ಆರು ಜನ ಸತ್ತ ಜಾಗದಿಂದ ಅಕ್ಕಿ ಮೂಟೆ ಹೊತ್ತೊಯ್ಯೋರು ಎಂಥೋರು?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 26: ಹುಣಸೂರು ತಾಲೂಕು ಮಧುಗಿರಿಕೊಪ್ಪಲು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಕೆಎಸ್‍ ಆರ್ ಟಿಸಿ ಬಸ್- ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ಹತ್ತು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

ಬಸ್ ಚಾಲಕ ಕೆ.ಆರ್.ಪೇಟೆಯ ಸದಾಶಿವ, ನಿರ್ವಾಹಕ ಹರಿಹರದ ಬಿ.ದೇವರಾಜು, ಲಾರಿ ಚಾಲಕ ಆಂಧ್ರ ಪ್ರದೇಶದ ಕರ್ನೂಲ್ ನ ಅಂಜಿ ಮತ್ತು ಕ್ಲೀನರ್ ಗುಂಟೂರಿನ ರಾಮಂಜಿ, ಪ್ರಯಾಣಿಕ ರಾಮಪ್ಪ ಮೃತರು ಎಂದು ಗುರುತಿಸಲಾಗಿದೆ. ಐವರು ಸ್ಥಳದಲ್ಲಿ ಮೃತಪಟ್ಟರೆ, ಗಾಯಗೊಂಡಿದ್ದ ಪ್ರಯಾಣಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.[ಗೆಳತಿಯ ಮದುವೆಗೆಂದು ಹೊರಟವರು ಹೆಣವಾದರು]

Rice bags taken away by people from accident place in Hunsur

ಗಾಯಾಳುಗಳಾದ ಸಿಂಧುವಳ್ಳಿಯ ಮುಕುಂದ, ಮಳಗನಕೆರೆ ಗ್ರಾಮದ ಸಂತೋಷ್, ಹಿರಿಕ್ಯಾತನ ಹಳ್ಳಿಯ ರಾಮಸ್ವಾಮಿ, ಶ್ರೀಮಂಗಲದ ತಂಗಮ್ಮ ಎಂಬವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಖಾಸಗಿ ಆಸ್ಪತ್ರೆಗೂ ದಾಖಲಾಗಿದ್ದಾರೆ.

ಘಟನೆ ವಿವರ: ಕೆಎಸ್‍ ಆರ್ ಟಿಸಿ ಬಸ್ ವೀರಾಜಪೇಟೆಯಿಂದ ಮೈಸೂರಿನತ್ತ ತೆರಳುತ್ತಿತ್ತು. ಹುಣಸೂರಿನಿಂದ ಮುಂದೆ ಹೊರಟು ಬಿಳಿಕೆರೆ ನಡುವೆ ಇರುವ ಮಧುಗಿರಿ ಕೊಪ್ಪಲು ಬಳಿ ಬರುವ ವೇಳೆಗೆ ನಿರ್ವಾಹಕ ಕೂಡ ಮುಂದೆ ಬಂದು ಕುಳಿತಿದ್ದನು. ಬೆಳಗ್ಗೆ 6.30ರಲ್ಲಿ ವಾಹನಗಳ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲಲ್ಲ.[ರಸ್ತೆ ವಿಭಜಕಕ್ಕೆ ಡಿಕ್ಕಿ: ಕಾರು ಪಲ್ಟಿ, ಮೂವರು ಸಾವು]

ಆದರೆ, ಬಸ್ ಚಾಲಕ ಸದಾಶಿವ ಅವರಿಗೆ ಅದೇನಾಯಿತೋ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಲಕ್ಕೆ ತಿರುಗಿದೆ. ಮೈಸೂರಿನಿಂದ ಅಕ್ಕಿಮೂಟೆ ತುಂಬಿಕೊಂಡು ಹುಣಸೂರಿನತ್ತ ತೆರಳುತ್ತಿದ್ದ ಆಂಧ್ರಪ್ರದೇಶಕ್ಕೆ ಸೇರಿದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಎರಡೂ ವಾಹನ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಡಿಕ್ಕಿ ಹೊಡೆದ ರಭಸಕ್ಕೆ ಜಖಂಗೊಂಡಿದೆ.

Rice bags taken away by people from accident place in Hunsur

ಬಸ್ಸಿನ ಮುಂಭಾಗದೊಳಗೆ ಲಾರಿ ನುಗ್ಗಿ, ಮುಂಭಾಗದಲ್ಲಿ ಕುಳಿತಿದ್ದ ಲಾರಿ ಮತ್ತು ಬಸ್ ಚಾಲಕ, ಕಂಡಕ್ಟರ್, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿದ್ದೆಯಲ್ಲಿದ್ದ ಪ್ರಯಾಣಿಕರು ಸೀಟಿನಿಂದ ಹಾರಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಭಾರೀ ಶಬ್ದ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಗಳ ಜನ ಓಡಿ ಬಂದಿದ್ದಾರೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಬಸ್ ನಲ್ಲಿ ಸಿಲುಕಿ ಗಾಯಗೊಂಡಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಪೊಲೀಸರು ಬಂದ ಬಳಿಕ ಬಸ್ ಮತ್ತು ಲಾರಿಯಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಲಾರಿಯಲ್ಲಿದ್ದ ಅಕ್ಕಿ ಮೂಟೆ ಕಳಚಿ ನೆಲಕ್ಕೆ ಬಿದ್ದಿದೆ.[ಕಾರು ಡಿಕ್ಕಿಯಾಗಿ ತಾಂಡವಪುರದ ನವವಿವಾಹಿತ ಸಾವು]

ಘಟನೆಯಿಂದ ಕೆಲ ಕಾಲ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು. ಬಳಿಕ ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಎಸ್ಪಿ ರವಿ ಡಿ.ಚನ್ನಣ್ಣನವರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮುಂಜಾನೆಯ ಮಬ್ಬು ಹಾಗೂ ಚಾಲಕ ನಿದ್ದೆಯ ಮಂಪರಿನಲ್ಲಿ ನಿಯಂತ್ರಣ ಕಳೆದುಕೊಂಡು ಎಡಬದಿಯಿಂದ ಬಲಬದಿಗೆ ಬಸ್ ತಿರುಗಿಸಿದ್ದೇ ಕಾರಣ ಎನ್ನಲಾಗಿದೆ. ಈ ಕುರಿತಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.ಈ ನಡುವೆ ಘಟನೆಯನ್ನು ನೋಡಲು ಬಂದ ಕೆಲವರು ಲಾರಿಯಿಂದ ನೆಲಕ್ಕೆ ಬಿದ್ದಿದ್ದ ಅಕ್ಕಿ ಮೂಟೆಯನ್ನು ಹೊತ್ತೊಯ್ಯುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಅದನ್ನು ತಡೆದಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
6 people died in an accident in Madhugirikoppalu, Hunsur taluk, Mysuru district. People who came to the accident place try to took away the rice bags from lorry. Police manage to stop them.
Please Wait while comments are loading...