ಸೋರುತಿಹುದು ಮಚ್ಚರೆ ಶಾಲೆಯ ಮಾಳಿಗೆ, ಪಾಠ ಮಾಡುವುದು ಹೇಗೆ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 30 : ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸ್ಥಿತಿ ಅಯೋಮಯವಾಗಿದೆ. ಒಂದೇ ಕೊಠಡಿಯಲ್ಲಿ ಹಲವು ತರಗತಿಗಳು, ಪೀಠೋಪಕರಣಗಳಿಲ್ಲದೆ ನೆಲದಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು, ಸೋರುವ ಛಾವಣಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು... ಹೀಗೆ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿರುತ್ತವೆ.

ಸರ್ಕಾರ ಇಂಥ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳುತ್ತಿದ್ದರೂ ಕೆಲವೆಡೆಗಳಲ್ಲಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಇರುವ ಶಾಲೆಗಳ ಕಟ್ಟಡಗಳನ್ನು ಅಭಿವೃದ್ಧಿಗೊಳಿಸದ ಕಾರಣ ಮಳೆಬಂದರೆ ಸೋರುವ ಪರಿಸ್ಥಿತಿ ನಿರ್ಮಾಗೊಂಡಿದೆ. [ಈ ಶಾಲೆಯಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]

Machare school in HD Kote begging for assistance

ಗ್ರಾಮೀಣ ಪ್ರದೇಶದಲ್ಲಿ ಏಕೋಪಾಧ್ಯಾಯ ಶಾಲೆಗಳಿದ್ದು 1ನೇ ತರಗತಿಯಿಂದ 5ನೇ ತರಗತಿವರೆಗೆ ಮಕ್ಕಳು ಓದುತ್ತಿದ್ದು, ಒಬ್ಬರೇ ಶಿಕ್ಷಕರು ಪಾಠ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಆದರೂ ಶಿಕ್ಷಕರು ಉತ್ಸಾಹದಿಂದಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ಆದರೆ ಕಟ್ಟಡವೇ ಕುಸಿಯುವ ಹಂತದಲ್ಲಿದ್ದು, ಮಳೆ ನೀರು ತರಗತಿಯೊಳಗೆ ನುಗ್ಗಿದರೆ ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವುದಾದರೂ ಹೇಗೆ? ಶಿಕ್ಷಕರು ಪಾಠ ಮಾಡುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಎಚ್.ಡಿ.ಕೋಟೆ ತಾಲೂಕು ಮಚ್ಚರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಇಂತಹ ಪರಿಸ್ಥಿತಿಯಲ್ಲೂ ಮಕ್ಕಳಿಗೆ ಪಾಠ ಮಾಡುವ ಮೂಲಕ ತನ್ನ ಕರ್ತವ್ಯ ಪಾಲಿಸುತ್ತಿದ್ದಾರೆ.

1997-98ರಲ್ಲಿ ಆರಂಭಗೊಂಡ ಮಚ್ಚರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಒಂದೇ ಕೊಠಡಿಯನ್ನು ಹೊಂದಿದ್ದು, ಇದೇ ಕೊಠಡಿಯಲ್ಲಿ 5 ತರಗತಿಗಳು ನಡೆಯುತ್ತಿವೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಮಳೆಗಾಲದಲ್ಲಿ ಕೊಠಡಿಯಲ್ಲಿ ನೀರು ನಿಲ್ಲುತ್ತಿದೆ. ಹೀಗಾಗಿ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಂದೆ ಬರುತ್ತಿಲ್ಲ. [ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಮಂಡ್ಯದ ಸರ್ಕಾರಿ ಶಾಲೆ]

Machare school in HD Kote begging for assistance

ಸುಮಾರು 8 ಮಕ್ಕಳಿಗೆ ಕುಸಿದಿದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು ಶಿಕ್ಷಕರಾಗಿರುವ ಚೇತನ್‌ಕುಮಾರ್ ಅವರು 29ಕ್ಕೇರಿಸಿದ್ದಾರೆ. ಇದೀಗ ಮಳೆ ಸುರಿಯುತ್ತಿರುವುದರಿಂದ ತರಗತಿ ಸೋರುತ್ತಿದ್ದು, ನೀರು ತುಂಬಿ ಕುಳಿತುಕೊಳ್ಳಲಾಗದ ಸ್ಥಿತಿಗೆ ತಲುಪಿದೆ. ಆದ್ದರಿಂದ ಕಟ್ಟಡದ ಆವರಣದಲ್ಲಿ ಪಾಠ ಮಾಡುತ್ತಿದ್ದಾರೆ. ಮಕ್ಕಳು ಮಳೆ ಚಳಿಗೆ ಹೊರಗೆ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ.

ಮಕ್ಕಳ ಪರಿಸ್ಥಿತಿಯನ್ನು ನೋಡಿದ ಇಲ್ಲಿ ಮಕ್ಕಳಿಗೆ ತೊಂದರೆಯಾದರೆ ಎಂಬ ಭಯದಿಂದ ಬೇರೆ ಶಾಲೆಗೆ ಸೇರಿಸುವತ್ತ ಯೋಚಿಸುತ್ತಿದ್ದಾರೆ. ಒಂದು ವೇಳೆ ಕಟ್ಟಡವನ್ನು ಅಭಿವೃದ್ಧಿ ಪಡಿಸದೆ ಹೋದರೆ ಮುಂದೆ ಈ ಶಾಲೆಯತ್ತ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುವುದಂತು ಖಚಿತ.

ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಲೆಯನ್ನು ಅಭಿವೃದ್ಧಿಗೊಳಿಸುವತ್ತ ಮುಂದಾಗುವರೇ ಎಂಬುವುದನ್ನು ಕಾದು ನೋಡಬೇಕಿದೆ. [ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How can a teacher teach and how can the students learn in this school in Machare village in HD Kote taluk in Mysuru district? When it rains during monsoon the leaking roof does not allow students or teachers to sit inside. The teacher has no other go but to teach outside classroom. ಇಂಥ ಶಾಲೆಯಲ್ಲಿ ಪಾಠ ಮಾಡುವುದಾದರೂ ಹೇಗೆ?
Please Wait while comments are loading...