ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೊಂದು 'ಬ್ರಾಹ್ಮಿನ್ಸ್ ಕೆಫೆ', ಇಂಥ ಹೆಸರು ಯಾಕಿಡಬಾರದು?

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 7 : ಹೋಟೆಲ್ ಗಳಿಗೆ ಅಥವಾ ಯಾವುದೇ ಉದ್ಯಮಕ್ಕೆ ಒಂದು ಜಾತಿಯನ್ನು ಹೆಸರಾಗಿ ಇಡಬಹುದಾ? ಬೆಂಗಳೂರಿನಲ್ಲಿ ಈ ಹಿಂದೆ ಆರಂಭವಾಗಿ, ಆ ನಂತರ ನಿಲ್ಲಿಸಿಯೇ ಬಿಟ್ಟಿದ್ದ 'ಬ್ರಾಹ್ಮಿನ್ಸ್ ಲಂಚ್ ಬಾಕ್ಸ್' ಬಗ್ಗೆ ಕೂಡ ಆಕ್ಷೇಪ ವ್ಯಕ್ತವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಜಾತಿಸೂಚಕ ಹೆಸರುಗಳನ್ನು ಉದ್ಯಮಗಳಿಗೆ ಬಳಸುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಈಗ ಅಂಥದ್ದೇ ಸುದ್ದಿ ಮೈಸೂರಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ಬ್ರಾಹ್ಮಿನ್ಸ್ ಕೆಫೆ ಎಂಬ ಹೆಸರಿನ ಹೋಟೆಲ್ ಗೆ ಕೆಲವರು ಹೋಗಿರಬಹುದು, ಹಲವರು ದೂರದಿಂದ ನೋಡಿರಬಹುದು. ಮತ್ತೂ ಕೆಲವರು ಅಲ್ಲಿ ತಿಂಡಿ-ಕಾಫಿ ರುಚಿಯನ್ನು ಸವಿದಿರಬಹುದು. ಹಾಗಂತ ಅಲ್ಲಿಗೆ ಹೋಗುವವರು ಹೋಟೆಲ್ ಹೆಸರನ್ನೇ ಮುಖ್ಯವಾಗಿ ಪರಿಗಣಿಸಿರುತ್ತಾರಾ?

ಲಂಚೂ ಇಲ್ಲ, ಬಾಕ್ಸೂ ಇಲ್ಲ, ಬ್ರಾಹ್ಮಣರ ಮೇಲೇಕೆ ಕೋಪ?ಲಂಚೂ ಇಲ್ಲ, ಬಾಕ್ಸೂ ಇಲ್ಲ, ಬ್ರಾಹ್ಮಣರ ಮೇಲೇಕೆ ಕೋಪ?

ಇದಕ್ಕೆ ಉತ್ತರ ಮಾತ್ರ ಚರ್ಚೆ ಆದರೆ ಒಳ್ಳೆಯದು. ಏಕೆಂದರೆ, ಮೈಸೂರಿನ ಚಾಮುಂಡಿಪುರಂ ಬಳಿ ಎರಡು ತಿಂಗಳಿನಿಂದ ಈಚೆಗೆ ಬ್ರಾಹ್ಮಿನ್ಸ್ ಕೆಫೆ ಎಂಬ ಹೋಟೆಲ್ ಆರಂಭವಾಗಿದೆ. ಸದ್ಯಕ್ಕಂತೂ ಅದರ ರುಚಿ-ಶುಚಿ, ಬೆಲೆ ಇತ್ಯಾದಿ ಕಾರಣಗಳಿಗಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!

ಹೋಟೆಲ್ ಉದ್ಯಮದಲ್ಲಿ ಹೊಸದಾಗಿ ಹೆಜ್ಜೆಯಿಟ್ಟಿರುವ ಪ್ರಸಾದ್ ಹಾಗೂ ಅವರ ಪತ್ನಿ ಶ್ವೇತಾ ನೀಡುತ್ತಿರುವ ಸೇವೆ ಜನರನ್ನು ಆಕರ್ಷಿಸುತ್ತಿದೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿ ಈ ಹೋಟೆಲ್ ನ ಹೆಸರು ಸದ್ಯಕ್ಕೆ ಕೆಲ ಪ್ರಗತಿಪರರ ಕೆಂಗಣ್ಣಿಗೆ ಹಾಗೂ ಆಕ್ಷೇಪಕ್ಕೆ ಗುರಿಯಾಗಿದೆ.

ಬ್ರಾಹ್ಮಿನ್ಸ್ ಕೆಫೆ ಹೆಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ

ಬ್ರಾಹ್ಮಿನ್ಸ್ ಕೆಫೆ ಹೆಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ

ಮೊದಲಿಗೆ ಹೇಳಿದಂತೆ ಈ ಹೋಟೆಲ್ ನ ಹೆಸರು ಬ್ರಾಹ್ಮಿನ್ಸ್ ಕೆಫೆ. ಇಲ್ಲಿ ಸಿಗುವುದು ಶುದ್ಧ ಸಸ್ಯಾಹಾರಿ ಬ್ರಾಹ್ಮಣರ ಶೈಲಿಯ ತಿಂಡಿ- ತಿನಿಸುಗಳು. ಪುಳಿಯೋಗರೆ, ನುಚ್ಚಿನುಂಡೆ, ಹಯಗ್ರೀವ, ಮಲ್ಲಿಗೆ ಇಡ್ಲಿ ಹೀಗೆ ಇನ್ನಷ್ಟು ಇವೆ. ಇದೇ ಈಗ ಹೆಚ್ಚು ಚರ್ಚಾ ವಿಚಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಿನ್ಸ್ ಕೆಫೆ ಮಾಲೀಕರಾದ ಪ್ರಸಾದ್ ರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬ್ರಾಹ್ಮಿನ್ಸ್ ಕೆಫೆ ಎಂಬ ಹೆಸರಿನ ಈ ಹೋಟೆಲ್ ಆರಂಭಿಸಿದ್ದು ಏಕೆ? ಹೋಟೆಲ್ ಗೆ ಜಾತಿ ಸೂಚಕ ಪದಗಳನ್ನು ಬಳಸಬಾರದು. ಕೂಡಲೇ ಹೆಸರು ತೆಗೆಯಿರಿ. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕಾಮೆಂಟ್ ಹಾಕಲು ಶುರು ಮಾಡಿದ್ದಾರೆ.

ಅಷ್ಟೆಲ್ಲ ಇರುವಾಗ ನಮ್ಮ ಮೇಲೆ ಏಕೆ ಕಣ್ಣು?

ಅಷ್ಟೆಲ್ಲ ಇರುವಾಗ ನಮ್ಮ ಮೇಲೆ ಏಕೆ ಕಣ್ಣು?

ಇನ್ನು ಈ ಕುರಿತಂತೆ ಮಾತನಾಡಿದ ಹೋಟೆಲ್ ಮಾಲೀಕ ಪ್ರಸಾದ್, ಸದ್ಯಕ್ಕೆ ಹಲವರು ಕಣ್ಣು ಬ್ರಾಹ್ಮಿನ್ಸ್ ಕೆಫೆ ಮೇಲೆ ಬಿದ್ದಿದೆ. ಸದಾ ಕಾಲ ಜಾತಿ ಸೂಚಕಗಳು ಕಣ್ಣು ಕೆಂಪಾಗುವಂತೆ ಮಾಡಲು ಸಿಗೋದು ಬ್ರಾಹ್ಮಣರೇ ಏಕೆ? ಗೌಡ್ರ ಮಿಲಿಟರಿ ಹೋಟೆಲ್, ಗೌಡ್ರ ಬಾಡೂಟ, ಶೆಟ್ಟಿ ಲಂಚ್ ಹೋಂ, ಪೂಜಾರೀಸ್ ಕಿಚನ್, ಲಿಂಗಾಯತ ಖಾನಾವಳಿ ಇವೆಲ್ಲ ನೋಡಿ ಸುಮ್ನೆ ಇರ್ತೀವಿ. ಅದ್ಯಾಕೆ ಭಟ್ರು ಕಂಡ್ರೆ ಉರಿ? ಅಯ್ಯಂಗಾರ್ ಬೇಕರಿ ಎಂಬ ಹೆಸರು ತಲಾತಲಾಂತರದಿಂದಲೂ ಇದೆ. ನಮ್ಮ ದುಡ್ಡಿನಲ್ಲಿ ಎಲ್ಲಿಯೂ ಜಾತಿಗೆ ಅಪಚಾರವಾಗದಂತೆ ಹೋಟೆಲ್ ನಡೆಸುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ? ಯಾರೋ ಏನೋ ಹೇಳಿದರೂ ಎಂದು ನಮ್ಮ ಹೋಟೆಲ್ ಮುಚ್ಚುವುದಕ್ಕೆ ಆಗಲ್ಲ. ನಮ್ಮ ಹೋಟೆಲ್ ಗೆ ಹೆಚ್ಚು ಬರುವವರು ಬ್ರಾಹ್ಮಣರಲ್ಲ, ಇತರೇ ವರ್ಗದವರು ಎನ್ನುತ್ತಾರೆ.

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಬೆಂಬಲ

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಬೆಂಬಲ

ಈಗ ತಲೆ ಎತ್ತಿರುವ ವಿವಾದದ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಅಜಯ್ ಶಾಸ್ತ್ರಿ, ಯಾರೋ ಕೆಲಸವಿಲ್ಲದ ಗಿರಾಕಿಗಳು ಏನೋ ಹೇಳಿದರೆಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜಾತಿಯನ್ನು ಆಧರಿಸಿಯೇ ಸಂವಿಧಾನದಲ್ಲಿ ನಿರ್ದಿಷ್ಟ ಸೌಲಭ್ಯವನ್ನು ನೀಡಲಾಗುತ್ತದೆ. ಅಂತಹದರಲ್ಲಿ ತಕರಾರು ಎತ್ತದವರು ಈ ಸಣ್ಣ ಹೋಟೆಲ್ ನ ಮೇಲೆ ಏಕೆ ಸಿಟ್ಟಾಗಿದ್ದಾರೆ ಎಂದು ಪ್ರಶ್ನಿಸುತ್ತಾರೆ.

ನಮ್ಮ ದೇಶದಲ್ಲಿ ಅಂಥ ಯಾವ ಕಾನೂನು ಇಲ್ಲ

ನಮ್ಮ ದೇಶದಲ್ಲಿ ಅಂಥ ಯಾವ ಕಾನೂನು ಇಲ್ಲ

ಹೀಗೆ ಹೆಸರು ಸೂಚಕ ಪದ ಇಡುವುದು ಸರಿಯೇ ಎಂದು ಒನ್ಇಂಡಿಯಾ ಕನ್ನಡದಿಂದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಿವೇಕವಂಶಿ ಮಾತನಾಡಿಸಿದಾಗ ಅವರು, ಇಂತಹ ಕಾರಣಕ್ಕೆ ಸ್ವಂತ ಉದ್ಯಮಗಳಿಗೆ ಜಾತಿಯ ಹೆಸರನ್ನು ಇಡಬಾರದು ಎನ್ನುವ ಕಾನೂನು ನಮ್ಮ ದೇಶದಲ್ಲಿ ಜಾರಿಯಲ್ಲಿಲ್ಲ. ಅಕಸ್ಮಾತ್ ಧರ್ಮಕ್ಕೆ ಅಥವಾ ಜಾತಿಗೆ ಅಪಮಾನ ಆಗುವಂಥ ಕಾಯಕ ನಡೆದರೆ ಮಾತ್ರ ಕಾನೂನು ವ್ಯಾಪ್ತಿಗೆ ಬರುತ್ತದೆ. ಅದರೆ ಮೈಸೂರಿನ ಹೋಟೆಲ್ ವಿಚಾರದಲ್ಲಿ ಏನೂ ತಪ್ಪಿಲ್ಲ ಎನ್ನುತ್ತಾರೆ. ಆದರೆ ಒಂದು ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ ಅಂದಾಗ ಆ ಬಗ್ಗೆ ಮುಕ್ತ ವೇದಿಕೆಯಲ್ಲಿ ಅಭಿಪ್ರಾಯ ಸಂಗ್ರಹ ಆಗಬೇಕು, ಸರಿ-ತಪ್ಪುಗಳ ಬಗ್ಗೆ ಯಾವುದೇ ಪೂರ್ವಗ್ರಹ ಇಲ್ಲದೆ ಆಲೋಚಿಸಬೇಕು. ಈ ಬಗ್ಗೆ ಓದುಗರಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

English summary
Mysuru Brahmin cafe hotel name become controversy. There is heated discussion on social media. Here is the complete story about controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X