ಹೊಸಕಾದಂಬರಿಗೆ ವಸ್ತುವಿನ ಹುಡುಕಾಟದಲ್ಲಿ ಎಸ್ಎಲ್ ಭೈರಪ್ಪ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 18 : ಹೊಸದಾಗಿ ಕಾದಂಬರಿ ಬರೆಯುವ ತುಡಿತವಿದ್ದು, ವಸ್ತುವಿನ ಹುಡುಕಾಟದಲ್ಲಿರುವುದಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ, 25 ಕಾದಂಬರಿಗಳನ್ನು ಕನ್ನಡಿಗರಿಗೆ ನೀಡಿರುವ 84 ವರ್ಷದ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

ಕುವೆಂಪುನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ ಪ್ರಶಸ್ತಿ ಸ್ವೀಕರಿಸಿ ಅಭಿಪ್ರಾಯ ಹಂಚಿಕೊಂಡ ಅವರು, ನೂರಾರು ವಿಷಯಗಳು ಹೊಳೆಯುತ್ತಿದ್ದರೂ ಇನ್ನು ಯಾವುದನ್ನೂ ಆಯ್ಕೆ ಮಾಡಿಲ್ಲ ಗಟ್ಟಿತನದಿಂದ ಕೂಡಿದ ವಿಷಯವನ್ನಿಟ್ಟುಕೊಂಡು ಬರವಣಿಗೆ ಆರಂಭಿಸುವುದಾಗಿ ತಿಳಿಸಿದರು. 2014ರಲ್ಲಿ ಪ್ರಕಟವಾದ ಯಾನ ಅವರ ಇತ್ತೀಚಿನ ಕಾದಂಬರಿ.

ಚಾಮುಂಡಿ ಬೆಟ್ಟದಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹಠ ಬಿಡಬೇಕು. ಚಾಮುಂಡಿಬೆಟ್ಟದ ಅಭಿವೃದ್ಧಿ ಕುರಿತು ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ, ಸರ್ಕಾರ ಮುಂದುವರೆಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. ['ಮತಾಂತರ ತಪ್ಪಲ್ಲ ಅಂದರೆ ಮರು ಮತಾಂತರ ತಪ್ಪೇ?']

SL Bhyrappa in search of a subject for his new novel

ಅಭಿವೃದ್ಧಿ ಹೆಸರಿನಲ್ಲಿ ಚಾಮುಂಡಿ ಬೆಟ್ಟದ ಪರಿಸರ ಹಾಳು ಮಾಡಬಾರದು. ಈ ವಿಚಾರದಲ್ಲಿ ಮೈಸೂರು ಗ್ರಾಹಕ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿರುವುದರಿಂದ ಸರ್ಕಾರ ಇದನ್ನು ಕೈಬಿಡಬೇಕು ಎಂದು ಭೈರಪ್ಪ ಅವರು ಸರಕಾರವನ್ನು ಆಗ್ರಹಿಸಿದರು. [ಚಾಮುಂಡಿ ಬೆಟ್ಟದಲ್ಲಿ ಸಂತೆ ಮಾಡಬೇಕಾ? ಭೈರಪ್ಪ ಪ್ರಶ್ನೆ]

ಪ್ರಶಸ್ತಿ ಕುರಿತಂತೆ ಮಾತನಾಡಿದ ಅವರು ಪ್ರಶಸ್ತಿ, ಸನ್ಮಾನಗಳಿಗಿಂತ ಒಬ್ಬ ಸಾಹಿತಿಯ ಸಾಹಿತ್ಯವನ್ನು ಎಷ್ಟು ಜನ ಓದುತ್ತಾರೆ ಎಂಬುದು ಮುಖ್ಯ. ಪ್ರಶಸ್ತಿ ಸಂದಿರುವುದು ಸಂತೋಷ ನೀಡಿದೆಯಾದರೂ ಪ್ರಶಸ್ತಿಯೇ ಮುಖ್ಯವಾಗುವುದಿಲ್ಲ. ಹೆಚ್ಚು ಜನ ಸಾಹಿತ್ಯವನ್ನು ಓದಬೇಕು. ಸಾಹಿತಿ ಕಾಲಾನಂತರವೂ ನೂರು, ಇನ್ನೂರು ವರ್ಷ ಆತನ ಸಾಹಿತ್ಯ ಬದುಕಿದಾಗ ಮಾತ್ರ ಅದು ನಿಜವಾದ ಪ್ರಶಸ್ತಿಯಾಗುತ್ತದೆ ಎಂದರು.

ಪ್ರವಾಸದಲ್ಲಿದ್ದ ಕಾರಣ ಭೈರಪ್ಪ ಅವರು ಕೇಂದ್ರ ಸರ್ಕಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಿರಲಿಲ್ಲ. ಹೀಗಾಗಿ ಅವರ ನಿವಾಸಕ್ಕೆ ತೆರಳಿ ಶುಕ್ರವಾರ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. [ಮೋದಿ ಬೆಂಬಲಿಸಿದ ಭೈರಪ್ಪ, ಯುಆರ್ಎ ಏನಂದ್ರಪ್ಪ]

ಈ ಸಂದರ್ಭ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಭಾಸ್‌ಚಂದ್ರ, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ತಹಸೀಲ್ದಾರ್ ನವೀನ್‌ಜೋಸೆಫ್, ಡಿಸಿಪಿ ಡಾ.ಎಚ್.ಟಿ.ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ, ಹಿರಿಯ ಸಾಹಿತಿ ಡಾ.ಪ್ರದಾನ ಗುರುದತ್ತ, ಎನ್‌ಐಇ ಕಾಲೇಜಿನ ಪ್ರಾಂಶುಪಾಲ ಡಾ.ಶೇಖರ್ ಸೇರಿದಂತೆ ಭೈರಪ್ಪ ಅವರ ಅಭಿಮಾನಿಗಳು, ಹಿತೈಷಿಗಳು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada novelist Dr. SL Bhyrappa (84) has said he is in search of a subject for his new novel. He was conferred with Padma Shri award in Mysuru on Friday. He said, though awards bring happiness, people reading novels are the real awards. He also urged govt not to spoil environment.
Please Wait while comments are loading...