ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಗಡಿಭಾಗದಲ್ಲೊಂದು ‘ಕಲ್ಯಾಳ ಜಲಪಾತ’

By ಬಿ.ಎಂ.ಲವಕುಮಾರ್
|
Google Oneindia Kannada News

ಕಲ್ಯಾಳ ಜಲಪಾತವನ್ನು ಹೆಚ್ಚಿನವರು ಹತ್ತಿರದಿಂದ ವೀಕ್ಷಿಸಿರಲಾರರು. ಹಾಗೆಂದು ಇದು ಅಪರಿಚಿತ ಜಲಪಾತವೇನಲ್ಲ. ಕೊಡಗಿನ ಗಡಿಯ ಪಶ್ಚಿಮ ಘಟ್ಟದಲ್ಲಿ ಕಾನನಗಳ ನಡುವೆ ನಾಟ್ಯಾಂಗಿಯಂತೆ ಚೆಲುವನ್ನು ಪ್ರದರ್ಶಿಸಿ, ಭೋರ್ಗರೆದು ಇಳೆಯೆಡೆಗೆ ಧುಮುಕುವ ದೃಶ್ಯ ಮಡಿಕೇರಿಯಿಂದ ಸುಳ್ಯದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ದೂರದಿಂದ ಗೋಚರಿಸಿರುತ್ತದೆ.

ಇನ್ನು ಕಲ್ಯಾಳ ಜಲಪಾತವನ್ನು ವೀಕ್ಷಿಸಬೇಕೆಂದರೆ ಒಂದು ದಿನವನ್ನು ಮೀಸಲಿಡಬೇಕು. ಕಲ್ಲು, ಮುಳ್ಳು, ಏರು-ತಗ್ಗುಗಳನ್ನೇರಿ ಶ್ರಮ ಪಡಬೇಕು. ಇದಕ್ಕೆಲ್ಲ ತಯಾರಿದ್ದರೆ ಜಲಪಾತದ ಸೊಬಗನ್ನು ಸನಿಹದಿಂದ ನೋಡಿ ಆನಂದಿಸಬಹುದು.

ಕಲ್ಯಾಳ ಜಲಪಾತವನ್ನು ವೀಕ್ಷಿಸಲು ತೆರಳುವವರು ಮಡಿಕೇರಿಯಿಂದ ಮಂಗಳೂರು ರಸ್ತೆಯಲ್ಲಿ ಸುಮಾರು 23 ಕಿ.ಮೀ. ದೂರ ಸಾಗಿದಾಗ ಸಿಗುವ 'ಕೊಯನಾಡು' ಎಂಬಲ್ಲಿಂದ ಎಡಬದಿಯಲ್ಲಿರುವ ರಸ್ತೆಯಲ್ಲಿ 5 ಕಿ.ಮೀ. ಸಾಗಬೇಕು. ವಾಹನದಲ್ಲಿ ತೆರಳುವುದಾದರೆ ಅಷ್ಟೊಂದು ಕಷ್ಟವಾಗಲಾರದು. ಆದರೆ ನಡೆದು ಹೋಗುವುದಾದರೆ ಸುಮಾರು ಒಂದು ಗಂಟೆ ಬೇಕಾಗುತ್ತದೆ.

Mesmarizing Kalyala waterfalls, Madikeri

ಗುಡ್ಡವನ್ನೇರುತ್ತಾ ಸಾಗಬೇಕಾಗಿರುವುದರಿಂದ ಆಯಾಸವಾಗುವುದು ಸಹಜ. ಆದರೂ ಸುತ್ತಮುತ್ತಲಿನ ಪ್ರಕೃತಿ ನಮ್ಮ ಆಯಾಸವನ್ನು ಹೊಡೆದೋಡಿಸಿ ಉಲ್ಲಾಸ ತುಂಬುತ್ತಿರುತ್ತದೆ. ಹಾದಿ ಕ್ರಮಿಸುತ್ತಾ ಸಾಗಿದಾಗ ಮೂರು ರಸ್ತೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ಎರಡು ರಸ್ತೆಗಳನ್ನು ಬಿಟ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಜಲಪಾತದತ್ತ ಕೊಂಡೊಯ್ಯುತ್ತದೆ.

ದೂರದಲ್ಲಿ ಹರಿಯುವ ನದಿಯ ಝುಳುಝುಳು ನಿನಾದ, ಭೋರ್ಗರೆದು ಧುಮ್ಮಿಕ್ಕುವ ಜಲಪಾತದ ಜಲಪಾತದ ಇರುವನ್ನು ಖಚಿತಪಡಿಸುತ್ತದೆ. ದಟ್ಟ ಅರಣ್ಯದ ನಡುವೆ ರೂಪುಗೊಂಡು, ನಗರದಿಂದ ದೂರ ಉಳಿದಿರುವುದರಿಂದ ಜಲಪಾತದೆಡೆಗಿನ ಜಾಡಾಗಲೀ, ಸೂಚನೆಗಳಾಗಲೀ ಸಿಗಲಾರವು.

ಹರಿದು ಬರುವ ನದಿಯಲ್ಲಿಯೇ ಜಲಪಾತದ ಭೋರ್ಗರೆತವನ್ನು ಆಲಿಸುತ್ತಾ ಸಾಗಬೇಕು. ಇದು ಅಷ್ಟು ಸುಲಭವಲ್ಲ. ಮರಗಳ ಕೊಂಬೆ, ರೆಂಬೆ, ಕಲ್ಲು- ಮುಳ್ಳು ಎಲ್ಲವೂ ಅಡ್ಡಿಪಡಿಸುತ್ತವೆ. ಅವೆಲ್ಲವನ್ನು ಸಾವಧಾನದಿಂದ ತಪ್ಪಿಸಿಕೊಂಡು ನಡೆದರೆ ಜಲಪಾತ ಎದುರಾಗುತ್ತದೆ. ಹೆಬ್ಬಂಡೆಯ ಮೇಲೆ ಸುಮಾರು 150 ಅಡಿಯಷ್ಟು ಎತ್ತರದಿಂದ ಆವೇಶಭರಿತವಾಗಿ ಧುಮುಕಿ ಅಲ್ಲಿಂದ ಪದರ ಪದರವಾಗಿ ಹರಿದು ತಳ ಸೇರಿ ಮುನ್ನಡೆಯುವುದನ್ನು ನೋಡುವುದೇ ಮಜಾ ಎನಿಸುತ್ತದೆ.

ಜೋಡಿಸಿಟ್ಟಂತಿರುವ ಬೃಹತ್ ಬಂಡೆಗಳ ಮೇಲೆ ನೀರು ಅಪ್ಪಳಿಸುವಾಗ ಕಾಣಸಿಗುವ ದೃಶ್ಯ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಭೂ ತಾಯಿಯೊಡಲಲ್ಲಿಟ್ಟ ಬೆಳ್ಳಿಯನ್ನು ಕರಗಿಸಿ ಸುರಿಯುತ್ತಿರುವ ಧಾರೆಯೇನೋ ಎನ್ನುವಂತೆ ಭಾಸವಾಗ ತೊಡಗುತ್ತದೆ. ಸುತ್ತಲೂ ಮರಕಾಡು ಬೆಳೆದು ನಿಂತಿರುವ ಕಾರಣ ಮಟಮಟ ಮಧ್ಯಾಹ್ನವೂ ಸಹ ಮುಂಜಾನೆಯಂತಾಗುತ್ತದೆ.

ಬೆಟ್ಟದ ಮೇಲಿದ್ದು ದಟ್ಟ ಕಾಡಿನಿಂದ ಕೂಡಿರುವ ಈ ಪ್ರದೇಶಕ್ಕೆ ಕಲ್ಯಾಳ ಎಂಬ ಹೆಸರು ಹೇಗೆ ಬಂತು ಎಂದು ತಿಳಿಯ ಹೊರಟರೆ ಅಲ್ಲಿನವರು ಹೀಗೆ ಹೇಳುತ್ತಾರೆ. ಬಹಳಷ್ಟು ವರ್ಷಗಳ ಹಿಂದೆ ಸಂಪಾಜೆ ಸನಿಹದಲ್ಲಿ ಕಲ್ಯಾಳ ಮಜಲು ಎಂಬಲ್ಲಿ ನೆಲೆಸಿದ ಮನೆತನದವರು ಅಲ್ಲಿ ಕೃಷಿಕಾರ್ಯವನ್ನು ಮಾಡಲಾಗದ ಕಾರಣ ಸೂಕ್ತ ಸ್ಥಳವನ್ನು ಹುಡುಕುತ್ತಾ ಪಶ್ಚಿಮ ಘಟ್ಟದ ಕಲ್ಯಾಳ ಪ್ರದೇಶಕ್ಕೆ ಬಂದು ಅಲ್ಲಿಯೇ ನೆಲೆಯೂರಿದರಂತೆ. ಕಲ್ಯಾಳ ಮನೆತನದವರು ನೆಲೆಸಿದ ಜಾಗ ಕಲ್ಯಾಳ ಗ್ರಾಮವಾಯಿತೆಂದು ಹೇಳುತ್ತಾರೆ. ಕಲ್ಯಾಳದಲ್ಲಿ ನಿರ್ಮಾಣವಾಗಿರುವ ಜಲಪಾತವೂ ಕಲ್ಯಾಳ ಹೆಸರಿನಿಂದಲೇ ಕರೆಯ್ಲಾಗುತ್ತದೆ. .

ಬೇಸಿಗೆಯಲ್ಲಿ ತೀರಾ ಸೊರಗಿ ಮಳೆಗಾಲದಲ್ಲಿ ಚೇತರಿಸಿಕೊಳ್ಳುವ ಕಲ್ಯಾಳ ಜಲಪಾತವನ್ನು ವೀಕ್ಷಿಸಲು ತೆರಳುವವರು ಮಳೆಗಾಲದ ನಂತರ ತೆರಳುವುದು ಒಳಿತು. ಏಕೆಂದರೆ ಮಳೆಗಾಲದ ಹಾದಿ ಅಷ್ಟೊಂದು ಸುಗಮವಲ್ಲ. ಕಾರಣ ಕೆಸರು, ಜಿಗಣೆ ಎಲ್ಲವೂ ಅಡ್ಡಿಪಡಿಸುವುದರೊಂದಿಗೆ ನಮ್ಮ ಹುಮ್ಮಸ್ಸಿಗೆ ಅಡ್ಡಿಯಾಗಬಹುದು.

English summary
Kalyala is one of the beautiful waterfalls in Kodagu district. It is 23 kms from Koyanadu. It is beautiful experience to trek and visit this waterfalls after monsoon. Travelogue by BM Lavakumar, Coorg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X