ಮಾಗಳಿ ರವಿ ಸಾವಿನ ಸುತ್ತ ಅನುಮಾನದ ಹುತ್ತ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ನವೆಂಬರ್, 6: ಕ್ಯಾತಮಾರನಹಳ್ಳಿ ರಾಜು, ಕೊಡಗಿನ ಪ್ರವೀಣ್‍ಪೂಜಾರಿ, ಬೆಂಗಳೂರಿನ ರುದ್ರೇಶ್ ಅವರ ಸಾವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದಿರುವಾಗಲೇ ಮೈಸೂರಿನ ಪಿರಿಯಾಪಟ್ಟಣದಲ್ಲಿ ಬಿಜೆಪಿ ಮುಖಂಡ, ಆರ್‍ಎಸ್‍ಎಸ್ ಕಾರ್ಯಕರ್ತ ಮಾಗಳಿ ಜಿ.ರವಿ ಸಾವನ್ನಪ್ಪಿದ್ದಾರೆ.

ಈ ಸಾವು ಆಕಸ್ಮಿಕವೇ? ಅಥವಾ ಕೊಲೆಯೇ? ಎಂಬ ಜಿಜ್ಞಾಸೆಗೆ ಕಾರಣವಾಗಿದ್ದು, ಇಡೀ ಮೈಸೂರು ಬೆಚ್ಚಿಬಿದ್ದಿದೆ.

ಮೇಲ್ಮೋಟಕ್ಕೆ ವಾಹನ ಅಪಘಾತದಿಂದ ಮೃತಪಟ್ಟಂತೆ ಕಂಡುಬಂದರೂ ವಾಹನ ಅಪಘಾತ ಸಂಭವಿಸಿದರೆ ಕಂಡು ಬರುವಂತಹ ಯಾವುದೇ ಕುರುಹುಗಳು ಅಲ್ಲಿ ಇಲ್ಲ. [ಮಾಗಳಿ ರವಿ ಹತ್ಯೆ ಖಂಡಿಸಿ ಸೋಮವಾರ ಮೈಸೂರು ಬಂದ್]

Mysuru: Magali Ravi death leads to mysterious circumstances

ಆತನ ತಲೆಮೇಲಿನ ಕತ್ತಿಯೇಟು ಹೊರತು ಪಡಿಸಿದರೆ ಮತ್ಯಾವ ಗಾಯಗಳೂ ಕಾಣಸಿಗುತ್ತಿಲ್ಲ. ಹೀಗಿರುವಾಗ ಅದನ್ನು ಆಕಸ್ಮಿಕ ಘಟನೆ ಅಂಥ ಹೇಳೋಕೆ ಸಾಧ್ಯನಾ?ಈ ಪ್ರಶ್ನೆಗಳನ್ನಿಟ್ಟು ಕೊಂಡು ಮಾಗಳಿ ರವಿಯ ಸಾವನ್ನೊಮ್ಮೆ ನೋಡಿದರೆ ಆತನದು ಕೊಲೆ ಎಂಬ ಸಂಶಯ ಮೂಡುವುದು ಸಹಜ.

ಇವತ್ತು ರವಿ ಸಾವನ್ನು ಜನ ಸಂಶಯದಿಂದ ನೋಡಲು ಕಾರಣವೂ ಇದೆ. ಈಗಾಗಲೇ ಆರ್‍ಎಸ್‍ಎಸ್ ಕಾರ್ಯಕರ್ತರು ಒಬ್ಬರ ಮೇಲೊಬ್ಬರಂತೆ ಹೆಣವಾಗುತ್ತಿದ್ದಾರೆ. ದೂರದ ಕೇರಳದಲ್ಲಿ ಹೆಣ ಉರುಳುತ್ತಿದ್ದ ಸುದ್ದಿಗಳನ್ನು ನೋಡಿ, ಕೇಳಿ ತಿಳಿದಿದ್ದ ಮಂದಿ ಇದೀಗ ಕರ್ನಾಟಕದಲ್ಲೇ ನಡೆಯುತ್ತಿರುವ ಘಟನೆಗಳಿಂದ ಆತಂಕಕ್ಕೀಡಾಗಿದ್ದಾರೆ. [ರಕ್ತದ ಕಲೆ ಅಳಿಸುವ ಮುನ್ನವೇ ರಾಜಕೀಯ ರಂಗಿನಾಟ!]

ಇಷ್ಟಕ್ಕೂ ಮಾಗಳಿ ರವಿ ಯಾರು? ಒಂದು ವೇಳೆ ಆತನ ಮೇಲೆ ಮಚ್ಚು ಬೀಸಲಾಗಿದೆ ಎನ್ನುವುದಾದರೆ ಅಷ್ಟೊಂದು ಪವರ್‍ಫುಲ್ ನಾಯಕನಾಗಿದ್ದನೇ? ಹೀಗೆ ಒಂದರ ಮೇಲೊಂದರಂತೆ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತದೆ.

ಪಿರಿಯಾಪಟ್ಟಣ ಮಾಗಳಿ ಗ್ರಾಮದ ನಿವಾಸಿ ಜವರೇಗೌಡ ಅವರ ಪುತ್ರ ರವಿ(33) ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದನು. ಜತೆಗೆ ಆರ್‍ಎಸ್‍ಎಸ್ ಕಾರ್ಯಕರ್ತನೂ ಆಗಿದ್ದನು. ಈತನ ಸಂಘಟನಾ ಚಾತುರ್ಯತೆಯನ್ನು ನೋಡಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.

ಸ್ಥಳೀಯರ ಪ್ರಕಾರ ಸ್ನೇಹಜೀವಿಯಾಗಿದ್ದ ರವಿಗೆ ಯಾವುದೇ ರೀತಿಯ ಶತ್ರುಗಳು ಇರಲಿಲ್ಲ ಎನ್ನಲಾಗುತ್ತಿದೆ. ಈ ನಡುವೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಬಿಜೆಪಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಭವಿಷ್ಯದಲ್ಲಿ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳಿದ್ದವು.

ಇಂಥ ಯುವ ನಾಯಕ ಇದ್ದಕ್ಕಿದ್ದಂತೆ ತಮ್ಮ ಊರಿನಲ್ಲಿ ಅದು ಮನೆಗೆ ಸಮೀಪವೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ. ಹೀಗಾಗಿಯೇ ಅದನ್ನು ಕೊಲೆ ಎಂದು ಸಂಶಯಪಡಲಾಗುತ್ತಿದೆ.

ರವಿ ಸಾಯುವ ದಿನ ಅಂದರೆ ನ.4(ಶುಕ್ರವಾರ)ರಂದು ಮಧ್ಯಾಹ್ನ 2.30ಗಂಟೆಗೆ ತನ್ನ ಗ್ರಾಮ ಮಾಗಳಿಯಿಂದ ಪಿರಿಯಾಪಟ್ಟಣಕ್ಕೆ ಬಂದಿದ್ದರು. ಅವತ್ತು ಸಂಜೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಶಾಂತಿ ಸಭೆ ಕರೆಯಲಾಗಿತ್ತು.

ಸಭೆಗೆ ಅವರು ಹೋಗಿದ್ದರು. ಆದರೆ ಆ ಸಭೆಯಲ್ಲಿ ಏನೂ ಮಾತಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಸಭೆ ಮುಗಿದ ಬಳಿಕ ಮನೆಯತ್ತ ತನ್ನ ಬೈಕನ್ನೇರಿ ಹೊರಟಿದ್ದಾರೆ. ಆ ನಂತರ ಏನಾಯಿತು ಎಂಬುವುದೇ ನಿಗೂಢ.

ತನ್ನ ಗ್ರಾಮ ಮಾಗಳಿಗೆ ಸುಮಾರು ಎರಡು ಕಿ.ಮೀ. ದೂರವಿರುವ ತಿರುವೊಂದರಲ್ಲಿ ಬೈಕ್‍ಪಕ್ಕದಲ್ಲಿ ಹೆಣವಾಗಿ ಬಿದ್ದಿದ್ದರು. ರಾತ್ರಿ ಸುಮಾರು 8.30ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದು, ಪೊಲೀಸರು ಮೊದಲಿಗೆ ಇದೊಂದು ಹಿಟ್‍ಅಂಡ್‍ರನ್ ಅಥವಾ ಸ್ವಯಂ ಅಪಘಾತ ಎಂದೇ ಭಾವಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ರವಿ ಅಪಘಾತದಿಂದ ಸಾವನ್ನಪ್ಪಿಲ್ಲ ಪೂರ್ವ ನಿಯೋಜಿತ ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ನಡುವೆ ರವಿ ಸಹೋದರ ಸ್ವಾಮಿ ಮತ್ತು ತಂದೆ ಜವರೇಗೌಡ ಅವರು ರವಿ ಅಪಘಾತದಿಂದ ಸಾವನ್ನಪ್ಪಿಲ್ಲ.

ಹೊಡೆದು ಸಾಯಿಸಲಾಗಿದೆ ಎಂದು ದೂರು ನೀಡಿದ್ದರು. ಹೀಗಾಗಿ ಶವವನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ.

ನ.5(ಶನಿವಾರ) ಮೈಸೂರಿನ ಶವಾಗಾರಕ್ಕೆ ಶವ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಗೆಳೆಯರು ಆಗಮಿಸಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಕೊಲೆ ಪ್ರಕರಣ ದಾಖಲಿಸಿ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸತೊಡಗಿದರು.[ರುದ್ರೇಶ್ ಕೊಲೆ ಪ್ರಕರಣ: ಭುಗಿಲೆದ್ದ ಬಿಜೆಪಿ ಆಕ್ರೋಶ]

ಅತ್ತ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ಶವವನ್ನು ಕೊಂಡೊಯ್ಯಲು ಒಪ್ಪದ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಬರಲಿ ಬಳಿಕ ಕೊಂಡೊಯ್ಯುವುದಾಗಿ ಹೇಳಿದ್ದಾರೆ.

ಮಧ್ಯಾಹ್ನ 2.15ರ ವೇಳೆಗೆ ಸಂಸದ ಪ್ರತಾಪ್‍ಸಿಂಹ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದಾರೆ. ಬಳಿಕ 2.45ರ ವೇಳೆಯಲ್ಲಿ ಶವವನ್ನು ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಕೊಂಡೊಯ್ಯಲಾಯಿತು.

ಬಳಿಕ ಪಿರಿಯಾಪಟ್ಟಣದಿಂದ ಹುಟ್ಟೂರು ಮಾಗಳಿವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸಂದರ್ಭ ಜನಸಾಗರವೇ ಹರಿದು ಬಂದಿದೆ. ಪಿರಿಯಾಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳಕ್ಕೆ ಎಸ್ಪಿ ರವಿ ಡಿ.ಚನ್ನಣ್ಣನವರ್, ಡಿಸಿಪಿ ಡಾ.ಹೆಚ್.ಟಿ.ಶೇಖರ್, ಎಸಿಪಿ ಉಮೇಶ್ ಜಿ.ಶೇಟ್, ಪಿ.ಎ.ಗೋಪಾಲ್, ಇನ್ಸ್‍ಪೆಕ್ಟರ್‍ಗಳಾದ ಅಶೋಕ್‍ಕುಮಾರ್, ಸುನಿಲ್‍ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಬಂದೊಬಸ್ತ್ ಕೈಗೊಂಡಿದ್ದಾರೆ.

ರವಿ ಅಪಘಾತದಿಂದ ಸತ್ತಿರುವುದನ್ನು ಯಾವ ಹ್ಯಾಂಗಲ್‍ನಿಂದ ನೋಡಿದರೂ ಕಾಣುವುದಿಲ್ಲ. ಕಾರಣ ತಲೆಗೆ ಮಚ್ಚಿನಿಂದ ಹೊಡೆದಂತಹ ಗಾಯಗಳಾಗಿದ್ದು ದೇಹದ ಇನ್ಯಾವುದೇ ಭಾಗಕ್ಕೂ ಕನಿಷ್ಠ ತರಚಿದ ಗಾಯವೂ ಆಗಿಲ್ಲ.

ವಾಹನ ಯಥಾಸ್ಥಿತಿಯಲ್ಲಿದ್ದು ಅಪಘಾತವಾದ ಯಾವ ಕುರುಹು ಅಲ್ಲಿ ಇಲ್ಲ. ಬೇರೆ ವಾಹನ ಡಿಕ್ಕಿ ಹೊಡೆದಿದ್ದರೆ ವಾಹನವು ಜಖಂಗೊಳ್ಳಬೇಕಿತ್ತು.

ಒಂದು ವೇಳೆ ಅಪಘಾತವಾಗಿದ್ದರೆ ರವಿ ಅವರ ದೇಹದ ಇತರ ಭಾಗಗಳಿಗೂ ಗಾಯಗಳಾಗಬೇಕಿತ್ತು. ಆದರೆ ಇದ್ಯಾವುದೇ ಆಗಲೇ ಇಲ್ಲ ಅಂದ ಮೇಲೆ ವ್ಯವಸ್ಥಿತವಾಗಿ ಕೊಲೆಯಾಗಿದ್ದು, ಅದಕ್ಕೆ ರಸ್ತೆ ಅಪಘಾತದ ಬಣ್ಣ ಹಚ್ಚುತ್ತಿದ್ದಾರೆ ಎಂಬುವುದು ಸಂಸದ ಪ್ರತಾಪ್ ಸಿಂಹ ಅವರ ಆರೋಪವಾಗಿದೆ.

ಮಾಗಳಿ ಜೆ.ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೇ ನಿಖರವಾಗಿ ಹೇಳಲಾಗುವುದಿಲ್ಲ. ಮರಣೋತ್ತರ ಪರೀಕ್ಷೆ ಬಂದ ಬಳಿಕವಷ್ಟೆ ಸಾವಿಗೆ ಕಾರಣ ತಿಳಿಯಲಿದೆ ಎಂದು ಎಸ್ಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

ರವಿ ಸಾವಿನ ಸುತ್ತ ಇದೀಗ ನೂರಾರು ಸಂಶಯಗಳು ಸುತ್ತುತ್ತಿದ್ದು, ಬೈಕ್ ಅವಘಡದಿಂದಲೇ ಸಾವು ಸಂಭವಿಸಿದೆ ಎಂಬುವುದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ.

ಸಾವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಬರೀ ಅನುಮಾನಗಳ ಹುತ್ತ ಬೆಳೆಯುತ್ತಾ ಹೋಗುತ್ತದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕವಷ್ಟೆ ನೈಜತೆ ಹೊರಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A BJP worker, who is also a RSS activist Ravi, was found dead in mysterious circumstances near Magali in Mysuru district with his family and the party alleging that it was a murder.
Please Wait while comments are loading...