'ವೇತನ ರಜಾ ನೀಡಲ್ವಾ, ಲೈಂಗಿಕ ಕಿರುಕುಳ ದೂರು ನೀಡ್ತೀನಿ!'

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 17 : "ನೀನು ರಜಾ ವೇತನ ಸರಿ ಮಾಡದಿದ್ದರೆ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದೆ, ಮಾನಸಿಕ ಹಿಂಸೆ ಕೊಡುತ್ತಿದ್ದೆ ಎಂದು ದೂರು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ" ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರು ಧಮ್ಕಿ ಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪ ನಿರ್ದೇಶಕ ದೇವರಾಜ್‍ ಅವರಿಗೆ ಮೇಲಿನಂತೆ ಧಮ್ಕಿ ಹಾಕಿ ಬ್ಲಾಕ್ ಮೇಲ್ ಮಾಡಲು ಯತ್ನಿಸಿದವರು ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ಬಸವರಾಜ ನಾಯ್ಕ ಮತ್ತು ಅವರ ಸಂಗಡಿಗರು.

ಮಹಿಳಾ ಉದ್ಯೋಗಿಯಾಗಿರುವ ಮಂಡಳಿಯ ಹುಣಸೂರು ವಿಸ್ತರಣಾಧಿಕಾರಿ ಇತ್ತೀಚಿಗೆ ರಜಾ ಹಾಕಿದ್ದರು. ಆದರೆ, ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ(ಫಿಸಿಕಲ್ ಫಿಟ್ನೆಸ್ ಸರ್ಟಿಫಿಕೇಟ್) ನೀಡದ ಹಿನ್ನೆಲೆಯಲ್ಲಿ ಉಪ ನಿರ್ದೇಶಕರು ರಜಾ ವೇತನ ಮಂಜೂರು ಮಾಡಿರಲಿಲ್ಲ.

ಇದನ್ನು ಕೇಳಲೊಪ್ಪದ ಬಸವರಾಜ ನಾಯ್ಕ, ಆ ಮಹಿಳೆ ಸಮೇತ ಸುಮಾರು 10ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ದೇವರಾಜ್ ಅವರ ಕಚೇರಿಗೆ ನುಗ್ಗಿ, ಕಚೇರಿಯ ಸಿಬ್ಬಂದಿಯನ್ನು ಅಧಿಕಾರಿಯಿದ್ದ ಕೊಠಡಿಗೆ ಬಿಡದಂತೆ ದಿಗ್ಬಂಧನ ಹಾಕಿ ಧಮ್ಕಿ ಹಾಕಿದರು.

Mysuru district Congress leader threatens govt official

ಸಿಬ್ಬಂದಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, "ನನಗೆ ಸಿಎಂ ಗೊತ್ತು, ಸಚಿವ ರುದ್ರಪ್ಪ ಲಮಾಣಿ ಗೊತ್ತು, ಎಲ್ಲರೂ ಗೊತ್ತು. ನೀನು ರಜಾ ವೇತನ ಸರಿ ಮಾಡದಿದ್ದರೆ ಲೈಂಗಿಕ ಕಿರುಕುಳ ಕೊಡುತ್ತಿದ್ದೆ, ಮಾನಸಿಕ ಹಿಂಸೆ ಕೊಡುತ್ತಿದ್ದೆ ಎಂದು ದೂರು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೇನೆ" ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

"ಮಹಿಳಾ ಉದ್ಯೋಗಿಗೆ ನಾನು ಯಾವುದೇ ರೀತಿಯ ತೊಂದರೆ ನೀಡಿಲ್ಲ. ರಜಾ ವೇತನ ಸಿಗಬೇಕಾದರೆ ಫಿಸಿಕಲ್ ಫಿಟ್ನೆಸ್ ಸರ್ಟಿಫಿಕೆಟ್ ಸಲ್ಲಿಸಬೇಕಾದುದು ಕಡ್ಡಾಯ. ಅದನ್ನು ಸಮರ್ಪಕವಾಗಿ ಕೊಡದೆ ರಾಜಕಾರಣಿಗಳ ಮುಖಾಂತರ ನನಗೆ ಧಮ್ಕಿ ಹಾಕಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಆಕೆಯನ್ನು ಬೆಂಬಲಿಸಿ ಬಂದ ಬಸವರಾಜ ನಾಯ್ಕ, ನನ್ನನ್ನು ನಿಂದಿಸಿ, ಬೆದರಿಕೆ ಹಾಕಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ" ಎಂದು ದೇವರಾಜ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಕೆಲ ತಿಂಗಳ ಹಿಂದೆ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ, ಮೈಸೂರಿನ ಮಾಜಿ ಜಿಲ್ಲಾಧಿಕಾರಿ ಸಿ. ಶಿಖಾ ಅವರ ಕರ್ತವ್ಯಕ್ಕಿ ಅಡ್ಡಿಪಡಿಸಿ, ಅವರನ್ನು ಏಕವಚನದಲ್ಲಿ ನಿಂದಿಸಿ ಧಮ್ಕಿ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕಾರಣಕ್ಕೆ ಮರೀಗೌಡನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಮರೀಗೌಡ ಈಗ ಜಾಮೀನು ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru district khadi and village industries assistant director Devaraj has been threatened by district Congress general secretary HL Basavaraj for not sactioning leave to a woman employee. The woman had not produced physical fitness certificate.
Please Wait while comments are loading...