ಮಳೆಯಿಲ್ಲದೆ ಎಲ್ಲಿಯ ಯುಗಾದಿ, ರೈತರ ವಿಷಾದಗೀತೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 05 : ಯುಗಾದಿ ಹಬ್ಬ ಬರುತ್ತಿದ್ದಂತೆಯೇ ಮೈಸೂರು ಜಿಲ್ಲೆಯಾದ್ಯಂತ ನಿಸರ್ಗ ಹಸಿರಿನ ತೋರಣ ಕಟ್ಟಿ ಕಂಗೊಳಿಸಬೇಕಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ನಿಸ್ತೇಜವಾಗಿರುವ ಮಾವಿನ ಮರಗಳಲ್ಲಿ, ದುಂಬಿಯ ನಿನಾದವಿಲ್ಲ, ಕೋಗಿಲೆ ಕುಹೂಕುಹೂ ಕೇಳಿಬರುತ್ತಿಲ್ಲ.

ಸಾಮಾನ್ಯವಾಗಿ ಇಷ್ಟರಲ್ಲೇ ಮಳೆ ಸುರಿಯ ಬೇಕಿತ್ತು. ಮಳೆ ಸುರಿದಿದ್ದರೆ ಗಿಡಮರಗಳು ಜೀವ ತುಂಬಿ ನಲಿದಾಡುತ್ತಿದ್ದವು. ಮಳೆ ಬಾರದ ಕಾರಣ ಒಂದೆಡೆ ಮರದ ಚಿಗುರು ಬಾಡಿಹೋಗುತ್ತಿದ್ದರೆ, ಮತ್ತೊಂದೆಡೆ ಜನರೂ ಹನಿ ನೀರಿಗಾಗಿ ಪರಿದಾಡುವಂತಾಗಿದೆ. ಜನ ಜಾನುವಾರುಗಳು ಮಳೆರಾಯನಿಗಾಗಿ ಮುಗಿಲತ್ತ ದೃಷ್ಟಿ ನೆಡುವಂತಾಗಿದೆ.

ಮಾವಿನ ಚಿಗುರು, ಕೋಗಿಲೆ ನಿನಾದ ಎಲ್ಲವೂ ಯುಗಾದಿ ಹಬ್ಬದ ಸಂಕೇತ. ಮಲೆನಾಡಿನಲ್ಲಿ ಯುಗಾದಿ ಬಂತೆಂದರೆ ಇನ್ನೇನು ಮಳೆಗಾಲ ಆರಂಭವಾಯಿತೆನ್ನುವ ಸಂತಸ. ಈ ವರ್ಷ ಎಲ್ಲವೂ ಭಿನ್ನವಾಗಿದೆ. ರೈತರು ನೀರಿಲ್ಲದೆ ಯಾವ ಬೆಳೆಯನ್ನೂ ಬೆಳೆದಿಲ್ಲ. ಬೆಳೆದಿದ್ದ ಬೆಳೆ ಒಣಗಿ ನೆಲಕಚ್ಚಿದೆ. ಹೀಗಿರುವಾಗ ಎಲ್ಲಿಯ ಯುಗಾದಿ ಎಂಬುದು ರೈತರ ವಿಷಾದದ ನುಡಿ. [ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ..]

Mysuru farmers not in a mood to celebrate Ugadi

"ವರ್ಷಕ್ಕೊಂದು ಯುಗಾದಿ. ಮಳೆ ಬೆಳೆ ಚೆನ್ನಾಗಿ ಆದಾಗ ನಾವೆಲ್ಲರೂ ಖುಷಿಯಿಂದ ಆಚರಿಸುತ್ತಿದ್ದೆವು. ಈ ಬಾರಿ ನೀರಿಲ್ಲದೆ ಯಾವ ಬೆಳೆಯೂ ಬೆಳೆದಿಲ್ಲ. ಬೆಳೆ ಬೆಳೆಯದ ಮೇಲೆ ನಮಗೆಲ್ಲಿಂದ ಹಣ ಬರಬೇಕು? ದುರಾದೃಷ್ಟಕ್ಕೆ ಕಾವೇರಿಯೂ ಬತ್ತಿಹೋಗಿದ್ದಾಳೆ. ಹಬ್ಬವನ್ನು ಸಾಲ ಮಾಡಿ ಮಾಡುವಂತಾಗಿದೆ" ಎಂಬುದು ಸಣ್ಣ ರೈತ ಮಾದಪ್ಪನ ಅಳಲು.

ಅದ್ಯಾಕೋ ಗೊತ್ತಿಲ್ಲ ಈ ಬಾರಿಯ ಹಬ್ಬ ಸಿಹಿಗಿಂತ ಕಹಿಯನ್ನೇ ಜಾಸ್ತಿ ಉಣಿಸುವಂತೆ ಕಾಣುತ್ತಿದೆ. ಬೆಲೆಗಳು ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ರೈತರ ಬೆಳೆಗಳು ಒಣಗಿವೆ. ಮತ್ತೊಂದೆಡೆ ರೈತ ನೀರಿಲ್ಲದೆ ಕೃಷಿ ಮಾಡದೆ ಕೈಕಟ್ಟಿ ಕುಳಿತಿದ್ದಾನೆ. ಜಮೀನಿನಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲೂ ನೀರು ಆರಿದೆ. [ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]

Mysuru farmers not in a mood to celebrate Ugadi

ಸಾಮಾನ್ಯವಾಗಿ ಯುಗಾದಿಗೆಲ್ಲ ಮಳೆ ಬಂದು ಭೂಮಿ ಹದವಾಗುತ್ತಿತ್ತು. ಹೊನ್ನಾರು ಕಟ್ಟಿ ರೈತರು ಉಳುಮೆ ಆರಂಭಿಸುತ್ತಿದ್ದರು. ಇಲ್ಲೀತನಕ ಮಳೆ ಸುರಿದಿಲ್ಲ. ರೈತರಲ್ಲಿರಬೇಕಾದ ಖುಷಿಯ ಛಾಯೆ ನಶಿಸಿ ಹೋಗಿದೆ. ಹೀಗೆ ಆದರೆ ಹೇಗೆ ಎಂಬ ಭಯದಲ್ಲೇ ಯುಗಾದಿ ಹಬ್ಬವನ್ನು ಆಚರಿಸುವಂತಾಗಿದೆ.

ಯುಗಾದಿಯನ್ನು ಗ್ರಾಮೀಣ ಪ್ರದೇಶದ ಜನರು ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದರು. ಪ್ರಕೃತಿಯು ಹಬ್ಬಕ್ಕೆ ಸಿದ್ಧವಾಗಿ ನಿಲ್ಲುತ್ತಿತ್ತು. ಪ್ರಸಕ್ತ ವರ್ಷ ಅದ್ಯಾಕೋ ಗೊತ್ತಿಲ್ಲ ಗ್ರಾಮೀಣ ಜನರ ಸಂಭ್ರಮಕ್ಕೆ ಬರ ಬಡಿದಿದೆ. ಮಳೆ ಬಿದ್ದರೆ ಅದೇ ಯುಗಾದಿ.. ಹುಯ್ಯೋ ಹುಯ್ಯೋ ಮಳೆರಾಯ ಅಂಥ ಮುಗಿಲತ್ತ ದೃಷ್ಟಿ ನೆಟ್ಟು ಅಂಗಲಾಚುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers and general public in Mysuru district are not in a mood to celebrate Hindu New Year Ugadi as rain has failed, acute drought is staring, crops have dried, trees have lost charm. Farmers are praying to rain God for an immediate rainfall.
Please Wait while comments are loading...