ಮೈಸೂರು: ಗಣೇಶನ ಹಬ್ಬದಲ್ಲಿ ಇಲಿಯನ್ನು ಪೂಜಿಸುವ ಕುಟುಂಬ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 22: ಇಡೀ ದೇಶವೂ ಗೌರಿ-ಗಣೇಶ ಹಬ್ಬಕ್ಕಾಗಿ ಸಿದ್ಧತೆ ನಡೆಸುತ್ತಿದೆ. ಗೌರಿ-ಗಣೇಶನ ಮೂರ್ತಿಯ ಖರೀದಿಯ ಭರಾಟೆ ಹೆಚ್ಚಾಗಿರುವ ಸಂದರ್ಭದಲ್ಲೇ ಮೈಸೂರಿನ ಕೆಲವು ಕುಟುಂಬದ ಜನರು ಇಲಿಯ ಮಣ್ಣಿನ ವಿಗ್ರಹ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ!

ಮೈಸೂರಿನಲ್ಲಿರುವ ಆರ್ಯ ವ್ಯಾಸ ಸಮುದಾಯದ ಸುಮಾರು 25 ಕುಟುಂಬದ ಜನರು ಪ್ರತಿವರ್ಷ ಗೌರಿ-ಗಣೇಶನ ಹಬ್ಬದ ಸಂದರ್ಭದಲ್ಲಿ ಇಲಿಯನ್ನು ಪೂಜಿಸುತ್ತಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಎಂಬ ಊರಿನಿಂದ ಬಂದು ಮೈಸೂರಿನಲ್ಲಿ ನೆಲೆಸಿರುವ ಆರ್ಯ ವ್ಯಾಸ ಸಮುದಾಯದ ಜನರು ಪ್ರತಿವರ್ಷ ಚೌತಿಯಲ್ಲಿ ಗಣೇಶನ ಬದಲಾಗಿ ಆತನ ವಾಹನ ಮೂಷಿಕನನ್ನು ಪೂಜಿಸುತ್ತಾರೆ!

Mouse worship in Ganesha Festival

ಮೈಸೂರಿನ ಕುವೆಂಪುನಗರದಲ್ಲಿ ವಾಸವಿರುವ ಆರ್ಯ ವ್ಯಾಸ ಸಮುದಾಯದ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ, ಮೊದಲು ಇವರ ಕುಟುಂಬದಲ್ಲಿ ಗಣೇಶನನ್ನು ಅದ್ಧೂರಿಯಾಗಿ ಪೂಜಿಸಲಾಗುತ್ತಿತ್ತಂತೆ. ಆದರೆ ಕುಟುಂಬಕ್ಕೆ ಮಾತ್ರ ಯಾವುದೇ ರೀತಿಯ ಒಳಿತಾಗಿರಲಿಲ್ಲ.

ಹೀಗಿರುವಾಗ ಮನೆಯ ಯಜಮಾನರೊಬ್ಬರ ಕನಸಿನಲ್ಲಿ ಬಂದ ಗಣೇಶ, ನನ್ನ ಬದಲಾಗಿ ನನ್ನ ವಾಹನ ಇಲಿಯನ್ನು ಪೂಜಿಸಿ, ನಿಮಗೆ ಒಳಿತಾಗುತ್ತದೆ ಎಂದನಂತೆ. ತದನಂತರ ಕಾಕತಾಳೀಯ ಎಂಬಂತೆ ಇವರ ಜೀವನದಲ್ಲಿ ಸುಧಾರಣೆ ಕಂಡುಬಂತಂತೆ. ಇವೆಲ್ಲ ಬಹಳ ವರ್ಷ ಹಳೆಯ ಮಾತು. ಆದರೆ ಇಂದಿಗೂ ಈ ಕುಟುಂಬ ಮಾತ್ರ ಗಣೇಶನ ಬದಲು ಇಲಿಯನ್ನೇ ಪೂಜಿಸುತ್ತಿದೆ.

ಈ ವರ್ಷವೂ ಈಗಾಗಲೇ ಮೂಷಿಕನ ಮೂರ್ತಿಯ ಖರೀದಿಗೆ ತೊಡಗಿರುವ ಕುಟುಂಬ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some people of Arya Vyasa community in Mysuru have been worshipping mouse instead of Ganesh in Ganesha Festival since many years!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X