ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವೃದ್ಧೆ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ನವೆಂಬರ್ 02: ಮನೆಯಲ್ಲೇ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ವೃದ್ಧೆ ಸೇರಿದಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾಟಿಕೆ ಜಾಲ, ನಾಲ್ವರ ಬಂಧನ

ಮೈಸೂರಿನಲ್ಲಿ ವೇಶ್ಯಾವಾಟಿಕೆಯ ಕಬಂಧಬಾಹು ಎಲ್ಲೆಡೆ ವ್ಯಾಪಿಸಿದ್ದು, ಲಾಡ್ಜ್ ಗಳ ಮೇಲೆ ಮೇಲಿಂದ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವ ಕಾರಣ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೆಲವರು ತಮ್ಮ ಮನೆಗಳನ್ನೇ ದಂಧೆಗೆ ಬಳಸಿಕೊಳ್ಳುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿದೆ.

Prostitution: Mysuru police arrest 3 people

ಕೆಲವರು ಮನೆಗಳನ್ನು ಭೋಗ್ಯಕ್ಕೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ನಡೆಸುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಮೇಲ್ನೋಟಕ್ಕೆ ಸಭ್ಯರಂತೆ ನಟಿಸುವ ಮಹಿಳೆಯರು ಯುವತಿಯರನ್ನಿಟ್ಟುಕೊಂಡು ಹೊರಗಿನಿಂದ ಗಿರಾಕಿಗಳನ್ನು ಕರೆಯಿಸಿಕೊಂಡು ದಂಧೆ ನಡೆಸುವುದು ಇತ್ತೀಚೆಗೆ ಕಂಡು ಬರುತ್ತಿರುವ ಬೆಳವಣಿಗೆ.

ಈ ನಡುವೆ ನಗರದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಟ್ಟಗಳ್ಳಿ, 5ನೇ ಕ್ರಾಸ್, ಮನೆ ನಂ. 57ರ ನಿವಾಸಿ ವೃದ್ಧ ಮಹಿಳೆ ಪ್ರೇಮಮ್ಮ(81) ತನ್ನ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಆಗಾಗ್ಗೆ ಮನೆಗೆ ಅಪರಿಚಿತರು ಬಂದು ಹೋಗುತ್ತಿದ್ದರಿಂದ ಸುತ್ತಮುತ್ತಲಿನವರಿಗೆ ಅನುಮಾನ ಬಂದಿತ್ತು. ಈ ಕುರಿತು ಪೊಲೀಸರಿಗೂ ಮಾಹಿತಿ ಹೋಗಿತ್ತು.

ಹೀಗಾಗಿ ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಿ.ಗೋಪಾಲ್‍ರವರ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಸಿ.ರಾಜಶೇಖರ್ ಹಾಗೂ ಕುವೆಂಪುನಗರ ಠಾಣಾ ಇನ್ಸ್ ಪೆಕ್ಟರ್ ಆರ್.ವಿಜಯಕುಮಾರ್, ಸಿಸಿಬಿಯ ಸಿಬ್ಬಂದಿ ಜೀವನ್, ಬಿ.ರಾಧೇಶ, ಮಹಿಳಾ ಸಿಬ್ಬಂದಿ ನಾಗುಬಾಯಿ, ಮಂಜುಳ ಮತ್ತು ಕುವೆಂಪುನಗರ ಠಾಣೆಯ ಸಿಬ್ಬಂದಿ ಮನೆಯ ಮೇಲೆ ದಾಳಿ ನಡೆಸಿದೆ.

ಈ ವೇಳೆ ಮನೆಯಲ್ಲಿ ಪ್ರೇಮಮ್ಮ ಎಂಬ ವೃದ್ಧೆ ಇಬ್ಬರು ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದದ್ದು ಬೆಳಕಿಗೆ ಬಂದಿತಲ್ಲದೆ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೈಸೂರು ರಾಜೀವ್‍ ನಗರದ ಸಮೀವುಲ್ಲಾ ಎಂಬುವರ ಪುತ್ರ ಮಹಮ್ಮದ್ ಸಲ್ಮಾನ್(26), ನಾಡನಹಳ್ಳಿ ನಿವಾಸಿ ದಿ.ನಂಜಪ್ಪ ಅವರ ಪುತ್ರ ಗುರುಮಲ್ಲಪ್ಪ(45) ಸಿಕ್ಕಿ ಬಿದ್ದಿದ್ದಾರೆ. ವೃದ್ಧೆ ಪ್ರೇಮಮ್ಮ ಹಾಗೂ ಮಹಮ್ಮದ್ ಸಲ್ಮಾನ್, ಗುರುಮಲ್ಲಪ್ಪ ಅವರನ್ನು ಬಂಧಿಸಲಾಗಿದ್ದು, ಇವರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಯುವತಿಯರಿಬ್ಬರನ್ನು ರಕ್ಷಿಸಿದ್ದಾರೆ.

ದಾಳಿಯ ವೇಳೆ 4ಸಾವಿರ ರೂ. ನಗದು ಹಣ, 5 ಮೊಬೈಲ್ ಫೋನ್‍ಗಳು ಮತ್ತು ಎರಡು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru CCB police have arrested 3 people in connection with prostitution charges. They are engaged in prostitution activities in a home in Kuvempu Nagar Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ