ರೈತರ ನಗು ನಿಲ್ಲಿಸಿದ ಎಚ್ಡಿ ಕೋಟೆ ವ್ಯಾಪ್ತಿಯ ನುಗು ಜಲಾಶಯ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ, 01: ಈ ಬಾರಿ ಕಾವೇರಿ ಕಣಿವೆಯಲ್ಲಿ ವಾಡಿಕೆಯ ಮಳೆಯಾಗಿಲ್ಲ. ಇದರ ಪರಿಣಾಮ ಕೆಆರ್ಎಸ್ ಜಲಾಶಯ ಭರ್ತಿಯಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಸುರಿದ ಮಳೆಗೆ ಜಿಲ್ಲೆಯ ಹೆಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ, ತಾರಕ, ನುಗು ಜಲಾಶಯಗಳು ತುಂಬಿದ್ದವಾದರೂ ಬೇಸಿಗೆ ಆರಂಭವಾಗುತ್ತಿದ್ದಂತೆ ಬರಿದಾಗುವ ಸ್ಥಿತಿಗೆ ತಲುಪುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ.

ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಜಲಾಶಯಗಳಲ್ಲಿ ನುಗು ಜಲಾಶಯ ಮಳೆಗಾಲದಲ್ಲಿ ಭರ್ತಿಯಾಗಿತ್ತಾದರೂ ಒಳ ಹರಿವಿನ ಪ್ರಮಾಣ ಕುಗ್ಗಿದ್ದರಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ.[ಕೆಆರ್‍ಎಸ್ ಅಣೆಕಟ್ಟು ಸಮೀಪ ಮೋಜು-ಮಸ್ತಿ, ಪಾರ್ಟಿ!]

Nugu dam

ನುಗು ಜಲಾಶಯದ ನೀರನ್ನು ನಂಬಿ ಒಂದಷ್ಟು ರೈತರು ಜೀವನ ಮಾಡುತ್ತಿದ್ದು, ಇದೀಗ ಬೇಸಿಗೆಗೆ ಮುನ್ನವೇ ಬರಿದಾಗುವತ್ತ ಸಾಗುತ್ತಿರುವುದು ರೈತರಲ್ಲಿ ಆತಂಕ ತಂದೊಡ್ಡಿದೆ. ಹಾಗೆನೋಡಿದರೆ ಹೆಚ್.ಡಿ.ಕೋಟೆ ನೈಸರ್ಗಿಕ ಸಂಪತ್ತು ಹೊಂದಿರುವ ಮತ್ತು ಮೂರು ಜಲಾಶಯಗಳನ್ನು ಹೊಂದಿರುವ ತಾಲೂಕಾಗಿದೆ. ಆದರೂ ಇಂದಿಗೂ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಬಂದಿದೆ.

ಸಂಪನ್ಮೂಲ ಸಮರ್ಪಕ ಬಳಕೆಯೊಂದಿಗೆ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದಿತ್ತು. ಆದರೆ ಆಡಳಿತರೂಢರ ಇಚ್ಛಾಶಕ್ತಿಯ ಕೊರತೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಗೆ ಕಾರಣವಾಗಿದೆ. ಇದೀಗ ಒಂದಷ್ಟು ರೈತರ ಬದುಕಿಗೆ ಆಸರೆಯಾಗಿದ್ದ ನುಗು ಜಲಾಶಯ ಬರಿದಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ನುಗು ಜಲಾಶಯದ ಕಾರಣಕರ್ತರು ಯಾರು?

1965ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಕೆಂಗಲ್ ಹನುಮಂತಯ್ಯನವರು ನುಗು ಜಲಾಶಯದ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾಗಿದ್ದರು. ಜಲಾಶಯದಿಂದ ತಾಲೂಕು ಮತ್ತು ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಜಲಾಶಯಗಳ ನೀರು ತಾಲೂಕಿನ ಜನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗವಾಗಲೇ ಇಲ್ಲ. ದೀಪದ ಬುಡ ಕತ್ತಲು ಎಂಬ ಸ್ಥಿತಿ ಇಲ್ಲಿನವರದಾಗಿದೆ.[ಬರಡಾಗಿದ್ದ ಶಿಂಷಾ ನದಿಗೆ ಮತ್ತೆ ಜೀವಕಳೆ ತಂದ ಮಳೆ]

Nugu dam

ನುಗು ಜಲಾಶಯದ ಬಗ್ಗೆ ಕೆಲವು ಮಾಹಿತಿ:

ನುಗು ಜಲಾಶಯ 110 ಅಡಿಯಿದ್ದು, 984 ಚದರ ಮೀ ವಿಸ್ತೀರ್ಣ ಹೊಂದಿದೆ. ಪ್ರತಿ ವರ್ಷವೂ ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ 5.44 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಪೈಕಿ 4.89 ಟಿಎಂಸಿ ನೀರನ್ನು ರೈತರ ಕೃಷಿ ಚಟುವಟಿಕೆಗೆ ವಿನಿಯೋಗಿಸಲಾಗುತ್ತದೆ. ಇನ್ನು 0.55 ಟಿಎಂಸಿ ನೀರು ಪೋಲಾಗುತ್ತಿದೆ.[ಮೈಸೂರು ಶಿಡ್ಲು ಬೆಟ್ಟದಲ್ಲಿ ಹರಿಯುವ ನೀರು ಎಂದೂ ಬತ್ತೋದಿಲ್ಲ!]

ಜಲಾಶಯದ ನೀರನ್ನು ನಂಬಿ ಬೆಳೆಬೆಳೆಯುತ್ತಿದ್ದ ರೈತ ಬೇಸಿಗೆಗೆ ಮುನ್ನವೇ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತಗೊಳ್ಳುತ್ತಿರುವುದನ್ನು ಕಂಡು ಕಂಗಾಲಾಗಿದ್ದಾನೆ. ಈ ಬಾರಿ ಜಲಾಶಯದ ನೀರಿನಿಂದ ಬೆಳೆ ಬೆಳೆಯುವುದು ರೈತನಿಗೆ ಕಷ್ಟಸಾಧ್ಯ ಎನ್ನುವುದು ಜಲಾಶಯವನ್ನು ನೋಡಿದರೆ ತಿಳಿಯುತ್ತದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Nugu Dam is located in Beerwal village under Heggadddevana Kote taluk of Mysuru. The dam is constructed by across the river Nugu flowing through the Kaveri basin. The dam was built under the supervision of Sir M. Vishweshwariah.
Please Wait while comments are loading...