'ಬರ'ದ ರುದ್ರತಾಂಡವಕ್ಕೆ ಮೈಸೂರು ಜನತೆ ಕಂಗಾಲು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಫೆಬ್ರವರಿ, 29: ನೀರಿನ ಹನಿಗಳನ್ನು ಕಾಣದ ಬರಡು ಜಮೀನುಗಳು..ಕೂಲಿ ಕೆಲಸಕ್ಕಾಗಿ ದೂರದ ಕೇರಳಕ್ಕೋ, ಕೊಡಗಿಗೋ ವಲಸೆ ಹೋಗುತ್ತಿರುವ ಕುಟುಂಬಗಳು..ಬತ್ತಿದ ಕೆರೆಗಳು, ಒಣಗಿದ ಗಿಡ-ಮರಗಳು, ಬಿರು ಬಿರು ಬಿಸಿಲಿನ ನಡುವೆಯೂ ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೆ ಬಿಂದಿಗೆ ಹೊತ್ತು ನಡೆಯುವ ಮಹಿಳೆಯರು..

ಈ ಎಲ್ಲಾ ದೃಶ್ಯಗಳು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಹನಿ ಹನಿ ನೀರಿಗಾಗಿ ಹಾಹಾಕಾರ ಎದುರಿಸುತ್ತಿರುವ ಬರ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ತಟ್ಟಿದೆ.[ಉತ್ತರ ಕರ್ನಾಟಕದಲ್ಲಿ 62 ತಾಲೂಕುಗಳಲ್ಲಿ ಬರ]

Mysuru

ಪ್ರಾಕೃತಿಕ ವಿಕೋಪಗಳು ನಡೆದರೆ ಅದರ ಮೊದಲ ಪರಿಣಾಮ ಬೀರುವುದೇ ಗ್ರಾಮೀಣ ಪ್ರದೇಶದ ಬಡಜನರ ಮೇಲೆ. ಕೂಲಿ ಮಾಡಿ ಬದುಕುವ ಜನಕ್ಕೆ ಶ್ರಮವಹಿಸಿ ಬೆಳೆದ ಕೃಷಿ ಬೆಳೆಗಳೇ ನೆಲಕಚ್ಚಿದರೆ ಕೆಲಸ ಕೊಡೋರು ಯಾರು? ಹಾಗಾಗಿ ಕೆಲಸ ಹುಡುಕಿಕೊಂಡು ಬೇರೆ ಪ್ರದೇಶಗಳಿಗೆ ತೆರಳುವುದು ಅನಿವಾರ್ಯ.

ಈಗಾಗಲೇ ನಂಜನಗೂಡಿನ ಗ್ರಾಮೀಣ ಪ್ರದೇಶಗಳಾದ ಹುಲ್ಲಹಳ್ಳಿ, ಕಸಬಾ, ಚಿಕ್ಕಯ್ಯನ ಛತ್ರ, ಕೌಲಂದೆ ಮತ್ತು ಬಿಳಿಗೆರೆಗೆ ಬರಗಾಲದ ಬಿಸಿ ತಟ್ಟಿದೆ. ಇಲ್ಲಿನ ಕೆರೆಗಳು ಒಣಗಿ ಬಾಯಿಬಿಟ್ಟು ನೀರಿಗಾಗಿ ಆಕಾಶವನ್ನೇ ದಿಟ್ಟಿಸುತ್ತಿದೆ. ರೈತರು ಜಾನುವಾರುಗಳಿಗೆ ನೀರುಣಿಸುವುದೇ ಕಷ್ಟವಾಗಿದೆ.[ಕೇಂದ್ರ ತಂಡದಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಬರ ಸಮೀಕ್ಷೆ]

ಕೃಷಿಯ ಕಾರ್ಯಚಟುವಟಿಕೆ ಕೈಗೊಳ್ಳಲು ನೀರಿಲ್ಲದೆ ಇರುವುದರಿಂದ ರೈತರು ಕೈಚೆಲ್ಲಿ ಕುಳಿತಿದ್ದಾರೆ. ಈ ಬಿಸಿ ಆದಿವಾಸಿ ಜನರನ್ನೂ ಬಿಟ್ಟಿಲ್ಲ. ಇವರಿಂದ ಇವರು ಕೂಲಿ ಕೆಲಸವಿಲ್ಲದೆ ಪರದಾಡುವಂತಾಗಿದೆ. ಕೆಲವರು ಕೆಲಸ ಹುಡುಕಿಕೊಂಡು ಹೊರ ಪ್ರದೇಶಗಳಿಗೆ ಹೋದರೂ ಕೆಲವರಿಗೆ ಮನೆ ಮಕ್ಕಳನ್ನು ಬಿಟ್ಟು ಹೋಗಲಾಗದೆ, ಇತ್ತ ಕೆಲಸವೂ ಇಲ್ಲದೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು 149 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಅದರಲ್ಲಿ ನಂಜನಗೂಡು ತಾಲೂಕು ಕೂಡ ಒಂದಾಗಿದೆ. ಇಲ್ಲಿನ ರೈತರು ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೊಂದಿದ್ದು, ಕೃಷಿಯನ್ನು ನಂಬಿ ಸಾಲ ಮಾಡಿಕೊಂಡಿದ್ದಾರೆ.[ಬರ ಅಧ್ಯಯನಕ್ಕೆ ಕೇಂದ್ರ ತಂಡ ಎಲ್ಲೆಲ್ಲಿ ತಿರುಗಲಿದೆ?]

ಕೂಲಿ ಕಾರ್ಮಿಕರು ಸ್ತ್ರಿಶಕ್ತಿ ಮತ್ತು ಸ್ವ-ಸಹಾಯ ಸಂಘಗಳಲ್ಲೂ ಸಾಲ ಮಾಡಿಕೊಂಡಿದ್ದು ಕೂಲಿ ಕೆಲಸ ಮಾಡಿಯೇ ಅದನ್ನು ತೀರಿಸಬೇಕಾದ ಅನಿವಾರ್ಯತೆ ಇವರ ಪಾಲಿಗೆ. ಇದೀಗ ಸರಿಯಾಗಿ ಕೆಲಸವೂ ಇಲ್ಲದಾಗಿರುವುದರಿಂದ ಜೀವನ ನಡೆಸುವುದು ದುಸ್ತರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No water, No crops, people facing drought from some days in Mysuru.
Please Wait while comments are loading...