ಎಚ್ಚರ! ಮೈಸೂರಿನಲ್ಲಿದ್ದಾರೆ ಖತರ್ನಾಕ್ ಬೈಕ್ ಕಳ್ಳರು

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 16: ದ್ವಿಚಕ್ರ ವಾಹನ ಹೊಂದಿದ್ದೀರಾ? ಹಾಗಿದ್ದರೆ ಎಚ್ಚರವಾಗಿರುವುದು ಒಳಿತು. ಮೈಸೂರಿನಲ್ಲಿ ದ್ವಿಚಕ್ರವಾಹನ ಕಳ್ಳರ ದೊಡ್ಡ ದಂಡೇ ಬೀಡು ಬಿಟ್ಟಿದ್ದು, ಕಷ್ಟಪಟ್ಟು ದುಡಿಯುವ ಬದಲು ಯಾರೋ ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ ಬೈಕ್, ಸ್ಕೂಟಿಗಳನ್ನು ಕದ್ದು ಮಾರಾಟ ಮಾಡಿ ಬದುಕುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ.

ಮೈಸೂರು: ಟ್ರಿಣ್ ಟ್ರಿಣ್ ಯೋಜನೆ ಸೈಕಲ್ ಕಳ್ಳತನ ಆರೋಪಿ ಅಂದರ್

ಕಳೆದ ಕೆಲವು ಸಮಯಗಳಿಂದ ಪೊಲೀಸರು ನಗರದಲ್ಲಿ ದ್ವಿಚಕ್ರ ವಾಹನ ಕಳ್ಳರನ್ನು ಸೆರೆಹಿಡಿದು ಜೈಲಿಗೆ ತಳ್ಳುತ್ತಿದ್ದರೂ ಒಬ್ಬರಾದ ಮೇಲೊಬ್ಬರಂತೆ ಸಿಕ್ಕಿ ಬೀಳುತ್ತಲೇ ಇದ್ದಾರೆ. ಇದೀಗ ವಿವಿಪುರಂ ಠಾಣಾ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದು ಅವರಿಂದ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇಟಗಳ್ಳಿ ನಿವಾಸಿ ಶೇಷಾದ್ರಿ ಎಂಬುವರ ಪುತ್ರ ಜೀವನ್‍ಕುಮಾರ್ ಅಲಿಯಾಸ್ ಜಂಗ್ಲಿ, ಬೆಂಗಳೂರಿನ ಶ್ರೀನಗರ ನಿವಾಸಿ ತಿಮ್ಮೇಗೌಡ ಅವರ ಪುತ್ರ ಮಂಜುನಾಥ ಅಲಿಯಾಸ್ ಮಂಜು ಬಂಧಿತರಾಗಿದ್ದಾರೆ. ಇವರಿಬ್ಬರು ಭಲೇ ಖತರ್ನಾಕ್ ಗಳಾಗಿದ್ದು, ಯಾರಾದರೂ ತಮ್ಮ ಮನೆ ಮುಂದೆ ಬೀಗ ಹಾಕದೆ ನಿಲ್ಲಿಸುತ್ತಿದ್ದ ದ್ವಿಚಕ್ರವಾಹನಗಳನ್ನು ಪತ್ತೆ ಹಚ್ಚಿ ಅವುಗಳ ಇಗ್ನಿಷನ್ ಡೈರೆಕ್ಟ್ ಮಾಡಿ ಕದಿಯುತ್ತಿದ್ದರು. ಇದುವರೆಗೆ ಅದೆಲ್ಲೆಲ್ಲ ಈ ರೀತಿ ಕದ್ದಿದ್ದಾರೋ ಗೊತ್ತಿಲ್ಲ.

Mysuru police detained 2 men in connection with 2 wheeler thievery

ಆದರೆ ಮೈಸೂರು ನಗರದಲ್ಲಿ ಇವರು ವಿ.ವಿ.ಪುರಂ, ದೇವರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಯಮಹಾ ಆರ್.ಎಕ್ಸ್ 135, ಹಿರೋ ಹೊಂಡಾ ಸ್ಪ್ಲೆಂಡರ್, ಸುಜುಕಿ ಆಕ್ಸೆಸ್ ಹೀಗೆ ಮೂರು ವಾಹನಗಳನ್ನು ಕದ್ದು ಅದರ ನಂಬರ್ ಪ್ಲೇಟ್ ತೆಗೆದು ಓಡಿಸುತ್ತಾ ಮಾರಾಟಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ.

ನಂಬರ್ ಪ್ಲೇಟ್ ತೆಗೆದು ಓಡಾಟ

ಶುಕ್ರವಾರ ಇವರಿಬ್ಬರು ನಂಬರ್ ಪ್ಲೇಟ್ ಇಲ್ಲದ ಯಮಹ ಆರ್.ಎಕ್ಸ್ 135 ಬೈಕ್ ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಗಮನಿಸಿದ ವಿವಿಪುರಂ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು ಬಳಿಕ ಮೈಸೂರು ನಗರದ ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ಉಮೇಶ್ ಜಿ.ಸೇಠ್ ಅವರ ಉಸ್ತುವಾರಿಯಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸಿ.ವಿ. ರವಿ, ಸಿಬ್ಬಂದಿ ಸೋಮಶೇಖರ್, ಪ್ರಸನ್ನ, ಈರಣ್ಣ, ಮಹೇಶ ಅವರು ವಿಚಾರಣೆಗೊಳಪಡಿಸಿದಾಗ ನಗರದ ಮೂರು ಕಡೆ ವಾಹನಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

ಬಂಧಿತರಿಂದ ವಶಪಡಿಸಿಕೊಳ್ಳಲಾದ ವಾಹನಗಳ ಮೌಲ್ಯ ಒಂದು ಲಕ್ಷವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಸರಾಕ್ಕೆ ಬರ್ತಿರಾ ಎಚ್ಚರವಾಗಿರಿ

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸರಗಳ್ಳತನದೊಂದಿಗೆ ದ್ವಿಚಕ್ರ ವಾಹನ ಕಳ್ಳರ ಸಂಖ್ಯೆಯೂ ಜಾಸ್ತಿಯಾಗಿರುವ ಕಾರಣ ಮತ್ತು ದಸರಾ ಆರಂಭವಾಗಿರುವ ಹಿನ್ನಲೆಯಲ್ಲಿ ಕಳ್ಳರು ಇಲ್ಲಿ ಬೀಡು ಬಿಡುವ ಲಕ್ಷಣಗಳಿದ್ದು, ರಾತ್ರಿ ಆಹಾರಮೇಳ, ಯುವದಸರಾ, ವಸ್ತುಪ್ರದರ್ಶನ ಹೀಗೆ ಜನಜಂಗುಳಿಯಲ್ಲಿ ತೆರಳುವ ಜನರು ತಮ್ಮ ಆಭರಣಗಳತ್ತ ಎಚ್ಚರವಾಗಿರುವುದು ಒಳ್ಳೆಯದು.

ಇನ್ನು ಬೈಕ್ ಸೇರಿದಂತೆ ಇತರೆ ದ್ವಿಚಕ್ರವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೆ ನಿರ್ಧಿಷ್ಟ ಜಾಗದಲ್ಲಿ ನಿಲ್ಲಿಸಲು ಮತ್ತು ಬೀಗ ಹಾಕುವುದನ್ನು ಮರೆಯದಿರಿ. ಯಾವಾಗ ಯಾವ ಕ್ಷಣದಲ್ಲಿ ಬೈಕ್ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಾರೆ ಎಂಬುದೇ ಗೊತ್ತಾಗದಿಂದ ಕಾರಣದಿಂದ ತಮ್ಮ ಎಚ್ಚರಿಕೆಯಲ್ಲಿ ತಾವಿರುವುದು ಉತ್ತಮ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru police detained 2 men in connection with 2 wheeler thievery. 2 wheeler steeling becomes a major problem in Mysuru these days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ