ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದಸರಾ ಗಜಪಡೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 22 : ಮೈಸೂರಿಗೆ ಗಜಪಡೆ ಆಗಮಿಸಿತೆಂದರೆ ದಸರಾ ಆರಂಭ ಅಂತಲೇ ಅರ್ಥ. ಜತೆಗೆ ದಸರಾ ಚಟುವಟಿಕೆಗಳು ಗರಿಗೆದರಿಬಿಡುತ್ತವೆ. ಅರಮನೆ ಆವರಣದಲ್ಲಿ ಬೀಡು ಬಿಡುವ ಆನೆಗಳ ಆರೈಕೆ ಸುಲಭದಲ್ಲ ಪ್ರತಿದಿನವೂ ಅವುಗಳನ್ನು ಜತನದಿಂದ ನೋಡಿಕೊಳ್ಳಬೇಕು.

ಮೈಸೂರಿನಲ್ಲಿ ಬೀಡು ಬಿಡುವ ಆನೆಗಳಿಗೆ ತಾಲೀಮು, ಮಜ್ಜನ, ಆರೋಗ್ಯ ತಪಾಸಣೆ ಹೀಗೆ ಅವುಗಳನ್ನು ಕಣ್ಣಿಟ್ಟು ಕಾಯಬೇಕು. ಇದಕ್ಕಾಗಿಯೇ ಈ ಬಾರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಗಜಪಡೆಗಳಿಗೆ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.[ದಸರಾ ಆನೆಗಳ ಪರಿಚಯ ಇಲ್ಲಿದೆ]

elephant

ಗಜಪಡೆಗಳೊಂದಿಗೆ ಬರುವ ಮಾವುತ, ಕಾವಾಡಿ ಅವರ ಕುಟುಂಬಗಳಿಗೆ ವಾಸ್ತವ್ಯ ಹೂಡಲು ಟೆಂಟ್, ಮಕ್ಕಳಿಗೆ ಟೆಂಟ್ ಶಾಲೆಯನ್ನೂ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಮಾವುತರಿಗೆ ಮತ್ತು ಕಾವಾಡಿಗಳಿಗೆ ಎಲ್ಲಿ ಶೆಡ್ ನಿರ್ಮಾಣ ಮಾಡಬೇಕೆಂಬುದರ ಬಗ್ಗೆ ಮತ್ತು ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳ ಪರಿಶೀಲನೆಯನ್ನು ಅರಣ್ಯಾಧಿಕಾರಿಗಳು ನಡೆಸಿದ್ದಾರೆ.[ಮೈಸೂರು ದಸರಾಕ್ಕೆ ಕಳೆಕಟ್ಟಿದ ಗಜಪಯಣ]

ವಾಸ್ತವ್ಯ ಹೂಡುವ ಮಾವುತ ಮತ್ತು ಗಿರಿಜನರ ಕುಟುಂಬಗಳಿಗೆ ಶೆಡ್ ನಿರ್ಮಾಣದೊಂದಿಗೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ, ಮಕ್ಕಳಿಗೆ ಟೆಂಟ್ ಶಾಲೆ, ಆಯುರ್ವೇದ ಚಿಕಿತ್ಸೆಗೆ ಶೆಡ್ ಎಲ್ಲ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ.[ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]

ಸಿಸಿಟಿವಿ ಅಳವಡಿಕೆ : ಗಜಪಡೆಗಳು ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ಇವುಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಪುಂಡಾಟಿಕೆಯನ್ನು ನಡೆಸುತ್ತಾರೆ. ಈ ಹಿನ್ನಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಆಹಾರ ತಯಾರಿಸುವ ಸ್ಥಳ ಸೇರಿದಂತೆ ಪ್ರಮುಖ ಆಯ್ದ 7 ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ದೂರದಿಂದ ಬರುವ ಪ್ರವಾಸಿಗರು ಫೋಟೋ ತೆಗೆಯುವ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಕೇವಲ ಆನೆಗಳನ್ನಷ್ಟೆ ವೀಕ್ಷಿಸಿ ತೆರಳುವ ಬದಲು ಪುಂಡಾಟಿಕೆ ನಡೆಸುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಲು ಸಿಸಿಟಿವಿಯಿಂದ ಅನುಕೂಲವಾಗಿದೆ.

ಹೆಚ್ಚಿನ ನಿಗಾ : ಇತ್ತೀಚೆಗಷ್ಟೇ ನಗರದ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಗೊಂಡಿರುವ ಪ್ರಕರಣ ಇನ್ನೂ ಹಸಿರಾಗಿಯೇ ಇರುವುದರಿಂದ ಈ ಬಾರಿಯ ದಸರಾಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳು, ಅಪರಿಚಿತ ವ್ಯಕ್ತಿಗಳು ಎಲ್ಲದರ ಮೇಲೆಯೂ ಹೆಚ್ಚಿನ ನಿಗಾವಹಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Forest department is planning to install CCTV cameras in Mysuru palace vulnerable pockets. First batch of six elephants to participate in this year Dasara have arrived and established base at Aloka, Mysuru.
Please Wait while comments are loading...