ದಸರೆಗೆ ಸಜ್ಜಾಗುತ್ತಿರುವ ಅರಮನೆ ನಗರಿಯಲ್ಲಿ ದೇಗುಲಗಳಿಗೆ ಸುಣ್ಣ-ಬಣ್ಣ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 4 : ಈ ಬಾರಿಯ ದಸರಾ ಮಹೋತ್ಸವವನ್ನು ಯಾವುದೇ ವಿಜೃಂಭಣೆ ಇಲ್ಲದೆ ಸಾಂಪ್ರದಾಯಿಕ ನಾಡಹಬ್ಬವನ್ನಾಗಿ ಆಚರಿಸಲು ಸರಕಾರ ನಿರ್ಧರಿಸಿದ್ದು, ಜಿಲ್ಲಾಡಳಿತದಿಂದ ಈಗಾಗಲೇ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಸೆಪ್ಟೆಂಬರ್ 21ರಿಂದ 30ರವರೆಗೆ ನಾಡಹಬ್ಬ ದಸರಾ ನಡೆಯಲಿದೆ. ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಮೈಸೂರನ್ನು ಸುಂದರ ಮತ್ತು ಆಕರ್ಷಕ ತಾಣವನ್ನಾಗಿ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರು ಯಾವುದೇ ರೀತಿಯಲ್ಲಿ ಲೋಪವಾದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮುಂದಾಗಿದೆ.

ದಸರೆಯ ಆನೆಗಳಿಗೆ ಶಿಬಿರಗಳಲ್ಲಿ ನಡೆಯುತ್ತಿದೆ ವಿಶೇಷ ತಯಾರಿ..!

ಮೈಸೂರಿಗೆ ಬರುವ ಪ್ರವಾಸಿಗರು ವಿಶ್ವವಿಖ್ಯಾತ ಅರಮನೆಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಆದ್ದರಿಂದ ಇಲ್ಲಿರುವ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡಿದ್ದು, ಅವುಗಳನ್ನು ಮತ್ತಷ್ಟು ಸುಂದರ ಹಾಗೂ ಪ್ರವಾಸಿಗರ ಆಕರ್ಷಕ ಕೇಂದ್ರವನ್ನಾಗಿಸಲು ತೀರ್ಮಾನ ಮಾಡಲಾಗಿದೆ.

ಮೈಸೂರು ದಸರಾ: ಗಜಪಯಣ ಆಗಸ್ಟ್ 14ರಿಂದ ಆರಂಭ

ಮೈಸೂರು ಅರಸರ ಕಾಲದ 11 ದೇವಾಲಯಗಳು ಅರಮನೆಯೊಳಗಿದ್ದು, ಇದರ ಜೀರ್ಣೋದ್ಧಾರ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡಿದೆ. ಈ ದೇವಾಲಯಗಳ ಸಂರಕ್ಷಣೆ ಕಾಮಗಾರಿ ಹೊಣೆಯನ್ನು ಪ್ರಾಚ್ಯ ವಸ್ತು ಸಂಗ್ರಹಾಲಯದ ಅಧೀನಕ್ಕೆ ನೀಡಿದ್ದು, ಕೆಲವು ದಿನಗಳಿಂದ ಕಾಮಗಾರಿ ಪ್ರಾರಂಭಗೊಂಡಿದೆ. ಏನೇನು ಕಾಮಗಾರಿ ನಡೆದಿದೆ ಎಂಬುದರ ವಿವರಕ್ಕೆ ಮುಂದೆ ಓದಿ.

ದೇವಾಲಯಗಳಿಗೆ ಸುಣ್ಣ –ಬಣ್ಣ

ದೇವಾಲಯಗಳಿಗೆ ಸುಣ್ಣ –ಬಣ್ಣ

ಎರಡನೇ ಚಾಮರಾಜ ಒಡೆಯರ್ ಕಾಲದ ಲಕ್ಷ್ಮೀರಮಣ ದೇವಸ್ಥಾನವು 1499ರಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಇದು ಅರಮನೆಯ ಇತಿಹಾಸವನ್ನು ತಿಳಿಸಲಿದೆ.

ಅಲ್ಲದೆ 1569ರಲ್ಲಿ ರಾಜ ಒಡೆಯರ್ ಕಾಲದ ತ್ರಿನಯನೇಶ್ವರ ಅಥವಾ ತ್ರಿನೇಶ್ವರ ಸ್ವಾಮಿ ದೇಗುಲ, 1673ರಲ್ಲಿ ಹೊಯ್ಸಳ ಶೈಲಿಯಲ್ಲಿ ಚಿಕ್ಕದೇವರಾಜ ಒಡೆಯರ್ ಕಾಲದ ಶ್ವೇತ ವರಹಾಸ್ವಾಮಿ ಮತ್ತು ಮಹಾಲಕ್ಷ್ಮೀ ದೇವಾಲಯ, 1734ರಲ್ಲಿ 2ನೇ ಕೃಷ್ಣರಾಜ ಒಡೆಯರ್ ಕಾಲದ ದ್ರಾವಿಡ ಶೈಲಿಯ ವೆಂಕಟರಮಣ ಸ್ವಾಮಿ ಪ್ರಸನ್ನ, 1829ರ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ಪ್ರಸನ್ನ ಕೃಷ್ಣಸ್ವಾಮಿ ದೇಗುಲ,

1951ರ ಜಯಚಾಮರಾಜೇಂದ್ರ ಒಡೆಯರ್ ಕಾಲದ ಭುವನೇಶ್ವರಿ ಹಾಗೂ 1953ರಲ್ಲಿ ಗಾಯತ್ರಿ ದೇವಿ ಆಲಯಗಳನ್ನು ಇಲ್ಲಿ ಕಾಣಬಹುದಾಗಿದ್ದು, ಅವುಗಳಿಗೆ ಜೀರ್ಣೋದ್ಧಾರ ಯೋಗ ಬಂದಿದೆ.

ನೈಜತೆ ಕಾಪಾಡಿಕೊಂಡು ಜೀರ್ಣೋದ್ಧಾರ

ನೈಜತೆ ಕಾಪಾಡಿಕೊಂಡು ಜೀರ್ಣೋದ್ಧಾರ

ಜಿಲ್ಲಾಡಳಿತ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿಯಲ್ಲಿ ಮೊದಲಿಗೆ ಅರಮನೆಯ ಪೂರ್ವ ದಿಕ್ಕಿನಲ್ಲಿರುವ ತ್ರಿನೇಶ್ವರ ದೇವಾಲಯದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಇದರ ಪ್ರಾಂಗಣದಲ್ಲಿ ಈಗಾಗಲೇ ಮೇಲಿನ ಪಾಯದ ಕಲ್ಲು ಕಳಚಿ ಬಿದ್ದಿದ್ದು, ಛಾವಣಿಗೆ ಸಹಾಯಕವಾಗಿ ತಾತ್ಕಾಲಿಕ ಕಂಬವನ್ನು ಅಳವಡಿಸಲಾಗಿತ್ತು.

ಹಾಗಾಗಿ ಮೊದಲಿಗೆ ಇಲ್ಲಿನ ದೇಗುಲ ಸಂರಕ್ಷಣಾ ಕಾಮಗಾರಿಯನ್ನು ಕೈಗೊಂಡಿದ್ದು, ದೇವಾಲಯಗಳಿಗೆ ಯಾವುದೇ ರೀತಿಯ ಬಣ್ಣ ಬಳಿಯದೇ ನೈಜತೆ ಕಾಪಾಡುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಕೆಲಸ ಪ್ರಾರಂಭಿಸಲಾಗಿದೆ.

ಯಾವ ದೇವಾಲಯಕ್ಕೆ ಎಷ್ಟು ಅನುದಾನ

ಯಾವ ದೇವಾಲಯಕ್ಕೆ ಎಷ್ಟು ಅನುದಾನ

ಪ್ರವಾಸೋದ್ಯಮ ಇಲಾಖೆಯಿಂದ 45 ಲಕ್ಷ ರುಪಾಯಿ ಅನುದಾನದಲ್ಲಿ ತ್ರಿನೇಶ್ವರ ದೇವಾಲಯ, 51 ಲಕ್ಷ ಅನುದಾನದಲ್ಲಿ ಪ್ರಸನ್ನ ಸ್ವಾಮಿ ಕೃಷ್ಣಸ್ವಾಮಿ ದೇವಾಲಯ, 22 ಲಕ್ಷ ವೆಚ್ಚದಲ್ಲಿ ಲಕ್ಷ್ಮೀನಾರಾಯಣ ದೇವಾಲಯದ ಕಾಮಗಾರಿ ಹಾಗೂ 70 ಲಕ್ಷ ರುಪಾಯಿ ಅನುದಾನದಲ್ಲಿ ಶ್ವೇತ ವರಹಾ ದೇವಸ್ಥಾನದ ರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಕಾಮಗಾರಿಗೆ ಟೆಂಡರ್

ಕಾಮಗಾರಿಗೆ ಟೆಂಡರ್

ಮುಜರಾಯಿ ಇಲಾಖೆ ಅನುದಾನದಡಿ ಅರಮನೆಯೊಳಗಿರುವ ಖಿಲ್ಲೆ ವೆಂಕಟರಮಣ ದೇವಸ್ಥಾನ ಸ್ವಾಮಿ 27 ಲಕ್ಷ, ಪಾಂಡುರಂಗ ದೇವಸ್ಥಾನಕ್ಕೆ 23 ಲಕ್ಷ, ಗಾಯತ್ರಿ ದೇವಸ್ಥಾನಕ್ಕೆ 25 ಲಕ್ಷ, ಲಕ್ಷ್ಮೀ ರಮಣ ದೇವಸ್ಥಾನದ ರಾಜಗೋಪುರದ ಸಂರಕ್ಷಣಾ ಕಾಮಗಾರಿ 30 ಲಕ್ಷ,

ಅರಮನೆ ಹೊರಭಾಗದಲ್ಲಿರುವ ಕೋಟೆ ಮಾರಮ್ಮ ದೇವಸ್ಥಾನದ ಸಂರಕ್ಷಣೆಗೆ 35 ಲಕ್ಷ, ಉತ್ತರ ದ್ವಾರದಲ್ಲಿರುವ ಆಂಜನೇಯ ಮತ್ತು ಗಣಪತಿ ದೇವಸ್ಥಾನಕ್ಕಾಗಿ 5 ಲಕ್ಷ, ಚಾಮುಂಡಿಬೆಟ್ಟದ ನಂದಿ ಆವರಣದ ಸಂರಕ್ಷಣೆಗಾಗಿ 12 ಲಕ್ಷ ಹಾಗೂ ರಾಮಾನುಜ ರಸ್ತೆಯ ಕಾಮ ಕಾಮೇಶ್ವರಿ ದೇವಸ್ಥಾನದ ಕಾಮಗಾರಿಗೆ ಒಟ್ಟು 20 ಲಕ್ಷ ವೆಚ್ಚದಲ್ಲಿ ಸಂರಕ್ಷಣೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಇದರೊಂದಿಗೆ ಟಿ ನರಸೀಪುರ ಅಗಸ್ತ್ಯೇಶ್ವರ ದೇವಾಲಯ, ಸೋಮನಾಥೇಶ್ವರ, ಪಂಚಲಿಂಗೇಶ್ವರ ದೇವಾಲಯ, ಧರ್ಮಪುರ ಚೆನ್ನಕೇಶವ ದೇವಾಲಯ, ಹುಣಸೂರು ತಾಲೂಕು ತರಿಕಲ್ಲು ದೇವಾಲಯದ ಸಂರಕ್ಷಣಾ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಕೆಲಸವೂ ಪ್ರಾರಂಭವಾಗಲಿದೆ.

ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ

ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ

ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ದೃಷ್ಟಿಯಿಂದ ಹಾಗೂ ಅರಮನೆಯೊಳಗಿರುವ ಪುರಾತನ ದೇವಾಲಯಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸಲಾಗಿದೆ.

ಅದರಲ್ಲಿ ಧಾರ್ಮಿಕ ದತ್ತಿ ಇಲಾಖೆಯು 7 ದೇವಾಲಯಗಳಿಗೆ ಅಂದಾಜು 2.9 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆಯು 4 ದೇವಾಲಯಗಳಿಗೆ ಒಟ್ಟು 1.80 ಕೋಟಿ ರುಪಾಯಿಯಲ್ಲಿ ದೇವಾಲಯಗಳ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಂಡಿದೆ. ಹಾಗೆಯೇ ಕೆಲವು ರಸ್ತೆಯ ಅಭಿವೃದ್ಧಿ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There is counting days for world famous dasara 2017. Mysuru city and around the city temples renovating with beautification. Here is the details.
Please Wait while comments are loading...