ಮೈಸೂರಲ್ಲಿ ಪಟಾಕಿ ವ್ಯಾಪಾರ ಠುಸ್ಸೋ ಠುಸ್!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 31: ಈ ಬಾರಿ 'ಪಟಾಕಿ ತ್ಯಜಿಸಿ ಪರಿಸರ ಉಳಿಸಿ' ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಲ್ಲಿ ವಿವಿಧ ಸಂಘಟನೆಗಳು ಅರಿವು ಮೂಡಿಸಿದ ಕಾರಣ ಪಟಾಕಿ ವ್ಯಾಪಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಭಾನುವಾರ ಮಧ್ಯರಾತ್ರಿ ಸುರಿದ ಭಾರೀ ಮಳೆ ಪಟಾಕಿ ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.

ಒಂದೆಡೆ ಪರಿಸರ ಕಾಳಜಿಗೆ ಜನ ಓಗೊಟ್ಟು ಪಟಾಕಿ ಖರೀದಿಸಲು ಹಿಂದೇಟು ಹಾಕಿದ್ದರಿಂದ ಬಂಡವಾಳ ಹಾಕಿ ಪಟಾಕಿ ಅಂಗಡಿ ಹಾಕಿದ್ದ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ನಗರದ ಜೆ.ಕೆ.ಮೈದಾನ ಸೇರಿದಂತೆ ಹಲವೆಡೆ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿಲ್ಲ.

Mysuru Cracker sellers report dull business

ಬಹುಶಃ ಇವತ್ತು ಹಬ್ಬದ ಕೊನೆಯ ದಿನವಾದ್ದರಿಂದ ಕೊನೆಗಳಿಗೆಯಲ್ಲಿ ಪಟಾಕಿ ಖರೀದಿಗೆ ಮುಂದಾದರೂ ಅಚ್ಚರಿಪಡುವಂತಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಗರದಲ್ಲಿ ಈ ಬಾರಿ ಕಿವಿಗೆ ಬಡಿಯುವ ಪಟಾಕಿಗಳಾಗಲೀ, ಬಾಣಬಿರುಸು ಆರ್ಭಟವಾಗಲೀ ಹೆಚ್ಚಾಗಿ ಕಂಡು ಬರುತ್ತಿಲ್ಲ. ಒಂದು ವೇಳೆ ಇವತ್ತು ಪಟಾಕಿ ವ್ಯಾಪಾರ ಹಚ್ಚಿದರೂ ಶೇಕಡವಾರು ಪ್ರಮಾಣ ಕಡಿಮೆಯೇ ಎನ್ನಬಹುದಾಗಿದೆ.

ಅಂಗಡಿ ಮಾಲೀಕರು ಹೇಳುವಂತೆ ಈ ಬಾರಿ ಶೇ. 30ರಷ್ಟು ಮಾತ್ರ ಪಟಾಕಿ ವ್ಯಾಪಾರ ಇದುವರೆಗೆ ಆಗಿದೆಯಂತೆ. ಪಟಾಕಿ ಅಂಗಡಿ ಮುಂದೆ ನೂಕು ನುಗ್ಗಲು ಕಂಡು ಬರುತ್ತಿಲ್ಲ. ಪಟಾಕಿ ವ್ಯಾಪಾರದಲ್ಲಿ ಒಂದಷ್ಟು ಲಾಭ ಮಾಡಿಕೊಳ್ಳುತ್ತಿದ್ದ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿದೆ.

Mysuru Cracker sellers report dull business

ವ್ಯಾಪಾರ ಕುಸಿತಕ್ಕೆ ನಾನಾ ಕಾರಣ : ಪರಿಸರ ಜಾಗೃತಿ, ಬೆಲೆ ಹೆಚ್ಚಳ, ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಬಾರದಿರುವುದು ಎಲ್ಲವೂ ಪಟಾಕಿ ವ್ಯಾಪಾರಿಗಳಿಗೆ ದೀಪಾವಳಿ ಕಹಿಯಾಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ನಗರಪಾಲಿಕೆ, ಜಿಲ್ಲಾಡಳಿತ, ವಿವಿಧ ಸಂಘ- ಸಂಸ್ಥೆ, ಶಾಲಾ-ಕಾಲೇಜುಗಳು 'ಪಟಾಕಿ ಬಿಡಿ ದೀಪ ಹಿಡಿ' ಎಂಬ ಘೋಷಣೆಯೊಂದಿಗೆ ಪಟಾಕಿಯಿಂದಾಗುವ ಪರಿಸರ ನಾಶದ ಅರಿವು ಕಾರ್ಯಕ್ರಮಗಳನ್ನು ಕಳೆದ ಒಂದು ವಾರದಿಂದ ಮಾಡಿದ್ದರಿಂದ ಪಟಾಕಿ ವ್ಯಾಪಾರ ಕ್ಷೀಣಿಸಲು ಕಾರಣವಾಗಿದೆ.

ಕಳೆದ 2 ವರ್ಷದಿಂದ ರಾಜ್ಯದಲ್ಲಿ ಭೀಕರ ಬರಗಾಲದ ಕಾರಣ ಜನಕ್ಕೆ ಹಬ್ಬದ ಆಸಕ್ತಿಯಿಲ್ಲ. ವರ್ಷದಿಂದ ವರ್ಷಕ್ಕೆ ಇತರ ಬೆಲೆಗಳಂತೆ ಪಟಾಕಿ ದರದಲ್ಲೂ ಏರಿಕೆ ಕಂಡಿರುವುದು ಗ್ರಾಹಕರು ಪಟಾಕಿಯಿಂದ ಕೊಂಚ ದೂರವೇ ಉಳಿಯುವಂತೆ ಮಾಡಿದೆ ಎನ್ನಬಹುದೇನೋ?

ಈ ನಡುವೆ ದಿಢೀರ್ ಮಳೆ ಸುರಿದಿದ್ದರಿಂದ ಪಟಾಕಿ ಮಳೆಗೆ ನೆನೆಯುವಂತಾಗಿದೆ. ಅಂತೂ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ವ್ಯಾಪಾರ ಠುಸ್ ಆಗಿದ್ದಂತು ಸತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru: Sellers of firecrackers are reporting a dull business due to dampen weather conditions and environmental awareness.
Please Wait while comments are loading...