ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 17: ಮೈಸೂರು ಹೊರ ವಲಯದ ಬೆಲವತ್ತಲ ಗ್ರಾಮದ ಶಾದನಹಳ್ಳಿಯಲ್ಲಿ ಭೂತಾಯಿ ಮುನಿಸಿಕೊಂಡಿದ್ದಾಳಾ? ಏಪ್ರಿಲ್ 16 ರ ಭಾನುವಾರ ಬೆಳಗ್ಗೆ ಬೆಂಕಿಯುಗುಳಿದ ಭೂಮಿಯ ಕೆನ್ನಾಲಿಗೆಗೆ ಸಿಕ್ಕಿ, ಆಸ್ಪತ್ರೆ ಸೇರಿ ಕೊನೆಯುಸಿರೆಳೆದ ಹರ್ಷಿಲ್ ಸಾವು ಇಂಥದೊಂದು ಅನುಮಾನ ಹುಟ್ಟುಹಾಕಿದೆ.

ಈ ಭಾಗದಲ್ಲಿ ಭೂಮಿಯ ತಾಪಮಾನ 100 ಡಿಗ್ರಿ ಸೆಲ್ಷಿಯಸ್ ನಷ್ಟು ಏರಿಕೆಯಾಗಿದ್ದು, ಈ ಸ್ಥಳದಲ್ಲಿ ಯಾರೂ ನಡೆದಾಡಕೂಡದೆಂದು ಅಲ್ಲಲ್ಲಿ ಫೋಸ್ಟರ್ ಗಳನ್ನು ಹಾಕಿರುವ ಜಿಲ್ಲಾಡಳಿತ ಇಂದಿನಿಂದ 15 ದಿನದವರೆಗೂ ಈ ಭಾಗದಲ್ಲಿ ನಿಷೇದಾಜ್ಞೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

ಏಪ್ರಿಲ್ 15 ಶನಿವಾರದಂದು ಬಹಿರ್ದೆಸೆಗೆಂದು ಹೋಗಿದ್ದ ಹರ್ಷಿಲ್ ಮತ್ತು ಮಂಜುನಾಥ್ ಎಂಬ ಇಬ್ಬರು ಬಾಲಕರು ಕುದಿಯುತ್ತಿರುವ ಭೂಮಿಗೆ ಸಿಕ್ಕಿ ತೀವ್ರ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಲ್ (14) ಸಾವನ್ನಪ್ಪಿದ್ದ, ಶೇ.75% ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಂಜುನಾಥ್ ಸ್ಥಿತಿ ಗಂಭೀರವಾಗಿದೆ.[ಆಶ್ಚರ್ಯ! ಮೈಸೂರಿನಲ್ಲಿ ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕ ಸಾವು]

ಘಟನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರಿಗೆ ಶಾಸಕ ವಾಸು, ಜಿಲ್ಲಾಧಿಕಾರಿ ಡಿ.ರಂದೀಪ್ ಸಾಥ್ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಕ್ರಮ ಕೈಗೊಳ್ಳುವ ಭರವಸೆ

ಕ್ರಮ ಕೈಗೊಳ್ಳುವ ಭರವಸೆ

ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವ ಮಹದೇವಪ್ಪ, ಘನ ತ್ಯಾಜ್ಯಗಳಿಂದ ಈ ರೀತಿ ಆಗಿದ್ದರೆ ಅಂತಹ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಚರ್ಚೆ ನಡೆಸಲಾಗುತ್ತದೆ. ಇನ್ನು ಇಂತಹ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ವೈಜ್ಞಾನಿಕ ತನಿಖೆ

ಪ್ರಕರಣವನ್ನ ಎಲ್ಲಾ ಆಯಾಮಗಳಲ್ಲಿ ವೈಜ್ಞಾನಿಕ ತನಿಖೆ ನಡೆಸಲಾಗುವುದು ಎಂದೂ ಉಸ್ತುವಾರಿ ಸಚಿವರು ಹೇಳಿದ್ದಾರೆ. ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮತ್ತು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಇಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

ಭೂವಿಜ್ಞಾನಿಗಳಲ್ಲೂ ಕುತೂಹಲ

ಭೂವಿಜ್ಞಾನಿಗಳಲ್ಲೂ ಕುತೂಹಲ

ಹಿರಿಯ ಭೂವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಹಿರಿಯ ಅಧಿಕಾರಿ ಲಿಂಗರಾಜು ನೇತೃತ್ವದಲ್ಲಿ ಪರಿಶೀಲನೆ ನಡೆಸಿದೆ. ಮೈಸೂರಿನ ಆರ್ ಬಿ ಐ ಹಿಂಭಾಗದ ಭೂಮಿಯಲ್ಲಿ ನೀರು ಸುರಿದರೆ ಬೆಂಕಿ ಕಾಣಿಸಿಕೊಳ್ಳುವ ವಿಚಿತ್ರ ಕಂಡು ಬಂದು, ಅಚ್ಚರಿ ಮೂಡಿಸಿದ್ದು, ಭೂವಿಜ್ಞಾನಿಗಳಿಗೂ ಇದು ಸವಾಲು ಎನ್ನಿಸಿದೆ.

ಕಾರ್ಖಾನೆಗಳು ಕಾರಣವೇ?

ಕಾರ್ಖಾನೆಗಳು ಕಾರಣವೇ?

ಈ ಜಾಗ ಸೋಮಣ್ಣ ಎಂಬವರಿಗೆ ಸೇರಿದ್ದಾಗಿದ್ದು, ಜಮೀನಿನ ಪಕ್ಕದಲ್ಲೇ ನೋಟು ಪ್ರಿಂಟ್ ಮಾಡುವ ಆರ್ಬಿಐ ಸಂಸ್ಥೆ ಸೇರಿದಂತೆ, ಹಲವು ಕಾರ್ಖಾನೆಗಳು ಹಾಗು ಇತರೆ ಕಂಪನಿಗಳು ಇವೆ. ಅಲ್ಲೇ ಇರುವ ಟೈರ್ ಕಂಪನಿಯಿಂದ ರಾಸಾಯನಿಕ ಹೊರ ಬಿಡುತ್ತಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಕಾರ್ಖಾನೆಗಳು ತಮ್ಮ ತ್ಯಾಜ್ಯಗಳನ್ನು ಈ ಜಾಗದಲ್ಲಿ ತಂದು ಸುರಿಯುತ್ತಿದ್ದಾರೆ ಎಂಬ ದೂರಿಗೆ ಪೂರಕವೆಂಬಂತೆ ಸ್ಥಳದಲ್ಲಿ ಒಂದಷ್ಟು ಕೆಮಿಕಲ್ ಗಳು ಕಂಡು ಬರುತ್ತಿವೆ. ಒಟ್ಟಿನಲ್ಲಿ ಮಣ್ಣಿನ ಪರೀಕ್ಷೆಯ ನಂತರವೇ ಸೂಕ್ತ ಕಾರಣ ಪತ್ತೆಯಾಗಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಾಮಾಚಾರವೇ?

ವಾಮಾಚಾರವೇ?

ಘಟನೆಗೆ ಸಂಬಂಧಿಸಿದಂತೆ ಕೆಲ ಜನರು ಇದು ವಾಮಾಚಾರ ಎಂದೆಲ್ಲ ಮಾತನಾಡಿಕೊಳ್ಳುತ್ತಿರುವುದೂ ಕೇಳಿಬರುತ್ತಿದೆ. ಒಟ್ಟಿನಲ್ಲಿ ಬೆಂಗಳೂರಿನ ಪ್ರಯೋಗಾಲಯದಲ್ಲಿ ಮಣ್ಣಿನ ಪರೀಕ್ಷೆ ನಡೆಸಿದ ಮೇಲೆಯೇ ಸತ್ಯಾಂಶ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಏತನ್ಮಧ್ಯೆ ಹರ್ಷಿಲ್ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a mysterious incident a boy dies by falling into a boiling land in Shadanahalli village in Belavettala region, Mysuru outskirts. The incident took place on 15th Saturday, the incident challenges the geologists.
Please Wait while comments are loading...