಶವಮೂರ್ತಿ ಅವರ ನಡುವೆ ನೇರ ಹಣಾಹಣಿ ನಡೆಯಲಿದೆ,[ನಂಜನಗೂಡು ಉಪಚುನಾವಣೆ: ಪಕ್ಷೇತರರಿಂದ ನಾಮಪತ್ರ ಸಲ್ಲಿಕೆ]

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಬಿಜೆಪಿಗೆ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಬಿಜೆಪಿಗೆ

ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ನಂಜನಗೂಡು ಹಾಗೂ ಹುಲ್ಲಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳು ಬಿಜೆಪಿ ಸೇರಿದ್ದರಿಂದ ಈ ಎರಡೂ ಸ್ಥಾನಗಳು ಖಾಲಿಯಿದ್ದು, ತಗಡೂರು ಬ್ಲಾಕ್‌ನಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಿ ಶ್ರೀನಿವಾಸಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಚುನಾವಣೆ ಎದುರಿಸುತ್ತಿರುವುದರಿಂದ ಎರಡೂ ಪಕ್ಷಗಳಿಗೆ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರಕ್ಕೆ ಹೊಂದಿಕೊಂಡಿರುವ ನಂಜನಗೂಡು ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದರೆ, ಮುಖ್ಯಮಂತ್ರಿ ವಿರುದ್ಧ ತೊಡೆತಟ್ಟಿರುವ ಶ್ರೀನಿವಾಸಪ್ರಸಾದ್ ಅವರಿಗೂ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಉಭಯ ಪಕ್ಷದಲ್ಲೂ ಚಟುವಟಿಕೆ

ಉಭಯ ಪಕ್ಷದಲ್ಲೂ ಚಟುವಟಿಕೆ

ಮುಖ್ಯ ಮಂತ್ರಿಯವರು ನಂಜನಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿಯನ್ನು ತಮ್ಮ ಪರಮಾಪ್ತರಾದ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹಾಗೂ ಸಂಸದ ಆರ್‌. ಧ್ರುವನಾರಾಯಣ ಅವರಿಗೆ ವಹಿಸಿದ್ದಾರೆ. ಇತ್ತ ಶ್ರೀನಿವಾಸಪ್ರಸಾದ್ ಜೊತೆಗೆ ಬಿಜೆಪಿ ಸ್ಥಳೀಯ ಮುಖಂಡರು ಉತ್ಸಾಹದಿಂದ ಓಡಾಡುತ್ತಿದ್ದಾರೆ.[ನಂಜನಗೂಡು ಉಪಚುನಾವಣಾ ಅಕ್ರಮ ತಡೆಗೆ ಬಿಗಿ ಕ್ರಮ]

ಶುರುವಾಗಿದೆ ಭರ್ಜರಿ ಮತಬೇಟೆ:

ಶುರುವಾಗಿದೆ ಭರ್ಜರಿ ಮತಬೇಟೆ:

ಕಾಂಗ್ರೆಸ್‌ ಪರ ಸ್ವತಃ ಮುಖ್ಯಮಂತ್ರಿಯೇ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಉತ್ಸಾಹ ತುಂಬಿ ಹೋಗಿದ್ದರೆ, ಬಿಜೆಪಿ ಪರ ಎರಡು ದಿನಗಳ ಕಾಲ ಪಕ್ಷದ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತಿ ಗ್ರಾಮಪಂಚಾಯ್ತಿ ಕೇಂದ್ರದ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಹುರುಪು ತುಂಬಿ ಹೋಗಿದ್ದಾರೆ. ಮಾಜಿ ಸಚಿವರಾದ ರಾಮದಾಸ್‌, ವಿ.ಸೋಮಣ್ಣ ಹಳ್ಳಿ ಹಳ್ಳಿ ಸುತ್ತಿ ಮತಬೇಟೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಕಚೇರಿ ತೆರೆದಿದ್ದರೆ, ಕಾಂಗ್ರೆಸ್‌ಗೆ ಸದ್ಯ ಕಳಲೆ ಕೇಶವಮೂರ್ತಿಯವರ ಮನೆ ಚುನಾವಣಾ ಕಚೇರಿಯಾಗಿದೆ.

ಅಲ್ಪಸಂಖ್ಯಾತರ ಮತವೇ ಟಾರ್ಗೆಟ್ :

ಅಲ್ಪಸಂಖ್ಯಾತರ ಮತವೇ ಟಾರ್ಗೆಟ್ :

ಕಸಬಾ ಹೋಬಳಿಯ ಬದನವಾಳು, ಚಿನ್ನದಗುಡಿ ಹುಂಡಿ, ವೀರೇಗೌಡನ ಹುಂಡಿ ಹಾಗೂ ಮಹದೇವು ನಗರ ಬಡಾವಣೆ ಒಳಗೊಂಡ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಕುರುಬರು, ದಲಿತರು, ಗಾಣಿಗರು, ಅಲ್ಪ ಸಂಖ್ಯಾತರು ಸೇರಿದಂತೆ ಸಣ್ಣಪುಟ್ಟ ಸಮುದಾಯಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

ಕಾವೇರಿದೆ ಕಣ

ಕಾವೇರಿದೆ ಕಣ

ಈ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳ ಪಕ್ಷ ಬದಲಾಗಿರುವುದರಿಂದ ಸ್ಥಳೀಯವಾಗಿ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಚುನಾವಣೆ ಕಾವೇರಲಿದೆ ಎಂಬುದು ದಟ್ಸ್ ಕನ್ನಡ ಸಮೀಕ್ಷೆ. ಇನ್ನು ನಮ್ಮೊಂದಿಗೆ ಮಾತನಾಡಿದ ಕಳಲೆ ಪಂಚಾಯ್ತಿ ಸದಸ್ಯ ಕುಮಾರ, ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಯಕರು, ದಲಿತರು, ಕುರುಬರು ಹಾಗೂ ತೆಲಗುಶೆಟ್ಟಿ ಜನಾಂಗ ಸೇರಿದಂತೆ 7 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಗುರುವಾರ ಕಳಲೆ ಲಕ್ಷ್ಮೀಕಾಂತ ದೇವರ ಜಾತ್ರೆಯಲ್ಲಿ ಸಂಸದ ಧ್ರುವನಾರಾಯಣ ಹಾಗೂ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಭಾಗಿಯಾಗಿದ್ದರು.

ವಿಶ್ವಾಸ ಗಳಿಕೆ ಯತ್ನ

ವಿಶ್ವಾಸ ಗಳಿಕೆ ಯತ್ನ

ಹೆಡಿಯಾಲ ಪಂಚಾಯ್ತಿ ವ್ಯಾಪ್ತಿಯ 9 ಬೂತ್‌ಗಳಲ್ಲಿ ಮುಸ್ಲಿಮರು, ದಲಿತರು, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿನ ಕಂತೆ ಮಾದಪ್ಪನ ಬೆಟ್ಟದಲ್ಲಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸುನೀಲ್‌ ಬೋಸ್‌, ಕಳಲೆ ಕೇಶವಮೂರ್ತಿ ಮೊದಲಾದವರು ಪಾಲ್ಗೊಂಡು ವಿಶೇಷಪೂಜೆ ಸಲ್ಲಿಸಿಹೋಗಿದ್ದಾರೆ. ಇನ್ನು ಸ್ಥಳೀಯ ಮುಖಂಡರ‌ನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದ್ದು, ಬಹಿರಂಗ ಪ್ರಚಾರ ಆರಂಭವಾಗಿಲ್ಲ ಎನ್ನುತ್ತಾರೆ ಹೆಡಿಯಾಲ ಪಂಚಾಯ್ತಿ ಸದಸ್ಯ ಗೋವಿಂದರಾಜು.

10 ದಿನ ಸಿ ಎಂ ಮೈಸೂರಿನಲ್ಲಿಯೇ ಠಿಕಾಣಿ..!

10 ದಿನ ಸಿ ಎಂ ಮೈಸೂರಿನಲ್ಲಿಯೇ ಠಿಕಾಣಿ..!

ಉಪ ಚುನಾವಣೆಯನ್ನ ಗೆಲಲ್ಲೇಬೇಕೆಂಬ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಚುನಾವಣೆ ಪ್ರಚಾರಕ್ಕಾಗಿ 10 ದಿನಗಳ ಕಾಲ ಮೈಸೂರಿನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 29ರಂದು ಮೈಸೂರಿನ ಟಿ.ಕೆ ಲೇಔಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ವಾಸ್ತವ್ಯ ಹೂಡಲಿರುವ ಅವರು ಏಪ್ರಿಲ್ 7 ರ ರಾತ್ರಿ 8 ಗಂಟೆಯವರೆಗೆ ಮೈಸೂರಿನಲ್ಲಿ ಇರಲಿದ್ದಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದಲೇ ನಂಜನಗೂಡು, ಗುಂಡ್ಲಪೇಟೆ ಉಪಚುನಾವಣೆಗೆ ಪಂಚಾಯತಿ ಮಟ್ಟದಲ್ಲಿ ಪ್ರಚಾರ ನಡೆಸಲಿದ್ದು, ಇವರಿಗೆ ಕ್ಯಾಬಿನೆಟ್‌ನ 15 ಜನ ಸಚಿವರು ಸಾಥ್ ನೀಡಲಿದ್ದಾರೆ.

ಜೆಡಿಎಸ್ ಮತ ಸೆಳೆಯಲು ಕಾರ್ಯತಂತ್ರ:

ಜೆಡಿಎಸ್ ಮತ ಸೆಳೆಯಲು ಕಾರ್ಯತಂತ್ರ:

ನಂಜನಗೂಡು, ಗುಂಡ್ಲಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡದೆ ತಟಸ್ಥವಾಗಿ ಉಳಿಯಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಘೋಷಿಸಿದ್ದಾರೆ. ಈ ಹಿನ್ನಲ್ಲೆಯಲ್ಲಿ ಜೆಡಿಎಸ್ ನ ಮತಗಳನ್ನ ಸೆಳೆಯುವ ಜೊತೆಗೆ ಪ್ರಮುಖ ನಾಯಕರನ್ನ ಸೆಳೆಯಲು ಸಿದ್ದರಾಮಯ್ಯ ಮುತುವರ್ಜಿ ವಹಿಸಲಿದ್ದಾರೆ ಅನ್ನೋದರಲ್ಲಿ ನೋ ಡೌಟ್..

English summary
Most awaited Nanjangud and Gundlupet by election will be held on 9th of April. The people of both Assembly constituencies are very curious to see battle between BJP and Congress. Here is a special story on By election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X