ಬೋನಿಗೆ ಬಿತ್ತು ಮರೂರು ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಚಿರತೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ನವೆಂಬರ್ 20: ಕಳೆದ ಆರು ತಿಂಗಳಿಂದ ರೈತರ ಕೊಟ್ಟಿಗೆಗೆ ನುಗ್ಗಿ ಮೇಕೆ, ಕುರಿ, ನಾಯಿ ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಾ ಗ್ರಾಮದ ಜನರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಗುತ್ತಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಹುಣಸೂರು ತಾಲೂಕು ಮರೂರು ಕಾವಲು ಗ್ರಾಮದಲ್ಲಿ ನಡೆದಿದೆ.

ಬೋನಿನಲ್ಲಿ ಬಂಧಿಯಾದ ಚಿರತೆ: ತಾಯಿಯ ಮಡಿಲು ಸೇರಿದ ಮರಿಗಳು!

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಮರೂರುಕಾವಲು ಗ್ರಾಮ ಸೇರಿದಂತೆ ಸುತ್ತಮುತ್ತಲ ಊರಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮರೂರುಕಾವಲು ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಬಳಿಕ ಹೊಂಚು ಹಾಕಿ ರೈತರ ಕೊಟ್ಟಿಗೆಗೆ ನುಗ್ಗಿ ಮೇಕೆ, ಕುರಿಯನ್ನು ಹೊತ್ತೊಯ್ಯುತ್ತಿತ್ತು. ಅಷ್ಟೇ ಅಲ್ಲದೆ ಸಾಕು ನಾಯಿಗಳನ್ನು ತಿಂದು ತೇಗುತ್ತಿತ್ತು. ದಿನಕ್ಕೊಂದು ಕಡೆ ಕಾಣಿಸಿಕೊಳ್ಳುತ್ತಾ ಪೊದೆ ಸೇರುತ್ತಿದ್ದ ಚಿರತೆ ಯಾರ ಕಣ್ಣಿಗೂ ಬೀಳದೆ ತನ್ನ ಬೇಟೆ ಮುಂದುವರೆಸಿತ್ತು.

Mysuru: Forest department uses goat as bait to trap leopard

ಗ್ರಾಮದ ವ್ಯಾಪ್ತಿಯಲ್ಲಿ ಸಾಕು ನಾಯಿಗಳು ನಾಪತ್ತೆಯಾಗ ತೊಡಗಿದ್ದರಿಂದ ಗ್ರಾಮಸ್ಥರಿಗೂ ಭಯವುಂಟಾಗಿತ್ತು. ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಕುರಿ, ಮೇಕೆಗಳನ್ನು ಕೊಂದು ಹಾಕುತ್ತಿದ್ದರಿಂದ ರಾತ್ರಿ ವೇಳೆ ಜಮೀನಿಗೆ ಹೋಗಲು ಭಯಪಡುವಂತಾಗಿತ್ತು.

ಚಿರತೆಯ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದ ಹಿನ್ನಲೆಯಲ್ಲಿ ಗ್ರಾಮದ ಆಡು ಸಾಕಾಣಿಕೆ ಫಾರಂನ ಬಳಿ ಬೆಳೆದ ಹುಲ್ಲಿನ ಪೊದೆಯ ಪಕ್ಕ ಕುರಿಯನ್ನು ಕಟ್ಟಿ ಬೋನನ್ನು ಇಡಲಾಗಿತ್ತು. ಭಾನುವಾರ ರಾತ್ರಿ ಈ ಮಾರ್ಗವಾಗಿ ಬಂದ ಚಿರತೆ ಕುರಿಯನ್ನು ತಿನ್ನಲು ಮುಂದಾಗಿ ಬೋನಿನಲ್ಲಿ ಸೆರೆಯಾಗಿದೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಉಪವಲಯ ಅಧಿಕಾರಿ ರಿಜ್ವಾನ್ ಅಹಮ್ಮದ್ ಹಾಗೂ ಅರಣ್ಯ ರಕ್ಷಕ ಫ್ಯಾರಿಜಾನ್ ಅವರು ಅರಣ್ಯ ವಾಹನವನ್ನು ಸಿಬ್ಬಂದಿಯೊಂದಿಗೆ ತಂದು ಅದರಲ್ಲಿ ಕೊಂಡೊಯ್ದು ರಾಷ್ಟ್ರೀಯ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಚಿರತೆ ಸೆರೆಯಾದ ಬಳಿಕ ಜನ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A leopard which has created tension among the people of Maruru village in Hunsur taluk in Mysuru district has trapped by Forest department of Nov 19th night.The Forest department uses goat as bait to trap leopard.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ