ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್.ನಗರದಲ್ಲಿಲ್ಲ ಅಕ್ರಮ ಮರಳು ದಂಧೆಗೆ ಕಡಿವಾಣ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 04 : ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುವ ಹೆಚ್ಚಿನ ಸ್ಥಳಗಳಲ್ಲಿ ಅಕ್ರಮ ಮರಳು ದಂಧೆಯ ಕರಿನೆರಳು ಚಾಚಿರುವುದು ಕಂಡು ಬರುತ್ತಿದೆ. ಅದರಲ್ಲೂ ಕೆ.ಆರ್.ನಗರ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ದಂಧೆ ನಡೆಯುತ್ತಿದ್ದರೂ ಅದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ.

ಇವತ್ತು ಬಡವರು ಮನೆಕಟ್ಟಲು, ಶೌಚಾಲಯ ನಿರ್ಮಿಸಲು ಮರಳು ಸಿಗದೆ ಪರದಾಡುತ್ತಿದ್ದರೂ ಶ್ರೀಮಂತರು ಕಟ್ಟುತ್ತಿರುವ ದೊಡ್ಡ ದೊಡ್ಡ ಕಟ್ಟಡಗಳಿಗೆ ಯಾವುದೇ ಅಡಚಣೆಯಿಲ್ಲದೆ ಮರಳು ಬಂದು ಬೀಳುತ್ತಿದೆ. ಪ್ರಭಾವಿಗಳು ಅಕ್ರಮ ಮರಳು ಸಾಗಾಣಿಕೆಯನ್ನೇ ದಂಧೆ ಮಾಡಿಕೊಂಡು ಹಣವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.[ಅಕ್ರಮ ಮರಳು ಸಾಗಾಟಕ್ಕೆ ಹೊಸ ತಂತ್ರ!]

No control over illegal sand mining in KR Nagar, Mysuru

ನದಿ ತೀರದಿಂದ ಕೊಪ್ಪರಿಕೆ ಹಾಗೂ ಟಯರ್ ಟ್ಯೂಬ್ ಬಳಸಿ ಮರಳನ್ನು ನದಿಯಿಂದ ತೆಗೆಯಲಾಗುತ್ತಿದ್ದು, ರಾತ್ರೋರಾತ್ರಿ ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಸದ್ದಿಲ್ಲದೆ ತಲುಪಿಸಲಾಗುತ್ತಿದೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಸಾರ್ವಜನಿಕರು ಮನೆ, ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳಿಗಾಗಿ ಹಳೆ ಎಡತೊರೆಯಲ್ಲಿರುವ ಸರ್ಕಾರಿ ಯಾರ್ಡ್‍ನಲ್ಲಿ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದರೂ, ನದಿಯಿಂದ ತೆಗೆಯುತ್ತಿರುವ ಮರಳು ಯಾರ್ಡ್‍ಗೆ ಬಾರದೆ ನೇರವಾಗಿ ತಲುಪಬೇಕಾದಲ್ಲಿಗೆ ತಲುಪುತ್ತಿದೆ.[ಅಕ್ರಮ ಮರಳು ದಂಧೆ, ಕಪಿಲೆ, ನುಗು ಜಲಾಶಯಕ್ಕೆ ಆತಂಕ]

ಕೆ.ಆರ್.ನಗರ ತಾಲೂಕಿನ ಚಂದಗಾಲು, ಹೆಬ್ಬಾಳು, ಕಪ್ಪಡಿ, ಶ್ರೀರಾಂಪುರ, ಚುಂಚನಕಟ್ಟೆ, ದಿಡ್ಡಹಳ್ಳಿ, ಸಕ್ಕರೆ, ಹಾಡ್ಯ, ಕಗ್ಗಳ, ಕೋಳೂರು, ಹನಸೋಗೆ, ಬಳ್ಳೂರು, ಮಾವನೂರು, ಕೆಡಗ ಮೊದಲಾದ ಕಡೆಗಳಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದರೂ ಕೊಪ್ಪರಿಗೆ ಮತ್ತು ಹರಿಗೋಲು, ಲಾರಿ ಟ್ಯೂಬ್‍ಗಳನ್ನು ಬಳಸಿ ಮರಳನ್ನು ತೆಗೆದು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.[ಕಾವೇರಿ ನದಿ ತೀರ ಬರಿದು ಮಾಡುತ್ತಿದ್ದ ಇಬ್ಬರ ಬಂಧನ]

ಸಾವಿರಾರು ಲೋಡ್ ಮರಳು ಅಕ್ರಮವಾಗಿ ತಾಲೂಕು ಆಡಳಿತವಿರುವ ಮಿನಿ ವಿಧಾನಸೌಧದ ಮುಂಭಾಗ, ಲೋಕೋಪಯೋಗಿ ಇಲಾಖೆ ಕಚೇರಿ ಹಾಗೂ ಪೊಲೀಸ್ ಠಾಣೆಯಿರುವ ಮೈಸೂರು-ಹಾಸನ ರಸ್ತೆಯಲ್ಲಿ ಸಾಗುತ್ತಿದ್ದರೂ ಯಾರೂ ಕೂಡ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನು ಗಮನಿಸಿದರೆ ಅಕ್ರಮ ಮರಳು ಸಾಗಾಣೆ ಹಿಂದೆ ಪ್ರಭಾವಿಗಳ ಕೈವಾಡ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಮರಳು ಉಪಯೋಗಿಸುತ್ತಿದ್ದೇವೆ ಎಂಬಂತೆ ಬಿಂಬಿಸುತ್ತಾ ಹತ್ತು ಹನ್ನೆರಡು ಲೋಡ್ ಮರಳು ತಂದು ಕಟ್ಟಡದ ಮುಂದೆ ಸುರಿದುಕೊಂಡು ಬಳಿಕ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಖದೀಮರು ಕೂಡ ಇದ್ದಾರೆ. ಮರಳನ್ನು ಬಳಸಿ ಯಾವ ರೀತಿಯಲ್ಲಿ ಹಣಗಳಿಸಬಹುದೋ ಅದೆಲ್ಲವನ್ನು ಇಲ್ಲಿ ಮಾಡಲಾಗುತ್ತಿದೆ.

ಕಾಟಾಚಾರಕ್ಕೆ ಎಂಬಂತೆ ಆಗೊಮ್ಮೆ ಈಗೊಮ್ಮೆ ದಾಳಿ ನಡೆಸುವ ಅಧಿಕಾರಿಗಳು ಎತ್ತಿನಗಾಡಿ, ಟ್ರ್ಯಾಕ್ಟರ್‌ ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ, ಇಲ್ಲಿಂದ ಕೇರಳ ಸೇರಿದಂತೆ ಬೇರೆ ಸ್ಥಳಗಳಿಗೆ ಸಾಗಿಸಲ್ಪಡುವ ಲಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಅಕ್ರಮ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಲಾರಿ ಮಾಲೀಕರು, ಚಾಲಕರು ಅಕ್ರಮ ಮರಳು ಸಾಗಾಣಿಕೆ ಮಾಡಲು ಹಲವು ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಚಾಪೆಕೆಳಗೆ ನುಸುಳಿದರೆ, ಇವರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಒಟ್ಟಾರೆ ಮರಳಿನ ಅಕ್ರಮ ಸಾಗಾಟ ತಿಜೋರಿ ತುಂಬುವ ದಂಧೆಯಾಗಿ ಮಾರ್ಪಟ್ಟಿದ್ದು, ಪರಿಣಾಮ ಕಾವೇರಿ ಒಡಲು ಸದ್ದಿಲ್ಲದೆ ಬರಿದಾಗುತ್ತಿದೆ. ಅದರ ಪರಿಣಾಮ ಮುಂದೊಂದು ದಿನ ಎಲ್ಲರ ಮೇಲೂ ಬೀಳಲಿದೆ ಎಂಬುದಂತು ಸತ್ಯ.

English summary
Illegal mining and transportation of sand is continuing in KR Nagar, Mysuru district without any fear of law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X