ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಗ್ಯಾರೆಂಟಿ

Posted By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 8: ವಿಧಾನಸಭಾ ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಲ್ಲಿ ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಮುಂದಿನ ಚುನಾವಣೆಯಲ್ಲಿ ಗೆದ್ದೇ ತೀರಬೇಕೆಂದು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರವಾದ ವರುಣಾವನ್ನು ಪುತ್ರ ಡಾ. ಎಸ್.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟು ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಹಿಂದೆ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಅಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಕಾರಣ ಅವರಿಗೆ ಜೆಡಿಎಸ್‍ನಿಂದ ಜಿ.ಟಿ.ದೇವೇಗೌಡರು ಪ್ರತಿಸ್ಪರ್ಧಿಯಾಗಿದ್ದಾರೆ.

ಚಾಮುಂಡೇಶ್ವರಿಗೆ ಒಲಿದು ಬಂದ ಅಭಿವೃದ್ಧಿ ಭಾಗ್ಯ

ಚಾಮುಂಡೇಶ್ವರಿಗೆ ಒಲಿದು ಬಂದ ಅಭಿವೃದ್ಧಿ ಭಾಗ್ಯ

ಇನ್ನು ಚುನಾವಣೆಗೆ ಆರು ತಿಂಗಳಷ್ಟೆ ಬಾಕಿಯಿದೆ. ಹೀಗಿರುವಾಗ ಈಗಿನಿಂದಲೇ ತಂತ್ರ ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ 100ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳ ಸರಣಿ ಭೂಮಿ ಪೂಜೆಯನ್ನು ಆರಂಭಿಸಿದ್ದಾರೆ.

ಈ ಹಿಂದೆ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿಯೂ ಇದೇ ತಂತ್ರ ರೂಪಿಸಿ ಯಶಸ್ಸನ್ನು ಕಂಡಿದ್ದರು. ಇದೀಗ ಬೇರೆ ಯಾವ ಕ್ಷೇತ್ರದತ್ತಲೂ ಗಮನಹರಿಸದೆ ಚಾಮುಂಡೇಶ್ವರಿ ಕ್ಷೇತ್ರದತ್ತ ನಿಗಾ ವಹಿಸಿ ಹಣ ಬಿಡುಗಡೆ ಮಾಡಿ ಬಹಳ ಮುತುವರ್ಜಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಇದೊಂದು ರಾಜಕೀಯ ತಂತ್ರ ಎಂಬುವುದು ಎಂಥ ದಡ್ಡರಿಗೂ ಅರ್ಥವಾಗಿ ಬಿಡುತ್ತದೆ.

ವರುಣಾದಲ್ಲಿ ಬೀಡುಬಿಟ್ಟ ಸಿಎಂ ಪುತ್ರ

ವರುಣಾದಲ್ಲಿ ಬೀಡುಬಿಟ್ಟ ಸಿಎಂ ಪುತ್ರ

ಕಳೆದ ಆರು ತಿಂಗಳಿಂದ ವರುಣಾ ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದು, ಕಾಲೋನಿಗಳಿಗೆ ಭೇಟಿ ನೀಡಿ ಮನವಿ ಸ್ವೀಕರಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾನೇ ಎಂಬುವುದನ್ನು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು, ಭೂಮಿ ಪೂಜೆ, ಉದ್ಘಾಟನೆ ಮಾಡುತ್ತಿದ್ದದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಪಟ್ಟವನ್ನು ಮಗನಿಗೆ ದಯಪಾಲಿಸಿದ್ದರು.

ಜನರ ಗಮನ ಸೆಲೆಯಲು ಯತೀಂದ್ರ ಕಸರತ್ತು

ಜನರ ಗಮನ ಸೆಲೆಯಲು ಯತೀಂದ್ರ ಕಸರತ್ತು

ಈಗ ವರುಣಾ ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಯತೀಂದ್ರ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಸಾಮಾನ್ಯರ ನಡುವೆ ಬೆರೆಯುತ್ತಾ ಮುಂದಿನ ಚುನಾವಣೆಗೆ ಬೇಕಾದ ವೋಟ್ ಬ್ಯಾಂಕ್‍ನ್ನು ಸೃಷ್ಟಿಸಿಕೊಂಡಿದ್ದಾರೆ.

ಮಗನನ್ನು ರಾಜಕೀಯದಲ್ಲಿ ಮುಂದುವರೆಸಿ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಬಯಕೆ ಹೊಂದಿರುವ ಸಿದ್ದರಾಮಯ್ಯ ಅವರು ಮಗನಿಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ.

ಸಿಎಂ ಕಣಕ್ಕಿಳಿಯುವುದು ಪಕ್ಕಾ

ಸಿಎಂ ಕಣಕ್ಕಿಳಿಯುವುದು ಪಕ್ಕಾ

ಕಳೆದ ಕೆಲವು ಸಮಯಗಳಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದತ್ತ ದೃಷ್ಠಿ ನೆಟ್ಟಿದ್ದಾರೆ ಎಂಬ ವದಂತಿಗಳಿತ್ತು. ಅದು ಈಗ ನಿಜವಾಗಿದ್ದು, ಅವರು ಸ್ಪರ್ಧಿಸುವುದು ಖಚಿತವಾಗಿದೆ.

ಇದಕ್ಕಾಗಿ ಕ್ಷೇತ್ರದ ಮತದಾರರನ್ನು ಸೆಳೆಯಲು ಬೇಕಾದ ತಂತ್ರವನ್ನು ಅನುಸರಿಸುತ್ತಿದ್ದಾರೆ. ಅದರ ಫಲವೇ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ 100ಕೋಟಿ ರೂ. ಬಿಡುಗಡೆ ಮಾಡಿರುವುದು. ಮುಂದೆ ಒಂದೊಂದು ಅಸ್ತ್ರವನ್ನು ತಮ್ಮ ಬತ್ತಳಿಕೆಯಿಂದ ಸಿದ್ದರಾಮಯ್ಯ ಬಿಡುವುದು ಸ್ಪಷ್ಟವಾಗಿದೆ.

ಜಿಟಿ ದೇವೇಗೌಡ- ಸಿದ್ದರಾಮಯ್ಯ ಮುಖಾಮುಖಿ

ಜಿಟಿ ದೇವೇಗೌಡ- ಸಿದ್ದರಾಮಯ್ಯ ಮುಖಾಮುಖಿ

ಸದ್ಯ ಚಾಮುಂಡೇಶ್ವರಿ ಕ್ಷೇತ್ರವನ್ನು ಜೆಡಿಎಸ್‍ನ ಜಿ.ಟಿ.ದೇವೇಗೌಡರು ಪ್ರತಿನಿಧಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರೇ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ನ ಅಭ್ಯರ್ಥಿಯೂ ಹೌದು. ಹೀಗಿರುವಾಗ ಇಬ್ಬರ ನಡುವೆ ಸ್ಪರ್ಧೆ ನಡೆಯೋದಂತೂ ಖಚಿತವಾಗಿದೆ. ಇಲ್ಲಿ ಬಿಜೆಪಿ ಅಷ್ಟೊಂದು ಪ್ರಾಬಲ್ಯ ಹೊಂದಿಲ್ಲದಿರುವುದು ಇಬ್ಬರಿಗೂ ಪ್ಲಸ್ ಪಾಯಿಂಟ್ ಆಗಲಿದೆ. ಮುಂದೇನಾಗುತ್ತೆ ಎಂಬುದನ್ನು ಕಾಲವೇ ಹೇಳಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah is preparing to contest from Chamundeshwari constituency in the 2018 Karnataka Assembly polls.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ