ಅನ್ನಭಾಗ್ಯಕ್ಕೆ ಕಳಪೆ ಅಕ್ಕಿ ಬರೋದು ಹೇಗೆ ಗೊತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ,20: ರೈತರಿಂದ ಬೆಂಬಲ ಬೆಲೆ ನೀಡಿ ಖರೀದಿಸಿದ ಭತ್ತ, ರಾಗಿ ಸೂಕ್ತ ನಿರ್ವಹಣೆ ಇಲ್ಲದೆ ಇಲಿ ಹೆಗ್ಗಣ ಪಾಲಾಗುತ್ತಿದೆ. ಅವುಗಳಿಂದ ಹಾಳಾದ ಪದಾರ್ಥಗಳನ್ನೇ ಅನ್ನಭಾಗ್ಯ ಯೋಜನೆಗೆ ರವಾನಿಸುತ್ತಿರುವುದು ಕೆ.ಆರ್ ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಗೋದಾಮಿನಲ್ಲಿ ಕಂಡು ಬಂದಿದೆ.

ಕಳೆದ ಹಂಗಾಮಿನಲ್ಲಿ ಬೆಳೆದ ಭತ್ತ, ರಾಗಿಯನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಸಂಗ್ರಹಿಸಿದ ಭತ್ತ ಮತ್ತು ರಾಗಿಯನ್ನು ಜೋಪಾನವಾಗಿ ಕಾಪಾಡಬೇಕಿತ್ತು. ಆದರೆ ಕೀಟನಾಶಕ ಬಳಕೆ ಮತ್ತು ಸಮರ್ಪಕ ನಿರ್ವಹಣೆ ಮಾಡದ ಪರಿಣಾಮ ಗೋದಾಮಿನಲ್ಲಿ ಸಂಗ್ರಹಿಸಿದ ಭತ್ತ ಇಲಿಗಳ ಪಾಲಾಗಿದ್ದು, ಚೀಲಗಳನ್ನು ಕಡಿದು ಬಿಲಗಳಂತೆ ಮಾಡಿಕೊಂಡಿರುವ ಇಲಿಗಳು ಕೆಳಭಾಗದಲ್ಲಿರುವ ಚೀಲಗಳ ಭತ್ತವನ್ನು ತಿಂದು ಹಾಕುತ್ತಿವೆ.[ಸಿಎಂ ಸಿದ್ರಾಮಣ್ಣನ ಅನ್ನಭಾಗ್ಯ ಸ್ಕೀಂನಲ್ಲಿ ಉಂಡವನೇ ಜಾಣ]

Mysuru

ಸರ್ಕಾರ ಬೇರೆ ರಾಜ್ಯಗಳಿಂದ ಪಡಿತರ ವಿತರಣೆಗಾಗಿ ಅಕ್ಕಿ ತರುವ ಬದಲು ನಮ್ಮ ರಾಜ್ಯದ ಬೆಳೆಗಾರರ ಹಿತಕಾಯುವ ದೃಷ್ಠಿಯಿಂದ ಬೆಂಬಲ ಬೆಲೆ ನೀಡಿ ತಾಲೂಕು ಎಪಿಎಂಸಿ ವತಿಯಿಂದ ಭತ್ತ ಖರೀದಿ ಮಾಡಿತ್ತು. ಹೀಗೆ ಖರೀದಿ ಮಾಡಿದ ಭತ್ತವನ್ನು ಗೋದಾಮುಗಳಲ್ಲಿ ಸೂಕ್ತ ನಿರ್ವಹಣೆ ಮಾಡುವ ಮೂಲಕ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ಆದರೆ ಈ ಕ್ರಮ ಕೈಗೊಳ್ಳದೆ ಕೇವಲ ಶೇಖರಿಸಿಟ್ಟಿದ್ದರಿಂದ ಗೋದಾಮುಗಳ ಭತ್ತ ರಾಗಿ ಇಲಿ ಹೆಗ್ಗಣಗಳ ಪಾಲಾಗುತ್ತಿದೆ.

ರೈತರಿಂದ ಭತ್ತ ಖರೀದಿಸುವಾಗ ಗುಣಮಟ್ಟದ ಬಗ್ಗೆ ಮಾತನಾಡುವ ಸರ್ಕಾರ ಬಳಿಕ ಅವುಗಳನ್ನು ಸಂಗ್ರಹಿಡುವ ರೀತಿ ಮಾತ್ರ ದೇವರಿಗೇ ಪ್ರಿಯ ಎನ್ನುವಂತಾಗಿದೆ. ಅನ್ನಭಾಗ್ಯ ಯೋಜನೆಗಾಗಿ ತಾನೇ ಈ ಅಕ್ಕಿ, ರಾಗಿ ಎಂಬ ಅಸಡ್ಡೆ ಮನೋಭಾವ ತೋರುತ್ತಿದೆ.[ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

ಇದೀಗ 2015-16ನೇ ಸಾಲಿನ ಭತ್ತ ಖರೀದಿ ಆರಂಭಿಸುವ ಸಲುವಾಗಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಹಳೇ ಭತ್ತವನ್ನು ಶೇ85ರಷ್ಟು ಖಾಲಿ ಮಾಡಲಾಗಿದೆ. ಉಳಿದ ಚೀಲಗಳಲ್ಲಿ ಇಲಿಗಳಿಂದ ಹಾಳಾದ ಭತ್ತವನ್ನು ಶುದ್ದೀಕರಿಸದೇ ತುಂಬುತ್ತಿದ್ದಾರೆ. ಕನಿಷ್ಟ ಕಾಳಜಿಯು ಇಲ್ಲದೇ ಇಂತಹ ಅಕ್ಕಿ, ರಾಗಿಯನ್ನು ಪಡಿತರರಿಗೆ ನೀಡುತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ.

ಕಳಪೆ ಗುಣಮಟ್ಟದ ಪದಾರ್ಥಗಳನ್ನು ನೀಡಿ ಬಡವರ ಆರೋಗ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವುದನ್ನು ಬಿಡಬೇಕಿದೆ. ಇನ್ನಾದರೂ ಗೋದಾಮಿನಲ್ಲಿ ಸಂಗ್ರಹಿಸಿಟ್ಟ ಧವಸ ಧಾನ್ಯಗಳ ಬಗ್ಗೆ ಸರ್ಕಾರ ನಿಗಾ ವಹಿಸಿ ನಿಯಮಿತ ಕೀಟನಾಶಕ ಬಳಕೆ ಮಾಡಿ, ತೇವ ಬಾರದಂತೆ ಮತ್ತು ಇಲಿ ಹೆಗ್ಗಣಗಳ ಪಾಲಾಗದಂತೆ ಕಾಪಾಡಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rice and finger millet crops appropriate management in godam, KR Nagar, Mysuru. This crops transport to Anna bhagya project.
Please Wait while comments are loading...