5 ರೂ ತಿಂಡಿ, 10 ರೂ ಊಟ; ಇಂದಿರಾ ಕ್ಯಾಂಟೀನ್ ಮೈಸೂರು ಅಡಿಗೆಮನೆ ರೆಡಿ!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 9 : ಮೈಸೂರು ನಗರ ವ್ಯಾಪ್ತಿಯಲ್ಲಿ ರಾಜ್ಯ ಸರಕಾರ ಆರಂಭಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‌ ಜ.12ರಂದು ಆರಂಭಗೊಳ್ಳಲಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು, ರಿಯಾಯತಿ ದರದಲ್ಲಿ ಬಡ ಜನರಿಗೆ ಮೂರು ಹೊತ್ತಿನ ಆಹಾರ ನೀಡಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.

ಈ ಹಿಂದೆ ಮೈಸೂರು ನಗರ ಪಾಲಿಕೆ ಜ. 1ರಂದು ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕೆಲಸ ಪೂರ್ಣಗೊಳ್ಳದ ಕಾರಣ ಸಾಧ್ಯವಾಗಿರಲಿಲ್ಲ. ಈಗ ಮೊದಲ ಹಂತದಲ್ಲಿ 11 ಕ್ಯಾಂಟೀನ್‌ಗಳನ್ನು ಜ. 12ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲು ಉದ್ದೇಶಿಸಲಾಗಿದೆ. ಎಲ್ಲ 11 ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಗೆ ಸಿದ್ಧವಾಗಿದ್ದು , ಉದ್ದೇಶಿತ ಎರಡು ಅಡುಗೆ ಮನೆಗಳಲ್ಲಿ ಒಂದು ಈಗಾಗಲೇ ಪೂರ್ಣಗೊಂಡಿದೆ.

ಜ.11ರಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಅವರು ಜಿಲ್ಲೆಯಲ್ಲಿ ನಾನಾ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸಿಎಂ ಅವರ ಪ್ರವಾಸ ವೇಳಾಪಟ್ಟಿಯನ್ನು ಆಧರಿಸಿ ಜ.12ರಂದು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮಾಡಲು ಪಾಲಿಕೆಯಿಂದ ಚಿಂತನೆ ನಡೆಸಲಾಗಿದೆ.

Siddaramaiah's Indira canteen will be inaguarted in Mysuru soon

ಇಂದಿರಾ ಕ್ಯಾಂಟೀನ್‌ಗೆ ಟೆಂಡರ್ ಅಂತಿಮಗೊಳಿಸಲಾಗಿದ್ದು , ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ ಮೂರು ಹೊತ್ತಿಗೆ 60 ರೂ.ಯಂತೆ ಟೆಂಡರ್ ದಾರರಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಬೆಳಗಿನ ತಿಂಡಿಯನ್ನು 5 ರೂ., ಮಧ್ಯಾಹ್ನ, ರಾತ್ರಿಯ ಊಟವನ್ನು ತಲಾ 10 ರೂ.ಗಳಿಗೆ ನೀಡಲಾಗುತ್ತಿದೆ. ಸರಕಾರ ದಿನವೊಂದಕ್ಕೆ ವ್ಯಕ್ತಿಯೊಬ್ಬರಿಗೆ 35 ರೂ. ಸಬ್ಸಿಡಿ ನೀಡಲಿದೆ.

ಮೊದಲ ಹಂತದ ಇಂದಿರಾ ಕ್ಯಾಂಟೀನ್‌ಗಳ ಉದ್ಘಾಟನೆ ಬಳಿಕ ಎರಡನೇ ಹಂತದಲ್ಲಿ ಮೈಸೂರು ತಾಲೂಕು ಹೊರತುಪಡಿಸಿ, ಜಿಲ್ಲೆಯ ಉಳಿದ 6 ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಫೆಬ್ರವರಿ, ಮಾರ್ಚ್‌ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಕ್ಯಾಂಟೀನ್‌ಗಳಲ್ಲಿ ಒಂದು ಹೊತ್ತಿಗೆ 500 ಜನರಿಗೆ ಬೇಕಾಗುವಷ್ಟು , ಅಂದರೆ ಒಂದು ದಿನಕ್ಕೆ 1,500ರಷ್ಟು ಜನರಿಗೆ ಆಹಾರವನ್ನು ಪ್ರತಿದಿನ ವಿತರಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯ 6 ತಾಲೂಕು ಕೇಂದ್ರಗಳಾದ ತಿ.ನರಸೀಪುರ, ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ಕೆ.ಆರ್‌.ನಗರದ ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ ಒಟ್ಟು 6 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಿದೆ.

ಕ್ಯಾಂಟೀನ್ ಎಲ್ಲೆಲ್ಲಿ ?
ಕಾಡಾ ಕಚೇರಿ ಆವರಣ, ಕೆ.ಆರ್‌.ಆಸ್ಪತ್ರೆ ಆವರಣ, ಸಿಲ್ಕ್‌ ಫ್ಯಾಕ್ಟರಿ ವೃತ್ತ, ಸೂಯೇಜ್ ಫಾರಂ ವೃತ್ತ, ಚಾಮರಾಜಪುರಂ ರೈಲ್ವೆ ನಿಲ್ದಾಣ, ಸರಕಾರಿ ಅತಿಥಿ ಗೃಹ ಆವರಣ, ಶಾರದಾದೇವಿ ನಗರ, ಅಜೀಜ್ ಸೇಠ್ ನಗರ, ತಿ.ನರಸೀಪುರ ವೃತ್ತ, ತ್ರಿವೇಣಿ ವೃತ್ತ, ಸ್ಲಂ ಬೋರ್ಡ್‌ನ ಜೋಡಿ ತೆಂಗಿನಮರ ರಸ್ತೆಯಲ್ಲಿ ಕ್ಯಾಂಟೀನ್ ತಲೆ ಎತ್ತಲು ಸಜ್ಜಾಗಿದೆ.

ಮೈಸೂರು ವ್ಯಾಪ್ತಿಯ 11 ಇಂದಿರಾ ಕ್ಯಾಂಟೀನ್‌ಗಳಿಗೆ ಕುಂಬಾರಕೊಪ್ಪಲು, ಆಲನಹಳ್ಳಿಯಲ್ಲಿ ನಿರ್ಮಿಸಲಾಗುವ ಕಿಚನ್‌ನಿಂದ ಆಹಾರ ಪೂರೈಕೆ ಮಾಡಲಾಗುವುದು. ಎರಡು ಕಿಚನ್‌ಗಳ ಪೈಕಿ ಒಂದು ಈಗಾಗಲೇ ಪೂರ್ಣಗೊಂಡಿದ್ದು , ಇನ್ನೊಂದರ ಕೆಲಸ ಪ್ರಗತಿಯಲ್ಲಿದೆ. ಇಂದಿರಾ ಕ್ಯಾಂಟೀನ್‌ ಮೂಲಕ ಬೆಳಗ್ಗಿನ ತಿಂಡಿ, ಮಧ್ಯಾಹ್ನ,ರಾತ್ರಿಯ ಊಟವನ್ನು ವ್ಯಕ್ತಿಯೊಬ್ಬರಿಗೆ 25 ರೂ.ಗೆ ನೀಡಲಾಗುವುದು. ಇದಕ್ಕೆ ಸರಕಾರ 35 ರೂ. ಸಬ್ಸಡಿ ನೀಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the most important schemes for poor people by Karnataka's Siddaramaiah government, Indira canteen will be started in Mysuru in few days. Indira canteen is chain of canteens which serve food to poor in low cost. In Mysuru 11 Indira canteen will likely to be inaugurated by CM Siddaramaiah on Jan 12th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ