ಗಾಜನೂರಿನ ಡಾ.ರಾಜ್ ಆಸ್ತಿ ಐವರು ಮಕ್ಕಳ ಪಾಲು?

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 18 : ಚಾಮರಾಜನಗರ-ತಮಿಳುನಾಡು ಗಡಿಭಾಗದ ಗಾಜನೂರಿನಲ್ಲಿರುವ ವರನಟ ಡಾ.ರಾಜ್‌ಕುಮಾರ್ ಅವರಿಗೆ ಸೇರಿದ ಆಸ್ತಿಯನ್ನು ಐವರು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತಿದೆ ಎಂಬ ವದಂತಿ ಹರಡಿದ್ದು ಈ ಸಂಬಂಧ ಜನರಲ್ಲಿ ಕುತೂಹಲವನ್ನು ಕೆರಳಿಸಿದೆ.

ತಮಿಳುನಾಡಿನ ತಾಳವಾಡಿ ಬಳಿಯ ಗಾಜನೂರು ಸಮೀಪ ಡಾ.ರಾಜ್‌ಕುಮಾರ್‌ರವರಿಗೆ ಸೇರಿದ ಸುಮಾರು 60 ಎಕರೆಯಷ್ಟು ಕೃಷಿ ಭೂಮಿಯಿದೆ. ಇದನ್ನು ಡಾ.ರಾಜ್‌ಕುಮಾರ್ ಅವರ ಐವರು ಮಕ್ಕಳು ಸಮಪಾಲಾಗಿ ಹಂಚಿಕೊಂಡಿದ್ದು, ಇದಕ್ಕಾಗಿ ಗಾಜನೂರಿನಲ್ಲಿ ಎಲ್ಲರೂ ಕುಟುಂಬ ಸಹಿತ ಬೀಡು ಬಿಟ್ಟಿದ್ದರಲ್ಲದೆ, ಈ ಸಂಬಂಧ ತಾಳವಾಡಿಯಲ್ಲಿರುವ ನೋಂದಣಿ ಕಚೇರಿಗೆ ತೆರಳಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರು ಹೊರಹಾಕಿದ್ದಾರೆ.

ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನಿತ್ ರಾಜ್‌ಕುಮಾರ್, ಪುತ್ರಿಯರಾದ ಲಕ್ಷ್ಮೀ, ಪೂರ್ಣಿಮಾ ಅವರು ಗಾಜನೂರಿನಲ್ಲಿದ್ದರು. ಎಲ್ಲರೂ ಸೇರಿ ಮಾತುಕತೆ ನಡೆಸಿ ಪಿತ್ರಾರ್ಜಿತ ಆಸ್ತಿಯನ್ನು ಸಮಪಾಲಾಗಿ ಹಂಚಿಕೊಳ್ಳಲು ಮುಂದಾಗಿ ಅದಕ್ಕೆ ಬೇಕಾದ ಕಾನೂನು ರೀತಿಯ ವ್ಯವಹಾರಗಳನ್ನು ಮಾಡಿದ್ದಾರೆ ಎಂಬುದು ಇದೀಗ ಸುದ್ದಿಯಲ್ಲಿರುವ ವಿಚಾರವಾಗಿದೆ. [ರಾಜ್-ಲೀಲಾವತಿ ಸಂಬಂಧವೇ ಆ ಪುಸ್ತಕದ ಮುಖ್ಯಭಾಗ: ರವಿಬೆಳಗೆರೆ]

Property of Rajkumar in Gajanur distributed among children

ಇನ್ನು ರಾಜ್ ಕುಟುಂಬದ ಸದಸ್ಯರು ಗಾಜನೂರಿಗೆ ಭೇಟಿ ನೀಡಿದ್ದ ಸಂದರ್ಭ ಅವರ ಸೋದರ ಅತ್ತೆ ಮನೆಗೆ ತೆರಳಿ ಅವರನ್ನು ಮಾತನಾಡಿಸಿಕೊಂಡು ಹೋದರು ಎನ್ನಲಾಗಿದೆ.

ಈ ನಡುವೆ ಗಾಜನೂರಿನಿಂದ ಮೈಸೂರು ಮೂಲಕ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಸಮೇತ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಕಂಠೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. [ಈ ಹಳ್ಳಿಯಲ್ಲಿ ಸತ್ತರೆ ಮಣ್ಣು ಮಾಡುವವರೂ ಗತಿಯಿಲ್ಲ!]

Property of Rajkumar in Gajanur distributed among children

ಈ ಸಂದರ್ಭ ಮಾತನಾಡಿದ ಅವರು ದೇವಾಲಯಕ್ಕೆ ಬರುವಂತಹ ಯೋಜನೆ ಇರಲಿಲ್ಲ. ಗಾಜನೂರಿಗೆ ಹೋಗಿ ಬೆಂಗಳೂರಿಗೆ ಹಿಂತಿರುಗುವ ವೇಳೆ ದೇಗುಲಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ. ಒಟ್ಟಾರೆ ರಾಜ್ ಕುಟುಂಬದ ಎಲ್ಲ ಸದಸ್ಯರು ಗಾಜನೂರಿನಲ್ಲಿ ಕಾಣಿಸಿಕೊಂಡಿದ್ದಂತೂ ಸತ್ಯಸ್ಯಸತ್ಯ. [ಅಮಾವಾಸ್ಯೆ ರಾತ್ರಿ ಅಂದುಕೊಂಡದ್ದು ಕಾಡುಗಳ್ಳ ಸಾಧಿಸಿದ್ದು ಹೀಗೆ...]

ಇನ್ನು ಡಾ.ರಾಜ್‌ಕುಮಾರ್ ಅವರ ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದ ಸದಸ್ಯರು ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹೊರ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ರಾಘವೇಂದ್ರ ರಾಜ್‌ಕುಮಾರ್, "ದೊಡ್ಡಮನೆ ಎಂದಿಗೂ ಹರಿದು ಹಂಚಿಕೆಯಾಗಲ್ಲ. ಆಸ್ತಿ ಹಂಚಿಕೆ ವಿಚಾರದಲ್ಲಿ ತಮ್ಮ ತಾಯಿ ನಿರ್ಧಾರ ಕೈಗೊಳ್ಳುತ್ತಾರೆ. ಜನಕ್ಕೆ ತಪ್ಪು ಸಂದೇಶ ಹೋಗಬಾರದು" ಎಂದು ಹೇಳಿದ್ದಾರೆ. ಆದರೆ ಗಾಜನೂರಿಗೆ ಕುಟುಂಬದ ಸದಸ್ಯರು ತೆರಳಿದ್ದನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತಂತೆ ಜನರಲ್ಲಿ ಕುತೂಹಲ ಹಾಗೆಯೇ ಉಳಿದಿದ್ದು, ಮುಂದಿನ ದಿನಗಳಲ್ಲಿ ಇದೆಲ್ಲದಕ್ಕೂ ಉತ್ತರ ಸಿಗಬಹುದೇನೋ? [ರಾಜ್, ಉದಯಶಂಕರ್ ಇಂದೇನಾದರೂ ಇದ್ದಿದ್ದರೆ...]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rumour is spreading that agricultural land in Gajanur near Chamarajanagar, belong to Kannada actor Dr Rajkumar has been divided into 5 parts and distributed equal to all his children. Raghavendra Rajkumar has denied the the news.
Please Wait while comments are loading...