ಮೈಸೂರು ದಸರಾ ಗಜಪಡೆ ಮೇಲೆ ಸಿಸಿಟಿವಿ ಹದ್ದಿನ ಕಣ್ಣು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 9 : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಅರ್ಜುನ ನೇತೃತ್ವದ ಈ ಆನೆಗಳಿಗೆ ಸಿಸಿ ಕ್ಯಾಮೆರಾ ಕಣ್ಗಾವಲು ಅಳವಡಿಸಲಾಗಿದೆ.

ಅರಮನೆಯಲ್ಲಿ ಫಿರಂಗಿ ಸಿಡಿಸಿದ ಪೊಲೀಸ್ ಸಶಸ್ತ್ರ ಮೀಸಲುಪಡೆ ತಂಡ

ದಸರಾ ಮಹೋತ್ಸವದಲ್ಲಿ ಆನೆಗಳ ಪಾತ್ರ ಪ್ರಮುಖ. ಇದನ್ನು ಮನಗೊಂಡು ಆನೆಗಳ ಮೇಲೆ ತೀವ್ರ ನಿಗಾ ವಹಿಸಲು ಅರಣ್ಯ ಇಲಾಖೆ ಮುಂದಾಗಿದ್ದು , ಇಲಾಖೆಯ ಸಿಬ್ಬಂದಿ ಆನೆಗಳ ಮಾವುತರು, ಕಾವಾಡಿಗಳು ಮೇಲ್ವಿಚಾರಕರೊಂದಿಗೆ 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕಣ್ಗಾವಲು ಹಾಕಲಾಗಿದೆ. ದಸರಾ ಆನೆಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ ವೇಳೆ ಸಾರ್ವಜನಿಕರು ಆನೆಗಳೊಂದಿಗೆ ಅಸಂಬದ್ಧವಾಗಿ ವರ್ತಿಸಿ ಉದ್ರೇಕಗೊಳಿಸುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಸಿಸಿ ಕ್ಯಾಮೆರಾಗಳ ಮೊರೆ ಹೋಗಲಾಗಿದೆ.

Mysuru Dasara: CCTV cameras in Jamboo Savari elephants' training premise

ಜಂಬೂಸವಾರಿ ಮೆರವಣಿಗೆಯಲ್ಲಿ ನಾಡದೇವಿ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿ ಇರುವ 750 ಕೆ. ಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಗಜಪಡೆಯ ನಾಯಕ ಅರ್ಜುನ , ವಿವಿಧ ಜವಾಬ್ದಾರಿ ನಿರ್ವಹಿಸುವ ಅಭಿಮನ್ಯು ಗಜೇಂದ್ರ ಬಲರಾಮ , ಕಾವೇರಿ, ವಿಜಯ, ವರಲಕ್ಷ್ಮಿ ಹಾಗೂ ಭೀಮ ಆನೆಗಳ ಮೇಲೆ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣಿಟ್ಟಿದೆ .

ಅರ್ಜುನನ ಬಳಿ ಎರಡು ದಿಕ್ಕುಗಳಲ್ಲಿಯೂ ಒಂದೊಂದು ಸಿಸಿ ಕ್ಯಾಮೆರಾ , ಆನೆಗಳಿಗೆ ಪೌಷ್ಟಿಕ ಆಹಾರ ತಯಾರಿಸುವ ಅಡುಗೆ ಮನೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಿರುವ ಕೊಠಡಿ ಹಾಗೂ ಉಳಿದ ಆನೆಗಳ ಚಲನವಲನ ಗಮನಿಸಲುವುದಕ್ಕೆ ಒಟ್ಟು 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿವಿಧ ಆಯಕಟ್ಟಿನ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ನಿರಂತರವಾಗಿ ಗಮನಿಸಲು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರನ್ನು ನೇಮಿಸಿದೆ. ಎಂಟು ಕ್ಯಾಮೆರಾಗಳಲ್ಲಿ ದೃಶ್ಯಗಳು ಪರದೆಯ ಮೇಲೆ ಬಿತ್ತರವಾಗಲಿದೆ .

ಅಕಸ್ಮಾತ್ ಸಿಬ್ಬಂದಿ ಕಣ್ತಪ್ಪಿಸಿ ಯಾರಾದರೂ ಆನೆಗಳ ಸಮೀಪ ತೆರಳಿದರೆ ಅದನ್ನು ಗಮನಿಸಿ ಕೂಡಲೇ ಎಚ್ಚರಿಸಲಾಗುತ್ತಿದೆ. ಎರಡನೇ ಹಂತದ ಆನೆಗಳಿಗೂ ಕೂಡ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ ಎಂದು ಡಿಸಿಎಫ್ ಏಡುಕೊಂಡಲು ತಿಳಿಸಿದ್ದಾರೆ .

ದಸರಾ ಆನೆಗಳ ಮೇಲೆ ಹೆಚ್ಚಿನ ಕಾಳಜಿ ಇಡಲಾಗಿದ್ದು ಇದರಿಂದಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಸೂಕ್ಷ್ಮವಾಗಿ ಗಮನಿಸುವ ಸಲುವಾಗಿ ಸಾರ್ವಜನಿಕರ ವರ್ತನೆ ಆನೆಗಳ ಸ್ವಭಾವದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂಬುದನ್ನು ಗಮನಿಸಲಾಗುತ್ತದೆ. ಕೆಲವರು ಫೋಟೋ ತೆಗೆಸಿಕೊಳ್ಳಲು ಆನೆಗಳಿಗೆ ಹಣ್ಣು ಹಂಪಲು ನೀಡಲು ಮಾವುತರು ಹಾಗೂ ಕಾವಾಡಿಗಳ ಕಣ್ತಪ್ಪಿಸಿ ಆನೆಗಳ ಸಮೀಪ ನುಸುಳುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru district administration has decided to fix 8 CCTV cameras in where Jamboo Ssavara elephants are taking trainings.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ