ಜಾನುವಾರುಗಳಿಗೆ ಕಂಟಕವಾಗಿದ್ದ ಗಂಡು ಚಿರತೆ ಸೆರೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 25 : ಹುಣಸೂರು ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರ ಸಾಕು ಪ್ರಾಣಿ ಮತ್ತು ಜಾನುವಾರುಗಳನ್ನು ತಿಂದು ಭಯಹುಟ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಚಿರತೆ ಸಿಕ್ಕಿಬಿದ್ದಿದ್ದರಿಂದ ಕಳೆದ 2 ತಿಂಗಳಿನಿಂದ ಯಾತನೆ ಅನುಭವಿಸಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕೊತ್ತೇಗಾಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಡ್ಡಾಡುತ್ತಾ ಕಣ್ಣಿಗೆ ಬಿದ್ದ ಜಾನುವಾರುಗಳು, ನಾಯಿ, ಮೇಕೆಗಳ ಮೇಲೆ ದಾಳಿ ಮಾಡುತ್ತಾ ಕೊಂದು ತಿನ್ನುತ್ತಿದ್ದ ಚಿರತೆ ಗ್ರಾಮಸ್ಥರ ಚಿಂತೆಗೆ ಕಾರಣವಾಗಿತ್ತು.[ನಂಜನಗೂಡು ಕಾಡಂಚಿನ ಜನರ ನಿದ್ದೆಗೆಡಿಸಿದ ಚಿರತೆ]

leopard

ಗ್ರಾಮಗಳಲ್ಲಿ ಚಿರತೆ ಹಾವಳಿಯಿಂದಾಗಿ ಗ್ರಾಮಸ್ಥರು ಹಾಗೂ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಭಯಪಡುವಂತಾಗಿತ್ತು. ಚಿರತೆ ಹಾವಳಿ ಎಷ್ಟರ ಮಟ್ಟಿಗೆ ಇತ್ತೆಂದರೆ ನಾಗನಹಳ್ಳಿ ಗ್ರಾಮದ ಕಲ್ಪನಾ ಬೊಮ್ಮೆಗೌಡರಿಗೆ ಸೇರಿದ ಕರುವನ್ನು ಕೊಟ್ಟಿಗೆಗೆ ನುಗ್ಗಿ ತಿಂದು ಹಾಕಿತ್ತು.[ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!]

ಆ ನಂತರ ರಾಜೆಗೌಡರಿಗೆ ಸೇರಿದ ಸಾಕು ನಾಯಿ ತಿಂದಿತ್ತು ಹಾಗೂ ಕೊಟ್ಟಿಗೆಗೆ ನುಗ್ಗಿ ಟಗರೊಂದನ್ನು ಹೊತ್ತೊಯ್ದು ಪಕ್ಕದ ತೆಂಗಿನ ತೋಟದಲ್ಲಿ ತಿಂದು ಹಾಕಿತ್ತು. ಹಸುವೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಚಿರತೆ ಉಪಟಳ ಹೆಚ್ಚಾದ ಹಿನ್ನಲೆಯಲ್ಲಿ ಗ್ರಾ.ಪಂ. ಸದಸ್ಯ ಸಂಪತ್ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.[ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ, ಗ್ರಾಮಸ್ಥರ ಚಿಂತೆ]

ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖೆ ತಾಲೂಕಿನ ಗಾವಡಗೆರೆ ಹೋಬಳಿ ತಿಪ್ಪಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಚಿರತೆ ಇರುವ ಸುಳಿವು ಪತ್ತೆ ಹಚ್ಚಿತ್ತು. ಗ್ರಾಮದ ನಿವಾಸಿ ರಾಜೇಗೌಡ ಎಂಬುವರ ತೋಟದಲ್ಲಿ ಬೋನು ಇಟ್ಟು ಅದರೊಳಗೆ ಕುರಿಯನ್ನು ಕಟ್ಟಲಾಗಿತ್ತು. ಕುರಿಯನ್ನು ತಿನ್ನಲು ಬಂದ ಸಂದರ್ಭ ಸುಮಾರು 5 ವರ್ಷದ ಗಂಡು ಚಿರತೆ ಸಿಕ್ಕಿ ಬಿದ್ದಿದೆ.

ವಲಯ ಅರಣ್ಯಧಿಕಾರಿ ಹರೀಶ್, ಡಿಆರ್‍ಎಫ್‍ಓ ಸುರೇಶ್, ವಿನೋದ್, ಅರಣ್ಯ ರಕ್ಷಕ ಪ್ಯಾರೆಜಾನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಕಾರದಿಂದ ಚಿರತೆಯನ್ನು ಬೋನಿನಿಂದ ಹೊರ ತಂದರು. ಈ ಸಂದರ್ಭ ಚಿರತೆ ಕೈಯ್ಯಿಂದ ಪರಚಿದ್ದರಿಂದ ದೇವರಾಜ್ ಎಂಬುವರಿಗೆ ಗಾಯವಾಗಿದೆ.

ಸೆರೆ ಸಿಕ್ಕಿದ ಚಿರತೆಯನ್ನು ಸುರಕ್ಷಿತವಾಗಿ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ಕಲ್ಲಹಳ್ಳ ವಲಯದಲ್ಲಿ ಬಿಡಲಾಗಿದೆ. ಈಗಾಗಲೇ ಜಾನುವಾರುಗಳ ಮಾಂಸದ ರುಚಿ ಕಂಡಿರುವ ಈ ಚಿರತೆ ಮತ್ತೆ ನಾಡಿಗೆ ಬಂದರೆ ಎಂಬ ಭಯ ಜನರನ್ನು ಕಾಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After a massive search operation 5 year old Leopard captured in Hunsuru, Mysuru district.
Please Wait while comments are loading...