ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ದಿನ: ಮನೆ ಮನೆಗೆ ಸೈಕಲ್ ತುಳಿಯುವ ಅಂಚೆಯಣ್ಣನ ಕಥೆಯಿದು..

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 9: ಅಂಚೆಯಣ್ಣ ಬಂದ.. ನಮಗೆ ಅಂಚೆ ತಂದ.. ದೂರದೂರಿನಿಂದ ಅಣ್ಣ ಬರುವೆನೆಂದ..

ಅಂಚೆಯಣ್ಣನ ಬಗೆಗಿನ ಹೀಗೊಂದು ಹಾಡನ್ನು ನಾವೆಲ್ಲಾ ಸಣ್ಣವರಿದ್ದಾಗ ಗುನುಗುತ್ತಿದ್ದೆವು. ಇಂದು ವಿಶ್ವ ಅಂಚೆ ದಿನ. ಇಂದಿನ ಸಂಪೂರ್ಣ ದಿನ ಸಮರ್ಪಿತವಾಗಬೇಕಾದದ್ದು ನಮಗೆ ಸಂಬಂಧಿಸಿದ ಅಮೂಲ್ಯ ಓಲೆಯನ್ನು ತಲುಪಿಸುವ ಈ ಪೋಸ್ಟ್ ಮ್ಯಾನ್ ಗಳೆಂಬ ನಾವಿಕರಿಗೆ.

ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವನ್ನೂ ಮಾಡುವವರು ಇವರೇ. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಉಳಿತಾಯ ಖಾತೆ, ಮನಿ ಆರ್ಡರ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಅಂಚೆಯ ಸೇವೆಗಳನ್ನೆಲ್ಲಾ ಇವರು ನಿಭಾಯಿಸುತ್ತಾರೆ.

On this 'Indian Postal day' Meet Mr. Humble Post Man

ಇಂದು ಬದಲಾವಣೆಯ ಗಾಳಿ ಎಲ್ಲ ರಂಗಗಳಲ್ಲೂ ಬೀಸತೊಡಗಿದೆ. ಇದಕ್ಕೆ ಅಂಚೆ ಸೇವೆಯೂ ಹೊರತಲ್ಲ. ಮನೆಯವರು, ಬಂಧು ಮಿತ್ರರು, ಸ್ನೇಹಿತರು, ಪ್ರೇಮಿಗಳು, ಕೋರ್ಟು ಕಛೇರಿ ವ್ಯವಹಾರಸ್ಥರು ದಿನ-ವಾರ-ತಿಂಗಳುಗಳ ಕಾಲ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗಿಲ್ಲ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಅಂಚೆ ಜನ ಮಾನಸದಿಂದ ದೂರ ಉಳಿದಿದೆ.

ಆದರೆ ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಸ್ಥಿರ ದೂರವಾಣಿ ಸೌಲಭ್ಯ ಮಿತಿಯಲ್ಲಿದ್ದ, ಕಂಪ್ಯೂಟರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಇಲ್ಲದ ದಿನಗಳಲ್ಲಿ ಅಂಚೆಯೇ ಜನರ ಸಂಪರ್ಕ ಸೇತುವೆಗಳಾಗಿದ್ದವು.

ಹಳೆ ನೆನಪನ್ನು ಮೆಲುಕು ಹಾಕುವ ಅಂಚೆ ಸಿಬ್ಬಂದಿ

"ಯಾವ ದಿನಾಚರಣೆ ಮೇಡಂ...? ನಮಗೆ ಇರುವ ಕೆಲಸವೇ ಸಾಕಾಗಿ ಹೋಗಿದೆ. ಅದರಲ್ಲಿಯೂ ಅಂಚೆ ಇಲಾಖೆ ಡಿಜಿಟಲೀಕರಣಗೊಳಿಸಿದ್ದಾರೆ. ನಮಗೆ ಅದರ ಅರಿವೇ ಇಲ್ಲ. ನಾವು ಕೆಲಸಕ್ಕೆ ಸೇರಿ 35 ವರುಷವಾಯಿತು. ಕಂಪ್ಯೂಟರ್ ಅರಿವಿರಲಿಲ್ಲ. ಇಲಾಖೆ ವತಿಯಿಂದ ತರಬೇತಿ ಕೊಡಿಸಿದರು. ಆದರೂ ದಿನಕ್ಕೊಂದು ಬದಲಾವಣೆ ಆಗುತ್ತಿದೆ. ಕೆಲಸ ಮಾಡಲು ಕಷ್ಟವಾಗುತ್ತದೆ. ಏನೆಂದು ಹೇಳೋಣ..," ಎಂದು ಎದುಸಿರು ಬಿಡುತ್ತಾರೆ ಮೈಸೂರಿನ ಪೋಸ್ಟ್ ಮಾಸ್ಟರ್ ಗಿರೀಶ್.

ಇರುವ ಕಂಪ್ಯೂಟರ್ ಗಳಿಗೂ ವಾರದಲ್ಲಿ 3 ದಿನ ಸರ್ವರ್ ಪ್ರಾಬ್ಲಂ ಬೇರೇ.. ಕೆಲಸವೇ ತುಂಬ ಕ್ಲಿಷ್ಟಕರವಾಗಿ.. ಉಪಾಯವಿಲ್ಲ ಹೇಗೋ ಹೊಂದಿಕೊಳ್ಳುವುದು," ಎಂದು ತಮ್ಮ ಮೇಲಿನ ಒತ್ತಡದ ನಡುವೆಯೂ ಮುಗುಳ್ನಗ್ಗುತ್ತಾರೆ ಗಿರೀಶ್.

"ಈಗಲೂ ನಮ್ಮ ಕಚೇರಿಗೆ 5 ಸಾವಿರಕ್ಕೂ ಹೆಚ್ಚು ಪತ್ರಗಳು ಬರುತ್ತಿವೆ. ಸರಕಾರಿ ಪತ್ರಗಳು, ದಾಖಲೆಗಳು, ಕೋರ್ಟ್ ಮಾಹಿತಿಗಳು ರವಾನೆಯಾಗುವುದು ನಮ್ಮಿಂದಲೇ. ಬ್ಯಾಂಕಿಂಗ್ ಕ್ಷೇತ್ರ, ವಿಮೆ ಎಲ್ಲದಕ್ಕೂ ಅಂಚೆ ಇಲಾಖೆ ಬೇರಿದ್ದಂತೆ. ನಾವೇನೂ ಕೆಲಸ ನಿರ್ವಹಿಸುವುದಿಲ್ಲವೆಂದು ಜನರು ಮಾತನಾಡಿಕೊಳ್ಳುತ್ತಾರೆ. ಆಗೆಲ್ಲಾ ನಮಗೆ ಬೇಸರವಾಗುತ್ತದೆ," ಎನ್ನುತ್ತಾರೆ ಅವರು.

"ಮುಂಚಿನದಕ್ಕಿಂತ ಮನಿ ಆರ್ಡರ್ ಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗೇನೂ ನಿಂತಿಲ್ಲ. ವಿಧವಾ ಪಿಂಚಣಿ, ಆಧಾರ್ ಕಾರ್ಡ್ ಸೇರಿದಂತೆ ಹತ್ತು ಹಲವು ತಲುಪಿಸುವ ಜವಾಬ್ದಾರಿ ನಮ್ಮದು. ನೋಟು ಅಮಾನ್ಯಗೊಂಡ ಸಂದರ್ಭ ನಾವೂ ಕೂಡಾ ಸಹಾಯ ಮಾಡಿದ್ದೇವೆ," ಎನ್ನುವ ಻ಅವರು ನಮ್ಮ ಕೆಲಸದ ಸಾರ್ಥಕತೆ ನಮಗಿದೆ ಎನ್ನುತ್ತಾರೆ.

ಹೊಸ ಯೋಜನೆಗಳು ಬಂದಿದೆ

ಬದಲಾವಣೆ ಹೇಗೆ ಜಗದ ನಿಯಮವೋ ಹಾಗೆಯೇ ಅಂಚೆ ಇಲಾಖೆ ಆಯಾ ಕಾಲಘಟ್ಟಕ್ಕೆ ಸಣ್ಣ ಸಣ್ಣ ಪರಿವರ್ತನೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ. ಆರಂಭದಲ್ಲಿ ಪತ್ರ ರವಾನೆಗಷ್ಟೇ ಸೀಮಿತವಾಗಿದ್ದ ಇಲಾಖೆ ತರುವಾಯ ಅನೇಕ ಸೇವೆಗಳನ್ನು ನೀಡುತ್ತಾ ಬಂದಿದೆ.

ಇವತ್ತು ಆರ್.ಡಿ, ಎಫ್.ಡಿ, ಎಸ್.ಬಿ, ಎನ್.ಎಸ್.ಸಿ, ಎಂಐಸಿ, ಕೆವಿಸಿ, ಪಿಪಿಎಫ್, ಮನಿ ಆರ್ಡರ್, ಪಿಎಲ್ಐ ಗ್ರಾಮೀಣ ಅಂಚೆ ಜೀವ ವಿಮೆ ಸೇರಿ ತೀರಾ ಇತ್ತೀಚೆಗಿನ ಕೇಂದ್ರ ಸರ್ಕಾರದ ಬೇಟಿ ಪಡಾವೊ, ಬೇಟಿ ಬಚಾವೊ ಘೊಷಣೆಯ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಈ ಇಲಾಖೆಯೇ ನಿರ್ವಹಿಸುತ್ತಿದೆ.

ಇದಲ್ಲದೆ, ಸರ್ಕಾರದ ಇನ್ನಿತರ ಯೋಜನೆಗಳಾದ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳನ್ನೂ ಈ ವ್ಯವಸ್ಥೆ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ ಎನ್ನುತ್ತಾರೆ ಅವರು.

ಪೋಸ್ಟ್ ಮ್ಯಾನ್ ಕಥೆ -ವ್ಯಥೆ

ಇತ್ತ ಠಸ್ಸೆ ಹೊಡೆಯುತ್ತಿದ್ದ ಪೋಸ್ಟ್ ಮ್ಯಾನ್, "ಅವರದೊಂದು ಕಥೆಯಾದರೆ ನಮ್ಮದು ಇನ್ನು ಕಷ್ಟ ಗೊತ್ತಾ ಎಂದಾಗ? ಅವರ ಮೊಗದಲ್ಲಿ ಏನನ್ನೋ ಹೇಳಬೇಕೆಂಬ ಕಾತುರತೆ ಕಾಣುತಿತ್ತು.

ಹೌದು, ಮನೆ - ಮನೆಗೆ ಪತ್ರಗಳನ್ನು ತಲುಪಿಸಿ, ಓದಿ ಸುದ್ದಿ ಮುಟ್ಟಿಸುತ್ತಿದ್ದ ನಾವಿಕನೇ ನಮ್ಮ ಅಂಚೆಯಣ್ಣ. ಸಾವಿರಾರು ಪತ್ರಗಳನ್ನು ಜನರಿಗೆ ಜೋಪಾನವಾಗಿ ಮುಟ್ಟಿಸುತ್ತಿದ್ದ ಸೂತ್ರಧಾರರೇ ಇವತ್ತು ಸಂಕಷ್ಟದಲ್ಲಿದ್ದಾರೆ.

"ಸರಕಾರ ಸಂಬಳವೇನೋ ಕೊಡುತ್ತದೆ ಮೇಡಂ. ಆದರೆ, ನಮಗೆ ಓಡಾಡುವ ಸಮರ್ಪಕ ವ್ಯವಸ್ಥೆಯೇ ಇಲ್ಲ. ಸರಕಾರ ಸೈಕಲ್ ನಿರ್ವಹಣೆಗೆಂದು 90 ರೂ. ಕೊಡುತ್ತಾರೆ. ಎಲ್ಲಿ ಸಾಲುತ್ತದೆ ನೀವೇ ಹೇಳಿ? ನಮಗೆ ಸೈಕಲ್ ತುಳಿಯಲು ಆಗುವುದಿಲ್ಲ. ಗಾಡಿ ಇರುತ್ತದೆ. 90 ರೂಗೆ ಮುಂದಿನ ದಿನದಲ್ಲಿ 2 ಲೀಟರ್ ಪೆಟ್ರೋಲ್ ಕೂಡ ಸಿಗುವುದಿಲ್ಲ," ಎಂದು ತಮ್ಮಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲಿಚ್ಚಿಸದ ಪೋಸ್ಟ್ ಮ್ಯಾನ್ ಒಬ್ಬರು.

ಒಟ್ಟಾರೆ ತಂತ್ರಜ್ಞಾನ ಅಭಿವೃದ್ದಿ ಹೊಂದಿದಂತೆಲ್ಲಾ ಅಂಚೆ ಇಲಾಖೆಯೂ ಸಹ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ.

ಆದರೆ ಅದರಲ್ಲಿಯೂ ಹುಳುಕು ಕೂಡ ಇದೆ ಎಂಬುದು ತೆರೆ- ಮರೆಯ ಸತ್ಯ. ಹಲವು ಸಮಸ್ಯೆ, ಎಡರು ತೊಡರುಗಳ ಮಧ್ಯೆ ನಮಗೆಲ್ಲಾ ಇವತ್ತಿಗೂ ಅಂಚೆ ಸೇವೆ ನೀಡುತ್ತಿರುವ ಪೋಸ್ಟ್ ಮ್ಯಾನ್, ಪೋಸ್ಟ್ ಮಾಸ್ಟರ್ ಗಳಿಗೊಂದು ನಮ್ಮ ಧನ್ಯವಾದ ತಿಳಿಸೋಣ.

English summary
The Postal Day is being celebrated across India. Here is the story of a Post Man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X