ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 01 : ಮಳೆ ಬಂತೆಂದರೆ ಸೋರುವ ಸೂರು.. ಬಿರುಕುಬಿಟ್ಟ ಗೋಡೆಗಳು ಮೂರು.. ಮುರಿದು ಹೋದ ನಲ್ಲಿಯಲ್ಲಿ ಬಾರದ ನೀರು.. ಕಟ್ಟಡ ಯಾವಾಗ ಬೀಳುತ್ತೋ ಎಂಬ ಭಯದಲ್ಲಿ ಪಾಠ ಕೇಳುವ ಮತ್ತು ಪಾಠ ಹೇಳುವ ಶಿಕ್ಷಕರು.. ಪ್ರಕೃತಿ ಕರೆಗೆ ಬಯಲಿಗೆ ಓಡಬೇಕಾದ ಅನಿವಾರ್ಯತೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು...

ಜೂನ್ 1ರಂದು ಹಲವಾರು ಶಾಲೆಗಳಲ್ಲಿ ಗಂಟೆ ಬಾರಿಸಿದೆ. ಪಾಟಿಚೀಲ ಏರಿಸಿಕೊಂಡ ಮಕ್ಕಳು ಶಾಲೆಯತ್ತ ಕಾಲು ಹಾಕಿದ್ದಾರೆ. ಇಂಥ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಸೇರಿದ, ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯಪೂರ್ವದ ಸರಕಾರಿ ಶಾಲೆಯ ಸ್ಥಿತಿಗತಿ ಹೇಗೆ ಎಂದು ನೋಡಲು ನಮ್ಮ ವರದಿಗಾರರು ಹೋದಾಗ ಕಂಡುಬಂದ ಶಾಲೆಯ ದುಃಸ್ಥಿತಿಯಿದು.

ಇಂಥ ಶಾಲೆಗೆ ಮಕ್ಕಳು ಖುಷಿಖುಷಿಯಿಂದ ಹೋಗಲು ಹೇಗೆ ಸಾಧ್ಯ ಸಿದ್ದರಾಮಯ್ಯನವರೆ? ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಅಭಿಯಾನ ಹಮ್ಮಿಕೊಂಡು ಅದಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಸರ್ಕಾರ, ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಕಾಳಜಿ (ನಿಷ್ಕಾಳಜಿ) ವಹಿಸುತ್ತಿದೆ ಎಂಬುದಕ್ಕೆ ಈ ಶಾಲೆ ನಿದರ್ಶನವಾಗಿದೆ.

ಗ್ರಾಮದ ಹಳೆಯ ಆಸ್ಪತ್ರೆ ಮುಂಭಾಗವಿರುವ ಈ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ತೆರಳುವ ಪೋಷಕರು ಅಲ್ಲಿನ ಅವ್ಯವಸ್ಥೆ ನೋಡಿದರೆ ಸಾಲ ಮಾಡಿದರೂ ಪರ್ವಾಗಿಲ್ಲ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತೇನೆಂದು ಹಿಂತಿರುಗಿ ಬಂದು ಬಿಡುತ್ತಾರೆ. ಇದರಲ್ಲಿ ಅನುಮಾನವೇ ಇಲ್ಲ. [ಇಂಥ ವಿಕೃತ ಮನಸ್ಸಿನ ಕಿಡಿಗೇಡಿಗಳು ನಿಮ್ಮೂರಲ್ಲೂ ಇರಬಹುದು]

ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?

ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?

ಕಾರಣವಿಷ್ಟೆ, ಮೇಲ್ಛಾವಣಿಗೆ ಹಾಕಿರುವ ಹೆಂಚುಗಳು ಒಡೆದು ಕೆಲವು ನೆಲಕ್ಕೆ ಬಿದ್ದಿದ್ದರೆ, ಮತ್ತೆ ಕೆಲವು ನೇತಾಡುತ್ತಿದ್ದು ಯಾವಾಗ ಬೇಕಾದರೂ ಮಕ್ಕಳ ತಲೆಯ ಮೇಲೆ ಬೀಳಬಹುದು. ಇಂತಹ ಸ್ಥಿತಿಯಲ್ಲಿ ಮಕ್ಕಳು ಪಾಠ ಕಲಿಯುವುದಾದರೂ ಹೇಗೆ? ಒಂದು ವೇಳೆ ಮೇಲ್ಛಾವಣಿಯಿಂದ ಹೆಂಚುಗಳು ಕೆಳಕ್ಕೆ ಬಿದ್ದು ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?

ಸೆಂಚುರಿ ಸನಿಹದಲ್ಲಿ ಸರಕಾರಿ ಶಾಲೆ

ಸೆಂಚುರಿ ಸನಿಹದಲ್ಲಿ ಸರಕಾರಿ ಶಾಲೆ

ಇನ್ನು ಈ ಕಟ್ಟಡಕ್ಕೆ ಸುಮಾರು 90 ವರ್ಷಗಳಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಆದ್ದರಿಂದ ಮಳೆಗಾಳಿಗೆ ಬಿದ್ದರೂ ಬೀಳಬಹುದು. ಸೆಂಚುರಿ ಬಾರಿಸುವುದು ಅನುಮಾನವಷ್ಟೇ ಅಲ್ಲ, ಅಸಾಧ್ಯ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಮಕ್ಕಳು ಪಾಠ ಕಲಿಯುವುದು ಅನಿವಾರ್ಯವಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ

ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ

ಈ ಶಾಲೆಯು 1926ರಲ್ಲಿ ಪ್ರಾರಂಭವಾಗಿದ್ದು 1ನೇ ತರಗತಿಯಿಂದ 7ನೇ ತರಗತಿಯವರೆಗೆ ಕಲಿಯಲು ಅವಕಾಶವಿದೆ. ಇದೀಗ ಕ್ಲಸ್ಟರ್ ಮಟ್ಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಎಂಬ ಹೆಮ್ಮೆಯೂ ಇದೆ. ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಜಮ್ನಾಲಾಲ್ ಬಜಾಜ್ ಪ್ರಶಸ್ತಿ ವಿಜೇತ ತಗಡೂರು ರಾಮಚಂದ್ರ ರಾವ್ ಅವರಿದ್ದ ಊರಿನ ಸರಕಾರಿ ಶಾಲೆಯ ಸ್ಥಿತಿ ಹೀಗಾಗಿದ್ದು ನಿಜಕ್ಕೂ ದುರಾದೃಷ್ಟಕರ.

ಮಳೆ ಬಂದರೆ ನೀರು ತುಂಬುತ್ತದೆ

ಮಳೆ ಬಂದರೆ ನೀರು ತುಂಬುತ್ತದೆ

ಸುಮಾರು ಹನ್ನೆರಡು ಕೊಠಡಿ ಇರುವ ಶಾಲೆಯಲ್ಲಿ ಇದುವರೆಗೆ ಕಟ್ಟಡವನ್ನು ದುರಸ್ತಿ ಮಾಡದ ಕಾರಣ ಎಂಟು ಕೊಠಡಿಗಳು ದುಸ್ಥಿತಿಯಲ್ಲಿವೆ. ಈ ಕೊಠಡಿಯ ಕಿಟಕಿ, ಬಾಗಿಲು ಆಗಲೋ ಈಗಲೋ ಅನ್ನುವಂತಿವೆ. ಇನ್ನು ಮೇಲ್ಛಾವಣಿಯ ಹೆಂಚುಗಳು ಒಡೆದು ಹೋಗಿವೆ. ಮಳೆ ಬಂದರೆ ನೀರು ತುಂಬುತ್ತದೆ. ಅಷ್ಟೇ ಅಲ್ಲ ಪಕ್ಷಿಗಳು ಸೇರಿದಂತೆ ಜಂತುಗಳು ಆಶ್ರಯ ಪಡೆದಿವೆ.

ಮಕ್ಕಳಿಗೆ ಶೌಚಾಲಯವೇ ಇಲ್ಲಿಲ್ಲ

ಮಕ್ಕಳಿಗೆ ಶೌಚಾಲಯವೇ ಇಲ್ಲಿಲ್ಲ

ಇಂತಹ ದುಃಸ್ಥಿತಿಯಲ್ಲಿ ಶಾಲೆಯ ಕಟ್ಟಡವಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಸುಮಾರು 204 ಮಕ್ಕಳು ಕಲಿಯುತ್ತಿದ್ದಾರೆ. ವಿಷಾದದ ವಿಷಯ ಏನೆಂದರೆ, ಈ ಮಕ್ಕಳಿಗೆ ಶೌಚಾಲಯವೇ ಇಲ್ಲಿಲ್ಲ. ಈಗಲೂ ಬಯಲಿಗೆ ಹೋಗಬೇಕಾಗಿದೆ. ಸ್ವಚ್ಛತೆ ಬಗ್ಗೆ ದೇಶದಾದ್ಯಂತ ಅಭಿಯಾನ ನಡೆಯುತ್ತಿದ್ದರೆ ಇಲ್ಲಿ ಅದುವೇ ಇಲ್ಲದಾಗಿದೆ!

ಕೈತೊಳೆಯಲು ನಲ್ಲಿಗಳಿವೆ, ಆದರೆ ನೀರಿಲ್ಲ!

ಕೈತೊಳೆಯಲು ನಲ್ಲಿಗಳಿವೆ, ಆದರೆ ನೀರಿಲ್ಲ!

ಇನ್ನು ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2008ರಲ್ಲಿ ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಅಕ್ಷರ ದಾಸೋಹ ಭವನವನ್ನು ನಿರ್ಮಾಣ ಮಾಡಿದ್ದಾರೆ. ಮಕ್ಕಳಿಗೆ ಕೈ ತೊಳೆಯಲು ಅನುಕೂಲವಾಗುವಂತೆ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ಅದು ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ. ನಲ್ಲಿಗಳೆಲ್ಲ ಕಿತ್ತುಹೋಗಿವೆ.

ಸಿದ್ದು ತವರು ಕ್ಷೇತ್ರದ ಸರಕಾರಿ ಶಾಲೆ

ಸಿದ್ದು ತವರು ಕ್ಷೇತ್ರದ ಸರಕಾರಿ ಶಾಲೆ

ಯಾವುದೋ ಕುಗ್ರಾಮದಲ್ಲಿ ಈ ಶಾಲೆಯಿದ್ದಿದ್ದರೆ ಅಚ್ಚರಿ ಪಡಬೇಕಾಗಿರಲಿಲ್ಲ. ಆದರೆ ಸಿಎಂ ತವರು ಕ್ಷೇತ್ರದಲ್ಲೇ ಸ್ವಾತಂತ್ರ್ಯಪೂರ್ವದ ಸರ್ಕಾರಿ ಶಾಲೆ ಅಭಿವೃದ್ಧಿ ಕಾಣದೆ ಅವಸಾನದ ಅಂಚಿಗೆ ತಲುಪಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.

ಮಿಲಿಯನ್ ಡಾಲರ್ ಪ್ರಶ್ನೆ ಉತ್ತರಿಸ್ತಾರಾ ಸಚಿವರು?

ಮಿಲಿಯನ್ ಡಾಲರ್ ಪ್ರಶ್ನೆ ಉತ್ತರಿಸ್ತಾರಾ ಸಚಿವರು?

ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕಳೆದ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಆರಿಸಿ ಬಂದಿರುವ ಕಾಂಗ್ರೆಸ್ಸಿನ ವಿ ಶ್ರೀನಿವಾಸ ಪ್ರಸಾದ (ಕಂದಾಯ ಸಚಿವ) ಅವರಾದರೂ ಮುತುವರ್ಜಿ ವಹಿಸಿ, ಸೆಂಚುರಿ ಹೊಸ್ತಿಲಲ್ಲಿ ಇರುವ ಶಾಲೆಗೆ ಕಾಯಕಲ್ಪ ಒದಗಿಸುತ್ತಾರೆಯೆ?

English summary
Back to School : Dilapidated condition makes a 90 year-old Karnataka government school cry for safety. A freelance journalist click photos, narrates pathetic story from village Tagaduru in Nanjangud Taluk, Mysuru district. This village comes under Varuna constituency, represented by CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X