ಶಿಕ್ಷಣ ಸಚಿವರ ಜಿಲ್ಲೆಯಲ್ಲಿ 'ಶಾಲೆಯ ಗೋಳು' ಕೇಳೋರಿಲ್ಲ!

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 19: ಕಳೆದ ಹತ್ತು ವರ್ಷಗಳ ಹಿಂದೆ ಆರಂಭಿಸಿದ ಶಾಲಾ ಕಟ್ಟಡ ಕಾಮಗಾರಿ ಇನ್ನೂ ಕೂಡ ಪೂರ್ಣಗೊಳ್ಳದ ಕಾರಣ ಮಕ್ಕಳು ಇಂದೋ ನಾಳೆಯೋ ಮುರಿದು ಬೀಳುವಂತಿರುವ ಕಟ್ಟಡದಲ್ಲೇ ಓದುತ್ತಿದ್ದಾರೆ. ದನದಕೊಟ್ಟಿಗೆಯಂತಹ ಕಟ್ಟಡದಲ್ಲಿ ಜೀವಕೈಯ್ಯಲ್ಲಿ ಹಿಡಿಕೊಂಡು ಕುಳಿತು ಪಾಠಕೇಳಬೇಕಾದ ದುಸ್ಥಿತಿ ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಪಂ ವ್ಯಾಪ್ತಿಯ ಕೆಎಸ್ ಕೆ ನಗರದಲ್ಲಿದೆ!

ಸೂರೇ ಸರಿಯಿಲ್ಲದ ಬ್ರಹ್ಮಣೀಪುರದ ಸರಕಾರಿ ಶಾಲೆ, ನೋಡೋರೆ ಇಲ್ಲವೆ!

ಕೆಎಸ್ ಕೆ ನಗರದ ಸುತ್ತಮುತ್ತ ಶಾಲೆಗಳಿಲ್ಲದ ಕಾರಣ ಸುಮಾರು ಮೂರ್ನಾಲ್ಕು ಕಿ.ಮೀ. ದೂರದ ಬೂದಿತಿಟ್ಟು ಮತ್ತು ಅಬಳತಿಯ ಶಾಲೆಗಳಿಗೆ ಮಕ್ಕಳು ನಡೆದುಕೊಂಡು ಹೋಗಬೇಕಾಗಿತ್ತು. ವಾಹನ ಸೌಲಭ್ಯವಿಲ್ಲದ ಕಾರಣ ಚಿಕ್ಕಮಕ್ಕಳನ್ನು ಅಷ್ಟು ದೂರ ಕಳುಹಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದರು. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಿಡುತ್ತಿದ್ದರು. ಇದನ್ನು ತಡೆಗಟ್ಟುವ ಸಲುವಾಗಿ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲಾಯಿತು.

Lack of management of government schools in Mysuru

ಸದ್ಯ ದುಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಮಳೆ ಗಾಳಿ ಬಂದಾಗ ಮಕ್ಕಳು ಸೇರಿದಂತೆ ಶಿಕ್ಷಕರು ಬೆಚ್ಚಿ ಬೀಳುವಂತಾಗಿದೆ. ಈ ಕಟ್ಟಡ ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಮನಸ್ಸು ಮಾಡಿದ್ದರೆ ಇಷ್ಟರಲ್ಲೇ ಇಲ್ಲಿನ ಮಕ್ಕಳಿಗೆ ಸುಸಜ್ಜಿತ ಕಟ್ಟಡದ ಭಾಗ್ಯ ದೊರೆಯಬೇಕಿತ್ತು. ಆದರೆ 2007-08ರಲ್ಲಿ ಹೊಸಕಟ್ಟಡ ನಿರ್ಮಾಣ ಆರಂಭಿಸಲಾಯಿತಾದರೂ ಅದರಲ್ಲಿ ಒಂದಷ್ಟು ಭ್ರಷ್ಟಾಚಾರ ನಡೆದು ಕಟ್ಟಡ ಕಾಮಗಾರಿ ಮುನ್ನಡೆಯಲೇ ಇಲ್ಲ. ಇದರಿಂದಾಗಿ ಕಳೆದೊಂದು ದಶಕದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಇನ್ನು ಹಳೆಯ ಕಟ್ಟಡವನ್ನೇ ದುರಸ್ತಿಪಡಿಸೋಣ ಎಂದರೆ ಅಷ್ಟು ಹಣವೂ ಇಲ್ಲದಾಗಿದೆ. ಈ ಶಾಲೆಯಲ್ಲಿ 14 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಮಕ್ಕಳ ಪೋಷಕರು ಕೂಲಿಕಾರ್ಮಿಕರಾಗಿದ್ದು, ಬೇರೆ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಸಾಧ್ಯವಾಗದ ಕಾರಣಗಳಿಂದಾಗಿ ಇದೇ ಶಾಲೆಗೆ ಕಳುಹಿಸುತ್ತಿದ್ದಾರೆ.

Lack of management of government schools in Mysuru

ಒಂದೋ ಅರ್ಧದಲ್ಲಿ ನಿಂತ ಶಾಲಾ ಕಟ್ಟಡವನ್ನು ಪೂರ್ಣಗೊಳಿಸಿ ಅಥವಾ ಹಳೆಯ ಕಟ್ಟಡವನ್ನು ದುರಸ್ತಿಗೊಳಿಸಿ ಎಂದು ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳು, ಶಾಸಕರಿಗೆ ಮನವಿ ನೀಡಿ ಸುಸ್ತಾಗಿದ್ದಾರೆ. ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳದ ಕಾರಣದಿಂದಾಗಿ ಮಕ್ಕಳು ಇದೇ ಶಿಥಿಲ ಕಟ್ಟಡದಲ್ಲಿ ಕುಳಿತು ಪಾಠ ಕೇಳುವುದು ಅನಿವಾರ್ಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರ ತವರು ಜಿಲ್ಲೆಯಲ್ಲಿಯೇ ಇಂಥ ಸ್ಥಿತಿಯಿರುವಾಗ ಬೇರೆ ಊರುಗಳ ಸರ್ಕಾರಿ ಶಾಲೆಗಳ ಸ್ಥಿತಿ ಇನ್ನು ಹೇಗೆ ಇರಬಹುದೋ? ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಂತ್ರ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A government school in KSK Nagar in Piriyapattan, Mysuru reflects lack of management by government. Even though the education minister Tanveer Sait, as well as chief minister Siddaramaiah are from Mysuru, the worst situation of the government schools is still existing.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ