ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರಿಗೆ ಮನೆಯಲ್ಲೇ ಆತಿಥ್ಯ

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 18 : ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಶ, ವಿದೇಶಗಳಿಂದ ಆಗಮಿಸುವ ಸಾಹಿತಿ, ಗಣ್ಯರಿಗೆ ತಮ್ಮ ಮನೆಯಲ್ಲಿಯೇ ಆತಿಥ್ಯ ನೀಡಲು ಮೈಸೂರಿನ ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದು, ಸಾಂಸ್ಕೃತಿಕ ನಗರಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನ.24ರಿಂದ 3 ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದ ರೂಪುರೇಷಡ ಸಿದ್ಧತೆ ಕುರಿತು ಚರ್ಚಿಸಲು, ಸಲಹೆಗಳನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸಮ್ಮೇಳನದ ಮೊದಲ ಸಾರ್ವಜನಿಕ ಸಭೆಯಲ್ಲಿ ಹಾಜರಿದ್ದ ಸಾಹಿತ್ಯಪ್ರಿಯರು, ನಾಗರಿಕರು ಅತಿಥಿ ಸತ್ಕಾರಕ್ಕೆ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದು ಎಲ್ಲರ ಗಮನ ಸೆಳೆಯಿತು.

'ನಾಡು ನುಡಿ ಹಬ್ಬದಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ದೊಡ್ಡ ದೊಡ್ಡ ಸಾಹಿತಿಗಳು ಬರುತ್ತಾರೆ. ಅವರನ್ನು ಹೋಟೆಲ್ ಗಳಲ್ಲಿ ಇರಿಸುವುದು ಸರಿಹೋಗದು. ಅಪರೂಪದ ಈ ಅತಿಥಿಗಳನ್ನು ನಮ್ಮದೇ ಮನೆಯಲ್ಲಿ 3 ದಿನಗಳ ಕಾಲ ಇಟ್ಟುಕೊಂಡು ಸತ್ಕರಿಸಲು ನಮಗೂ ಅವಕಾಶ ಮಾಡಿ ಕೊಡಬೇಕು' ಎಂದು ಸಭಿಕರಲ್ಲಿ ಕೆಲವರು ಮನವಿ ಮಾಡಿದರು. ಆ ಮೂಲಕ ಮೈಸೂರಿಗರು ಅತಿಥಿ ಸತ್ಕಾರದಲ್ಲೂ ಮುಂದು ಎಂಬುದನ್ನು ಸಾಬೀತು ಪಡಿಸಲು ಸಜ್ಜಾದರು.

Preview meeting for Mysuru Kannada Sahitya Sammelana

ಪ್ರೊ.ಮಲ್ಲಣ್ಣ ಪ್ರಸ್ತಾಪ: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಮನು ಬಳಿಗಾರ್ ಅವರ ಅಧ್ಯಕ್ಷತೆಯ ಸಭೆಯಲ್ಲಿ ಮಾತನಾಡಿದ ಜನಪದ ಗಾಯಕ ಪ್ರೊ.ಎಸ್. ಮಲ್ಲಣ್ಣ ಅವರು, ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳ ಸತ್ಕಾರದ ಹೊಣೆ ಹೊರಲು ಆಸಕ್ತಿ ಇರುವವರಿಗೆ ಅವಕಾಶ ಮಾಡಿಕೊಡಿ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿ. ನಾನು 4 ರಿಂದ 5 ಮಂದಿ ಅತಿಥಿಗಳಿಗೆ ನನ್ನ ಮನೆಯಲ್ಲಿಯೇ ವಾಸ್ತವ್ಯ, ಆತಿಥ್ಯಕ್ಕೆ ಅವಕಾಶ ಕಲ್ಪಿಸುತ್ತೇನೆ ಎಂದು ಹೇಳಿದರು.

ಇದರಿಂದ ಉತ್ತೇಜಿತರಾದ ಪ್ರೊ.ಕೆ.ಟಿ.ವೀರಪ್ಪ ಅವರೂ, ನಾನೂ ಮೂರ್ನಾಲ್ಕು ಅತಿಥಿಗಳ ಸತ್ಕಾರದ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದರು. ಮೈಸೂರು ಹೋಟೆಲ್ ಗಳ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಅವರು, ಅತಿಥಿಗಳಿಗೆ ಊಟೋಪಚಾರದ ವ್ಯವಸ್ಥೆ ಜವಾಬ್ದಾರಿಯನ್ನು ನಮ್ಮ ಸಂಘಕ್ಕೆ ವಹಿಸಿಕೊಡಬೇಕು ಎಂದು ಮನವಿ ಮಾಡಿದರು. ಇದರ ಹೊರತಾಗಿಯೂ ಸಮ್ಮೇಳನಕ್ಕೆ ಸಂಘದ ಸಂಪೂರ್ಣ ಸಹಕಾರ ಇರುತ್ತದೆ. ಸಮ್ಮೇಳನದಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ಆಶಿಸಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ಅವರು, ಸಾಹಿತ್ಯ ಸಮ್ಮೇಳನದ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಬೇಕು ಎಂದು ಒತ್ತಾಯಿಸಿದರು. ಕೆಲವರು ದಬ್ಬಾಳಿಕೆ ಧೋರಣೆ ಹೊಂದಿದ್ದಾರೆ. ಅದನ್ನು ತ್ಯಜಿಸಿ ಸಮ್ಮೇಳನ ನಡೆಸಲಿ. ಅಲ್ಲದೆ, ಅರಮನೆ ಅಂಗಳದಲ್ಲಿ ಸಮ್ಮೇಳನ ಜರುಗಲಿ ಎಂದು ಅವರು ಸಲಹೆ ನೀಡಿದರು.

ಸಮ್ಮೇಳನಕ್ಕೆ ಅಪಸ್ವರ ಬೇಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭ್ರಷ್ಟಾಚಾರ ನಡೆಸಿದ್ದರೆ, ಅದರ ಪಾಡಿಗೆ ಅದರ ವಿಚಾರಣೆ ನಡೆಸಲಿ ಎಂದು ಹೇಳುವ ಮೂಲಕ ಸಭೆಯಲ್ಲಿ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ಕಿವಿಮಾತು ಹೇಳಿದರು. ಪುಸ್ತಕ ಮಳಿಗೆಗಳ ಠೇವಣಿ ಶುಲ್ಕವನ್ನು 2,500 ರೂ.ಗೆ ನಿಗದಿಪಡಿಸಿದ್ದು, ಅದನ್ನು 1,000 ರೂ.ಗೆ ಕಡಿತಗೊಳಿಸಬೇಕು. ಊಟದ ವ್ಯವಸ್ಥೆ ಸಮರ್ಪಕವಾಗುವಂತೆ ಕ್ರಮ ವಹಿಸಬೇಕು. ಕನ್ನಡಕ್ಕೆ ಶಬ್ದಕೋಶದ ಕೊಡುಗೆ ನೀಡಿದ ಕಿಟ್ಟೆಲ್ ಪುಸ್ತಕವನ್ನು ಮರುಮುದಣ್ರ ಮಾಡಿ ಹಂಚಿಕೆ ಮಾಡಬೇಕು. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಗೋಷ್ಠಿ ಇರಲಿ. ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳಿ. ದಲಿತ ಸಾಹಿತ್ಯಕ್ಕೂ ಪ್ರಚಾರ ದೊರೆಯಲಿ. ಅಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿರಲಿ. ಜಾನಪದ ಕಲಾತಂಡಗಳಿಗೆ ಆದ್ಯತೆ ನೀಡಬೇಕು. ದೇಜಗೌ ಸಂಸ್ಮರಣೆ ಗೋಷ್ಠಿ ನಡೆಯಲಿ, ಮಹಾದ್ವಾರಕ್ಕೆ ಅವರ ಹೆಸರಿಡಬೇಕು, ಶೌಚಾಲಯ, ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂಬ ಸಲಹೆಗಳೂ ಸಭೆಯಲ್ಲಿ ಕೇಳಿಬಂದವು.

ಸಭೆಯಲ್ಲಿ ಪರ-ವಿರೋಧದ ವಾಕ್ಸಮರ :
ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರ ಸಲಹೆ ಪಡೆಯಲು ಕರೆದಿದ್ದ ಸಭೆಯಲ್ಲಿ ಪ್ರತಿರೋಧ ವ್ಯಕ್ತವಾಯಿತಲ್ಲದೆ, ಭಿನ್ನಾಭಿಪ್ರಾಯ, ಗೊಂದಲ, ಗದ್ದಲ, ಮಾತಿನ ಚಕಮಕಿ, ಜಿಲ್ಲಾ ಕಸಾಪದಲ್ಲಿ ಹಿಂದಿನ ಅವಧಿಗಳಲ್ಲಿ ನಡೆದಿರುವ ಅಕ್ರಮದ ತನಿಖೆಗೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಸಭೆಯನ್ನು ಬಹಿಷ್ಕರಿಸಿದ ಘಟನೆ ನಡೆಯಿತು. ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಪರಿಷತ್ ನ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ಅವಕಾಶ ನೀಡುತ್ತಿದ್ದಂತೆ, ಜನಾರ್ದನ್ ಎಂಬವರು ಎದ್ದು ನಿಂತರು, ಆದರೆ, ಕನ್ನಡ ಚಳವಳಿ ಹೋರಾಟಗಾರ ಬಿ.ಎ.ಶಿವಶಂಕರ್ ತಕ್ಷಣ ಎದ್ದು ನಿಂತು ಮಾತನಾಡಲಾರಂಭಿಸಿದರು.

ಜನಾರ್ದನ್ ಬೆಂಬಲಿಸಿದ ಸಾಹಿತಿಗಳಾದ ಬನ್ನೂರು ಕೆ.ರಾಜು ಮತ್ತು ಡಿ.ಎನ್.ಕೃಷ್ಣ ಮೂರ್ತಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಕೆಲವರು ಶಿವಶಂಕರ್ ಅವರನ್ನು ಬೆಂಬಲಿಸಿದರು. ಆಗ ಗಲಾಟೆ ಶುರುವಾಗಿ ಯಾರೂ ಏನು ಹೇಳುತ್ತಿದ್ದಾರೆ ಎಂಬುದ ಕೇಳಿಸದಂತಾಯಿತು. ಆಗ ಶಾಸಕ ವಾಸು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ, ಸಾಹಿತಿ ಬನ್ನೂರು ಕೆ.ರಾಜು ಅವರಿಗೆ ಮಾತನಾಡಲು ಅವಕಾಶ ನೀಡಿದರು. ಬನ್ನೂರು ಕೆ. ರಾಜು ಅವರು, ಕೆಲವರು ನನ್ನನ್ನು ಸಮ್ಮೇಳನ ವಿರೋಧಿ ಎಂದು ಬಿಂಬಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ. ನಾನು ಆತಂಕದಲ್ಲಿದ್ದೇನೆ ಎಂದು ಹೇಳುತ್ತಿದ್ದಂತೆ ಹಲವರು ಅದಕ್ಕೆ ವಿರೋಧಿಸಿ ವೈಯಕ್ತಿಕ ವಿಚಾರ ಬೇಡ. ಕೇವಲ ಸಲಹೆ ನೀಡಿ ಎಂದಾಗ ಮತ್ತೆ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು.

ವಾಸು, ಮಹಾಪೌರ ಎಂ.ಜೆ.ರವಿಕುಮಾರ್ ಇಬ್ಬರೂ ಸಮಾಧಾನಪಡಿಸಿದರು. ಆಗ ಬನ್ನೂರು ಕೆ. ರಾಜು ನಾವು ಸಮ್ಮೇಳನ ವಿರೋಧಿಗಳಲ್ಲ. ಆದರೆ, ಸಮ್ಮೇಳನ ನಡೆಸುತ್ತಿರುವ ವಿಧಾನ ಸರಿ ಇಲ್ಲ. ಜಿಲ್ಲಾ ಕಸಾಪದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಅದರ ತನಿಖೆಯಾಗಬೇಕು. ಅದಕ್ಕಾಗಿ ಸಮಿತಿ ರಚನೆಯಾಗಬೇಕು. ಅದು ವರದಿ ತಯಾರಿಸುವಂತೆ ಆದೇಶ ನೀಡಬೇಕು. ಆಗ ನಾವು ಕೂಡ ಕನ್ನಡ ತೇರು ಎಳೆಯಲು ಕೈಜೋಡಿಸುತ್ತೇವೆ ಎಂದು ಅಭಿಪ್ರಾಯಪಟ್ಟರು. ಗಲಾಟೆ ಮುಂದುವರೆದು ಒಂದು ಹಂತದಲ್ಲಿ ಸಮ್ಮೇಳನ ಪರ- ವಿರೋಧ ಬಣಗಳ ನಡುವೆ ಕೈ ಕೈ ಮಿಲಾಯಿಸುವ ಆತಂಕವೂ ಎದುರಾಗಿತ್ತು. ನಂತರ ಕನ್ನಡ ರಕ್ಷಣಾ ವೇದಿಕೆ, ಮೈಸೂರು ಕನ್ನಡ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸಮ್ಮೇಳನಕ್ಕೆ ಧಿಕ್ಕಾರ ಎಂದು ಕೂಗುತ್ತಾ ಸಭೆಯಿಂದ ಹೊರಗೆ ನಡೆದರೆ, ಸಭೆಯಲ್ಲಿದ್ದ ಹಲವರು ಸಮ್ಮೇಳನಕ್ಕೆ ಜೈ, ಕನ್ನಡಕ್ಕೆ ಜೈ ಎಂದು ಪ್ರತಿಯಾಗಿ ಕೂಗಿದರು.

English summary
A preview meeting was held to discuss the conduct of Akhila Bharata Kannada Sahitya Sammelana in Mysuru on Nov 24th to 26th. The meeting was chaired by Kannada sahitya parishat state president Manu Baligar. He was happy that Kannada Sahitya Sammelana is being held here in the city after a gap of nearly 27 years. He asked the participants' for suggestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X