ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ..

By ಮೈಸೂರು ಪ್ರತಿನಿಧಿ
|
Google Oneindia Kannada News

ಮಾವಿನಹಣ್ಣಿನ ಕಾಲ ಬಂದಿದೆ. ನಗರಗಳ ಕೆಲವು ಹಣ್ಣಿನ ಅಂಗಡಿಗಳಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಕಾಣಿಸತೊಡಗಿವೆ. ಆದರೆ ಮೈಸೂರಿನಿಂದ ಹುಣಸೂರಿಗೆ ತೆರಳುವ ರಸ್ತೆಯಲ್ಲಿ ಅದಾಗಲೇ 'ಮಾವಿನಸಂತೆ' ಆರಂಭವಾಗಿದೆ.

ಸಾಮಾನ್ಯವಾಗಿ ಮಾವಿನಗಿಡಗಳಲ್ಲಿ ಕಾಯಿ ಬೆಳೆದು ಹಣ್ಣಾಗುತ್ತಿದ್ದಂತೆಯೇ ಇಲ್ಲಿ ಸಂತೆಯೂ ಆರಂಭವಾಗುತ್ತದೆ. ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88 ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಕಡ್ನಳ್ಳಿಯೇ ಮಾವಿನಸಂತೆಗೆ ಕೇಂದ್ರ ಬಿಂದು. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಸಾಗುವವರು ಚಿಕ್ಕಕಡ್ನಳ್ಳಿಯಲ್ಲಿ ಕಿಲೋಮೀಟರ್ ಗಟ್ಟಲೆ ತಳ್ಳುವ ಗಾಡಿಗಳಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಜೋಡಿಸಿಟ್ಟು ಮಾರಾಟ ಮಾಡುವುದನ್ನು ನೋಡಿರುತ್ತಾರೆ. ಪಕ್ಕದಲ್ಲಿಯೇ ಮಾವಿನ ತೋಪುಗಿರುವುದರಿಂದ ಅಲ್ಲಿಂದಲೇ ಕೊಯ್ದು ಮಾರಾಟ ಮಾಡುತ್ತಿರಬೇಕು ಎಂಬ ಕಲ್ಪನೆಯೂ ಮೂಡದಿರದು.

ನಿತ್ಯದ ಸಂತೆಗೂ ಡಿಮ್ಯಾಂಡ್: ಇಷ್ಟಕ್ಕೂ ಪಟ್ಟಣದಲ್ಲಿ ಮಾವು ಮೇಳ ನಡೆದಾಗಲೇ ಹೆಚ್ಚಿನ ವ್ಯಾಪಾರವಾಗುವುದಿಲ್ಲ ಇನ್ನು ಹಳ್ಳಿಯಲ್ಲಿ ನಡೆಯುವ ನಿತ್ಯದ ಸಂತೆಗೆ ಯಾರಪ್ಪಾ ಬರ್ತಾರೆ ಎಂಬ ಅಚ್ಚರಿ ಮೂಡಬಹುದು. ಆದರೆ ಇಲ್ಲಿನ ಮಾವಿನ ಹಣ್ಣು ಮಾರಾಟಗಾರರಿಗೆ ರಸ್ತೆಯಲ್ಲಿ ವಾಹನಗಳಲ್ಲಿ ತೆರಳುವ ಪ್ರಯಾಣಿಕರೇ ಗ್ರಾಹಕರು. [ಸಿದ್ದರಾಮಯ್ಯ ಲಾಲ್ಬಾಗಿನಲ್ಲಿ ಮಾವಿನಹಣ್ಣು ಚಪ್ಪರಿಸಿದರಯ್ಯ]

ಮೈಸೂರಿನಿಂದ ತೆರಳುವವರು ಮತ್ತು ಮೈಸೂರಿಗೆ ಆಗಮಿಸುವ ಪ್ರಯಾಣಿಕರ ತಮ್ಮ ವಾಹನಗಳನ್ನು ನಿಲ್ಲಿಸಿ ತಮಗೆ ಬೇಕಾದ ಮಾವಿನಹಣ್ಣನ್ನು ಖರೀದಿಸುತ್ತಾರೆ. ಹಾಗೆನೋಡಿದರೆ ಇಲ್ಲಿ ನಡೆಯುವ ಮಾವಿನಹಣ್ಣಿನ ಸಂತೆ ಇಂದು ನಿನ್ನೆಯದಲ್ಲ. ಇಲ್ಲಿನ ಸಂತೆಗೆ ಹಲವು ದಶಕಗಳ ಇತಿಹಾಸವಿದೆ.

ಥರಾವರಿ ಮಾವಿನ ತಳಿಗಳು

ಥರಾವರಿ ಮಾವಿನ ತಳಿಗಳು

ಹಳ್ಳಿಯ ಸುತ್ತಮುತ್ತಲಿನ ನಾಗವಾಲ, ಕಾಮನಕೊಪ್ಪಲು, ಸೀಗಳ್ಳಿ, ಮಾರಗೌಡನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಹೇರಳವಾಗಿ ಮಾವಿನಹಣ್ಣನ್ನು ಬೆಳೆಯುತ್ತಾರೆ. ಮೊದಲೆಲ್ಲಾ ಕೆಲವೇ ಜಾತಿಯ ಹಣ್ಣನ್ನು ಬೆಳೆಯುತ್ತಿದ್ದರಾದರೂ ಇತ್ತೀಚೆಗೆ ಸ್ಥಳೀಯ ಬೆಳೆಗಾರರು ಮಾವಿನ ಕೃಷಿಯನ್ನು ಅಭಿವೃದ್ಧಿಗೊಳಿಸಿದ್ದು ಅಲ್ಫೆನ್ಸೊ, ಬಾದಾಮಿ, ರಾಜಗಿರಿ, ಮಲ್ಲಿಕಾ, ರಸಪುರಿ, ನೀಲಂ ಮತ್ತು ತೋತಾಪುರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ತಾವು ಬೆಳೆದ ಹಣ್ಣನ್ನು ದೂರದ ಮೈಸೂರಿಗೆ ಒಯ್ದು ಮಾರಾಟ ಮಾಡಲು ಸಾಧ್ಯವಾಗದ ಕೆಲವು ಬೆಳೆಗಾರರು ರಸ್ತೆಬದಿಯಲ್ಲಿರಿಸಿ ಮಾರಾಟ ಮಾಡಲು ಮುಂದಾದರು.
ಪ್ರಯಾಣಿಕರೇ ಇಲ್ಲಿನ ಗ್ರಾಹಕ ಪ್ರಭುಗಳು

ಪ್ರಯಾಣಿಕರೇ ಇಲ್ಲಿನ ಗ್ರಾಹಕ ಪ್ರಭುಗಳು

ಮೈಸೂರಿನಿಂದ ಕೊಡಗು, ಹಾಸನ, ಮಂಗಳೂರಿನತ್ತ ತೆರಳುವ ಕೆಲವು ಪ್ರವಾಸಿಗರು, ಪ್ರಯಾಣಿಕರು ತಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿಂದ ಹಣ್ಣನ್ನು ಖರೀದಿಸುತ್ತಿದ್ದರು. ತೋಟದಿಂದ ನೇರವಾಗಿ ತಾಜಾ ಹಣ್ಣು ಗ್ರಾಹಕರ ಕೈಗೆ ಸೇರುತ್ತಿದ್ದುದರಿಂದ ದೂರದಿಂದ ಬರುತ್ತಿದ್ದ ಪ್ರವಾಸಿಗರು ಹಣ್ಣನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.

ಯಾವಾಗ ಪ್ರವಾಸಿಗರು ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಪ್ರಾರಂಭಿಸಿದರೋ ಸುತ್ತಮುತ್ತಲಿನ ಇತರೆ ಯುವಕರು ಮಾವಿನಹಣ್ಣಿನ ಮಾರಾಟದತ್ತ ಒಲವು ತೋರಿಸತೊಡಗಿದರಲ್ಲದೆ, ಆ ಮೂಲಕ ಉದ್ಯೋಗದ ಹಾದಿಕಂಡು ಕೊಂಡರು. ಇವತ್ತಿಗೂ ಸುತ್ತಮುತ್ತಲ ಹಳ್ಳಿಯ ಯುವಕರು ಮಾವಿನಹಣ್ಣಿನ ಮಾರಾಟವನ್ನು ಫಾರ್ಟ್ ಟೈಮ್ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ.
ಮೈಸೂರಿನ ಮಾರುಕಟ್ಟೆಯಿಂದ ಸಂತೆಗೆ

ಮೈಸೂರಿನ ಮಾರುಕಟ್ಟೆಯಿಂದ ಸಂತೆಗೆ

ಚಿಕ್ಕಕಡ್ನಳ್ಳಿಯಲ್ಲಿ ಮಾವಿನಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬುವುದನ್ನು ಅರಿತ ಕೆಲವರು ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದು ಗಾಡಿಯಲ್ಲಿರಿಸಿ ಮಾರಾಟ ಮಾಡಿದರೆ, ಇನ್ನು ಕೆಲವರು ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಾರೆ.

ಈ ಹಳ್ಳಿಯ ವ್ಯಾಪ್ತಿಯಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಮಾವಿನಹಣ್ಣನ್ನು ಬೆಳೆಯುವ ಬೆಳೆಗಾರರಿದ್ದಾರೆ. ಆದರೆ ಅವರ್ಯಾರು ಇಲ್ಲಿನ ಮಾವಿನಸಂತೆಗೆ ಹಣ್ಣನ್ನು ಕಳುಹಿಸುತ್ತಿಲ್ಲ ಎಂಬುವುದು ಕಟುಸತ್ಯ. ಹೆಚ್ಚಿನ ಬೆಳೆಗಾರರು ತಮ್ಮ ತೋಟದ ಫಸಲನ್ನು ಮೈಸೂರಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ನೀಡಿ ಹಣ ಪಡೆಯುತ್ತಾರೆ. ಹಾಗಾಗಿ ಮೈಸೂರಿನ ಮಾರುಕಟ್ಟೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಾರೆ.
ಮಾರ್ಚ್ ನಿಂದ ಆಗಸ್ಟ್ ವರೆಗೆ ಮಾವಿನ ಸಂತೆ

ಮಾರ್ಚ್ ನಿಂದ ಆಗಸ್ಟ್ ವರೆಗೆ ಮಾವಿನ ಸಂತೆ

ಮಾರ್ಚ್ ನಿಂದ ಆರಂಭವಾಗುವ ಮಾವಿನಸಂತೆ ಆಗಸ್ಟ್ ವರೆಗೆ ನಡೆಯುತ್ತದೆ. ಮಾವಿನಹಣ್ಣಿನ ಕಾಲ ಮುಗಿದ ಬಳಿಕ ಮಾರಾಟಗಾರರು ಹೊಟ್ಟೆಪಾಡಿಗಾಗಿ ಬೇರೆ ಏನಾದರೊಂದು ಕೆಲಸ ಮಾಡುತ್ತಾರೆ. ಇಲ್ಲಿ ಕೆಲವು ಸಿನಿಮಾಗಳ ಚಿತ್ರೀಕರಣವೂ ನಡೆದಿದೆ.

ಒಟ್ಟಾರೆ ರಸ್ತೆ ಬದಿಯ ಮಾವಿನಸಂತೆ ಗ್ರಾಹಕರಿಗೆ ಉತ್ತಮ ಮಾವಿನಹಣ್ಣು ಖರೀದಿಸಲು ಅನುಕೂಲವಾಗಿದ್ದರೆ, ವ್ಯಾಪಾರಸ್ಥರಿಗೆ ಹೊಟ್ಟೆಪಾಡು ಕಳೆಯುವಂತಾಗಿದೆ.

English summary
Summer Special Fruit Mela on Highway road in Mysuru. The mango fair on the highway of Mysuru- Hunasur road, is unique and attracting many tourists. Here villagers and city merchants are selling mangoes on the highway on their own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X