ಇವರೇ ಮೈಸೂರು ದಸರಾ ಜಂಬೂಸವಾರಿಯ ತೆರೆಮರೆಯ ಹೀರೋ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಆಗಸ್ಟ್ 28: ನಾಡಹಬ್ಬ ದಸರೆ ಎಂದರೆ ಸಾಕು ನಮಗೆಲ್ಲರಿಗೂ ಮೊದಲು ನೆನಪಾಗುವುದೇ ಜಂಬೂ ಸಾವಾರಿಯ ವೈಭವ. ಗಜರಾಜನ ಗಾಂಭೀರ್ಯ, ವೈಯ್ಯಾರದ ನಡುಗೆ, ಅಂಬಾರಿ ಹೊರುವ ಗತ್ತು ಎಂಬಿತ್ಯಾದಿ. ಅಂದಿನ ಗಜರಾಜನ ವೈಭವದ ಹಿಂದೆ ಕಾಣದ ಅದೆಷ್ಟೋ ಕೈಗಳು ಕಾರ್ಯ ನಿರ್ವಹಿಸಿದೆ. ಅದರಲ್ಲಿ ಹೆಚ್ಚಿನ ಸ್ಥಾನ ಪಶು ವೈದ್ಯ ಸಹಾಯಕನಾಗಿರುವ ರಂಗರಾಜು.

ಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನ

ಹೌದು, ದಸರೆಯ ಅಂಗವಾಗಿ ಅರಮನೆಯಲ್ಲಿ ಬೀಡುಬಿಡುವ ಆನೆಗಳ ಆರೋಗ್ಯ, ಸೌಖ್ಯ, ಪೌಷ್ಠಿಕ ಆಹಾರ ಸೇರಿದಂತೆ ಹತ್ತು ಹಲವು ಕಾಯಕವನ್ನು ಹಗಲು -ರಾತ್ರಿಯೆನ್ನದೇ ಕಳೆದ 24 ವರುಷಗಳಿಂದಲೂ ನಿರ್ವಹಿಸುತ್ತಿದ್ದಾರೆ ನಿಸ್ವಾರ್ಥಿ ರಂಗರಾಜು. ಇದೇ ಸೆಪ್ಟೆಂಬರ್ ನಲ್ಲಿ ನಿವೃತ್ತಿ ಹೊಂದಲಿರುವ ಅವರಿಗೆ ಇದು ಕೊನೆಯ ಹಾಗೂ 25ನೇ ವರುಷದ ಗಜರಾಜನ ಆರೈಕೆಯ ನವರಾತ್ರಿ. ಪಶುವೈದ್ಯರಿಗೆ ಸರಿಸಮವಾಗಿಯೇ ನಿಂತು ಕಾರ್ಯ ನಿರ್ವಹಿಸುವ ಇವರಿಗೆ ಆನೆಗಳು ಸಹ ಬೆಸ್ಟ್ ಫ್ರೆಂಡ್ ಇದ್ದಂತೆ.

ಸಾಮಾಜಿಕ ಕಾರ್ಯಕ್ಕೂ ಸೈ!

ಸಾಮಾಜಿಕ ಕಾರ್ಯಕ್ಕೂ ಸೈ!

ಕೇವಲ ಪಶಶು ವೈದ್ಯರ ಸಹಾಯಕರಾಗಿ ಮಾತ್ರವಲ್ಲ, ಹಲವು ಸಾಮಾಜಿಕ ಕಾಯಕಗಳಲ್ಲೂ ಇವರು ಸೈ ಎನಿಸಿಕೊಂಡಿದ್ದಾರೆ. 1992ರಲ್ಲಿ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇರಿದ ಅವರ ಕಾಯಕಕ್ಕೆ ಮೆಚ್ಚಿ ಇಲ್ಲಿನ ಅಧಿಕಾರಿಗಳು ಪಶುವೈದ್ಯ ಸಹಾಯಕರಾಗಿ ಸೇವೆ ಸಲ್ಲಿಸುವಂತೆ ಆದೇಶ ನೀಡಿ ಮಧ್ಯಪ್ರದೇಶಕ್ಕೆ ತರಬೇತಿಗಾಗಿ ಕಳುಹಿಸಿದರು. ಅಲ್ಲಿಂದಲೂ ಕೇವಲ ಪಶುವೈದ್ಯನಾಗಿ ಮಾತ್ರವಲ್ಲ ಅದನ್ನು ಹೊರತುಪಡಿಸಿ ಯಾವ ಪ್ರಾಣಿಗಳು ತೊಂದರೆಗೊಳಗಾಗಿದ್ದರೂ ಮೊದಲು ತೆರಳುವ ಹೀರೋ ಇವರು.

ಮೆಚ್ಚುಗೆಯ ಸುರಿಮಳೆ

ಮೆಚ್ಚುಗೆಯ ಸುರಿಮಳೆ

ದಿನಂಪ್ರತಿ ಬೆಳಿಗ್ಗೆ 5 ಗಂಟೆಗೆ ಅರಮನೆಗೆ ತೆರಳಿ ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಬಲರಾಮ, ಗಜೇಂದ್ರ, ವಿಜಯ, ಕಾವೇರಿ, ವರಲಕ್ಷ್ಮಿ , ಭೀಮಾ ಸೇರಿದಂತೆ ಎಲ್ಲಾ ಆನೆಗಳ ಲದ್ದಿ ತಪಾಸಣೆ ಮಾಡುತ್ತಾರೆ. ಕಾರಣ ಆನೆಗಳಿಗೆ ನೀಡಿರುವ ಪೌಷ್ಟಿಕ ಆಹಾರ ಜೀರ್ಣವಾಗಿದೆಯೇ ಇಲ್ಲವೇ ಎಂದು ತಿಳಿಯಲು. ಒಂದು ವೇಳೆ ಅಜೀರ್ಣವಾಗಿದ್ದಲ್ಲಿ ಆನೆಗಳ ಆರೋಗ್ಯದ ಸ್ಥಿತಿಯನ್ನು ವೈದ್ಯರಿಗೆ ತಿಳಿಸಿ ಔಷಧಿ ನೀಡುತ್ತಾರೆ. ಇದಲ್ಲದೆ ಆನೆಗಳಿಗೆ ಪೌಷ್ಟಿಕ ಆಹಾರವನ್ನು ರಂಗರಾಜು ಪರಿಶೀಲಿಸಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ನೀಡುವ ಮೂಲಕ ಆನೆಗಳ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದಾರೆ.

ಮೊಳೆ ಹೆಕ್ಕುವಲ್ಲಿ ನಿಸ್ಸೀಮರು

ಮೊಳೆ ಹೆಕ್ಕುವಲ್ಲಿ ನಿಸ್ಸೀಮರು

ಕಳೆದ ಇಪ್ಪತ್ತು ನಾಲ್ಕು ವರ್ಷಗಳಿಂದಲೂ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳು ತಾಲೀಮು ನಡೆಸುವ ಸಂದರ್ಭದಲ್ಲಿ ದಾರಿಯಲ್ಲಿ ಮೊಳೆ, ಕಬ್ಬಿಣದ ಚೂರು ಹಾಗೂ ಕಲ್ಲನ್ನು ಆಯುವ ಕೆಲಸವನ್ನು ಮಾಡಿ ಆನೆಗಳ ಹಿತ ಕಾಯುತ್ತಿದ್ದಾರೆ. 1994ರಲ್ಲಿ ಆನೆ ಅಂಬಾರಿ ಆನೆಗೆ ಮೊಳೆ ಚುಚ್ಚಿ ಗಾಯವಾಗಿತ್ತು. ಜಂಬೂ ಸವಾರಿಗೆ ಕೇವಲ ಹದಿನೈದು ದಿನವಷ್ಟೇ ಬಾಕಿ ಇದ್ದಾಗ ಕುಂಟುತ್ತಿದ್ದ ದ್ರೋಣನ ನ್ನು ಕಂಡು ಅಂದಿನ ಪಶು ವೈದ್ಯರಾಗಿದ್ದ ನಂಜಪ್ಪ ಅವರು ಪರಿಶೀಲಿಸಿದಾಗ ಆನೆಯ ಕಾಲಿನಲ್ಲಿ ಮೊಳೆ ಸಿಲುಕಿದ್ದು ಕಂಡುಬಂದಿತ್ತು. ಅಷ್ಟೇ ಅಲ್ಲದೆ ದಸರಾ ಆನೆ ಶೋಭಾಳ ಹಿಂಗಾಲಿಗೂ ಸಹ ಮೊಳೆ ಚುಚ್ಚಿ ಗಾಯವಾಗಿತ್ತು. ನಂಜಪ್ಪ ಅವರ ಸೂಚನೆಯ ಮೇರೆಗೆ ರಂಗರಾಜು ಅವರು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ದ್ರೋಣ ಮತ್ತು ಶೋಭಾ ಆನೆಗಳು ಚೇತರಿಸಿಕೊಂಡು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದನ್ನು ಹಿರಿಯ ಮಾವುತರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ .

ಆನೆ ಹಿಡಿಯುವುದರಲ್ಲೂ ಪರಿಣಿತ

ಆನೆ ಹಿಡಿಯುವುದರಲ್ಲೂ ಪರಿಣಿತ

ರಂಗರಾಜು ಅವರು ಕಾಡಿನಿಂದ ನಾಡಿಗೆ ಬರುವ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ನಿಪುಣರಾಗಿದ್ದಾರೆ . ಮಧ್ಯಪ್ರದೇಶದಲ್ಲಿ ತರಬೇತಿ ಪಡೆದ ನಂತರ ಬಿಹಾರ, ಒರಿಸ್ಸಾ, ಕೊಲ್ಕತ್ತಾ , ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ವಿವಿಧ ಜಿಲ್ಲೆಯಲ್ಲಿಯೂ ಆನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇದುವರೆಗೂ 68ಕ್ಕೂ ಹೆಚ್ಚು ಆನೆಗಳನ್ನು ಹಿಡಿದಿದ್ದಾರೆ. ಇದಲ್ಲದೆ ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕ ಅಥವಾ ಅಸ್ವಾಭಾವಿಕವಾಗಿ ಸಾವನ್ನಪ್ಪುವ ಕಾಡಾನೆಗಳ ಮರಣೋತ್ತರ ಪರೀಕ್ಷೆಯಲ್ಲಿಯೂ ಸಹ ಇವರು ಪಾಲ್ಗೊಂಡಿದ್ದಾರೆ . ಸಾವನದುರ್ಗ, ರಾಮದುರ್ಗ , ಬಂಡೀಪುರದಲ್ಲಿ ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮೂರು ಆನೆ ಮರಿಗಳನ್ನು ಮೂರು ತಿಂಗಳುಗಳ ಕಾಲ ಹಗಲು ರಾತ್ರಿ ಚಿಕಿತ್ಸೆ ನೀಡಿ ಬದುಕಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rangaraju, who has been taking care of Dasara Jambusavari elephants since 24 years, is the real hero of Mysuru Dasara Jambusavari's success.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ