ಮೈಸೂರು ದಸರಾದ ಜಂಬೂಸವಾರಿ ಸೂಪರ್ರೂ ಕಣ್ರೀ...

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 12: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಮಂಗಳವಾರ ಸಾಕ್ಷಿಯಾದರು. ಈ ಅಪರೂಪದ ಕ್ಷಣಗಳಿಗಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಅರ್ಜುನ ಹೊತ್ತು ಸಾಗುತ್ತಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ಚಾಮುಂಡೇಶ್ವರಿಯನ್ನು ಕಣ್ತುಂಬಿಸಿಕೊಂಡು ಕೃತಾರ್ಥರಾದರು.

ಬೆಳಗ್ಗೆಯಿಂದಲೇ ಮೈಸೂರಿನತ್ತ ಆಗಮಿಸಿದ ಲಕ್ಷಾಂತರ ಮಂದಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಪಡೆದವರು ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾದರೆ, ಕೆಲವರು ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗವನ್ನು ಆರಿಸಿಕೊಂಡು ಆಸೀನರಾದರು. ಮತ್ತೆ ಕೆಲವರು ಕಟ್ಟಡ ಹಾಗೂ ಮರಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ವೀಕ್ಷಿಸುವ ಪ್ರಯತ್ನ ಮಾಡಿದರು.[ಜಂಬೂಸವಾರಿಗೆ ಕಳೆಗಟ್ಟಿದ ಸ್ತಬ್ಧ ಚಿತ್ರ, ಕಲಾತಂಡಗಳು]

dasara parade

ಇದೇ ವೇಳೆ ಮಳೆ ಸುರಿದಿದ್ದರಿಂದ ಕೆಲಕಾಲ ಗೊಂದಲವುಂಟಾಯಿತು. ಆದರೆ ಮಳೆಗೆ ವಿಚಲಿತರಾಗದ ಜನ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಸನ್ನದ್ಧರಾಗಿದ್ದರು. ಮಧ್ಯಾಹ್ನ 2.16ಕ್ಕೆ ನಂದಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆಯಲ್ಲಿಯೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ 2.45ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು. ಮಳೆಯಲ್ಲಿಯೇ ಮೆರವಣಿಗೆ ಆರಂಭಗೊಂಡಿತು.

ಜಂಬೂಸವಾರಿ ಮೆರವಣಿಗೆಯ ಮುಂಚೂಣಿಯಲ್ಲಿ ಸಿಂಗಾರಗೊಂಡ ಗಜಪಡೆ ಪೈಕಿ ನಿಶಾನೆ ಆನೆಯಾಗಿ ಬಲರಾಮ, ನೌಪಥ್ ಆನೆಯಾಗಿ ಗಜೇಂದ್ರ ಮತ್ತು ಅಭಿಮನ್ಯು ತೆರಳಿದವು. ಗಜಪಡೆಯ ಮುಂದೆ ವೀರಗಾಸೆ ತಂಡ ವಾದ್ಯಕ್ಕೆ ಹೆಜ್ಜೆಹಾಕುತ್ತಾ ಮುನ್ನಡೆದರೆ, ಅವರ ಹಿಂದೆ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ 42 ಸ್ತಬ್ಧ ಚಿತ್ರ ಹಾಗೂ 52ಕ್ಕೂ ಹೆಚ್ಚು ಕಲಾ ತಂಡಗಳು ಸಾಗಿದವು.[ಮಳೆಯಿಲ್ಲದೆ ಕಂಗಾಲಾಗಿದ್ದ ಮೈಸೂರಿಗೆ ವರುಣನ ಸಾಂತ್ವನ]

dasara wrestling

ಮೆರವಣಿಗೆಯ ಕೊನೆಯಲ್ಲಿ ಸಂಜೆ 4.45ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ, ಮೇಯರ್ ಭೈರಪ್ಪ, ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ರಂದೀಪ್, ಅರ್ಜುನ ಹೊತ್ತು ಬಂದ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥಿಸಿದರು.

ಅರ್ಜುನನ ಎಡ ಮತ್ತು ಬಲಭಾಗದಲ್ಲಿ ಕಾವೇರಿ ಮತ್ತು ವಿಜಯ ಎಂಬ ಹೆಣ್ಣಾನೆಗಳು ಹೆಜ್ಜೆ ಹಾಕಿದವು. ಈ ಸಂದರ್ಭದಲ್ಲಿ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ ತೆರಳಿದ ಅರ್ಜುನನ ಮುಂದೆ ನಾಗಸ್ವರ ತಂಡ ಹಾಗೂ ಅಶ್ವಾರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ಪಥಸಂಚಲನ ಗಮನ ಸೆಳೆದವು.[ಜಿಟಿಜಿಟಿ ಮಳೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ]

dasara yaduveera

ಅರಮನೆ ಅವರಣದಿಂದ ಬಲರಾಮನ ದ್ವಾರದ ಮೂಲಕ ಚಾಮರಾಜವೃತ್ತ ಹಾಗೂ ಕೆ.ಆರ್.ವೃತ್ತದ ಮೂಲಕ ಬನ್ನಿಮಂಟಪದ ಕಡೆಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿತು. ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಕುಳಿತು, ನಿಂತು ವೀಕ್ಷಿಸುತ್ತಿದ್ದ ಜನರು ಚಾಮುಂಡೇಶ್ವರಿಗೆ ಜೈಕಾರ ಹಾಕಿದರು. ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯವೂ ಕಂಡು ಬಂತು.

ಯದುವೀರ್ ಬರಲಿಲ್ಲ: ಸಾಮಾನ್ಯವಾಗಿ ಚಿನ್ನದ ಅಂಬಾರಿ ಹೊತ್ತ ಅರ್ಜುನನಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭ ಮುಖ್ಯಮಂತ್ರಿಯೊಂದಿಗೆ ಅರಮನೆಯ ಒಡೆಯರ್ ಇರುವುದು ಸಾಮಾನ್ಯ. ಕಳೆದ ವರ್ಷ ಯದುವೀರರು ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಬಾರಿ ಅವರು ಪಾಲ್ಗೊಳ್ಳದಿರುವುದು ಅಚ್ಚರಿಗೆ ಕಾರಣವಾಯಿತು.[ಮಳೆಗಾಗಿ ಸಿದ್ದು ಪ್ರಾರ್ಥನೆ.. ಮೈಸೂರಿನಲ್ಲಿ ವರುಣನ ಸಿಂಚನ]

dasara urulu seve

ಅಪರಿಚಿತನ ಉರುಳುಸೇವೆ: ಜಂಬೂಸವಾರಿಯ ಮೆರವಣಿಗೆಗೆ ಮೊದಲು ಮಳೆ ಸುರಿದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಲು ಮುಂದಾದ. ಈ ವಿಷಯ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಹೊರಗೆ ಕರೆದೊಯ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru dasara jamboo savaari is a special event. Tuesday lakhs of people witnessed Jamboo savaari. CM Siddaramaiah, minister H.C.Mahadevappa and others partcipated.
Please Wait while comments are loading...