93 ಅಡಿಗೆ ಕುಸಿದ ಕೆಆರ್‍ಎಸ್ ನೀರಿನ ಮಟ್ಟ: ಆತಂಕ ಶುರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 3: ಕಾವೇರಿ ಕಣಿವೆಯಲ್ಲಿ ಮಳೆ ಭೋರ್ಗರೆದು ಸುರಿಯುತ್ತಿಲ್ಲ. ಪರಿಣಾಮ ಕೆಆರ್‍ಎಸ್ ಈ ಬಾರಿಯೂ ಭರ್ತಿಯಾಗುವ ಲಕ್ಷಣ ಕಾಣುತ್ತಿಲ್ಲ. ಕೊಡಗಿನಲ್ಲಿ ಒಂದಷ್ಟು ಮಳೆ ಸುರಿದಿದ್ದರಿಂದ 100 ಅಡಿಯಷ್ಟು ನೀರಿನ ಮಟ್ಟ ತಲುಪಿತ್ತಾದರೂ ಇದೀಗ ತಮಿಳುನಾಡು ಮತ್ತು ನಾಲೆಗೆ ನೀರು ಹರಿಸಿದ್ದರಿಂದ 93 ಅಡಿಗೆ ಬಂದು ನಿಂತಿದೆ.

krs

ಈ ಮಧ್ಯೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 'ಬದುಕಿ ಮತ್ತು ಬದುಕಲು ಬಿಡಿ' ಎಂದು ಶುಕ್ರವಾರ ಹೇಳಿದೆ. ನಮ್ಮ ರಾಜ್ಯದ ಜನರ ಮತ್ತು ರೈತರ ಬದುಕು ಮೂರಾಬಟ್ಟೆಯಾಗಿದೆ. ಜಮೀನಿನಲ್ಲಿ ಬೆಳೆ ಬೆಳೆದರೆ ಮಾತ್ರ ಹೊಟ್ಟೆಗೆ ಹಿಟ್ಟು. ಕಳೆದ ವರ್ಷವೂ ಕೆಆರ್‍ಎಸ್ ಜಲಾಶಯ ಭರ್ತಿಯಾಗದೆ ಯಾವುದೇ ಬೆಳೆ ಬೆಳೆದಿರಲಿಲ್ಲ.[ತಮಿಳ್ನಾಡಿಗೆ ಕಾವೇರಿ ಬಿಡಲೇಬೇಕು : ಸುಪ್ರೀಂಕೋರ್ಟ್ ಆಜ್ಞೆ!]

krs dam

ಮಂಡ್ಯದ ರೈತರನ್ನು ನೆನಪಿಸಿಕೊಳ್ಳಿ: ಅದರಿಂದ ಎಂತಹ ಸ್ಥಿತಿ ಪರಿಣಾಮ ನಿರ್ಮಾಣವಾಯಿತು, ಮಂಡ್ಯದಲ್ಲಿ ಎಷ್ಟು ಮಂದಿ ಅನ್ನದಾತರು ಸಾವಿಗೆ ಶರಣಾದರು ಎಂಬುದು ನಮ್ಮ ಕಣ್ಣಮುಂದೆಯೇ ಇದೆ. ಮತ್ತೆ ಇರುವ ನೀರನ್ನು ತಮಿಳುನಾಡಿಗೆ ಹರಿಸಿ, ಮತ್ತೊಂದಷ್ಟು ನೀರನ್ನು ಕುಡಿಯಲು ಇಟ್ಟುಕೊಂಡರೆ ಅಲ್ಲಿಗೆ ಕಾವೇರಿ ಕಣಿವೆಯ ರೈತರ ಬದುಕು ಸಂಪೂರ್ಣವಾಗಿ ನೆಲ ಕಚ್ಚುವುದರಲ್ಲಿ ಸಂಶಯವಿಲ್ಲ.

ಕೆಲವು ವರ್ಷಗಳ ಹಿಂದೆ ಮಳೆ ಸುರಿದು ಕೆಆರ್‍ಎಸ್ ಜಲಾಶಯ ಭರ್ತಿಯಾಗಿ, ಹೆಚ್ಚಾದ ನೀರು ಲೆಕ್ಕಕ್ಕೆ ಸಿಕ್ಕದಂತೆ ಹರಿದು ಹೋಗುತ್ತಿತ್ತು. ನಾಲೆಗಳಿಗೆ ನೀರು ಸಮೃದ್ಧವಾಗಿ ಹರಿಯುತ್ತಿದ್ದರಿಂದ ಭತ್ತ, ಕಬ್ಬು, ತರಕಾರಿ ಹೀಗೆ ತಮಗೆ ಅನುಕೂಲವಾದ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರು. ಭತ್ತ ಮತ್ತು ಕಬ್ಬನ್ನು ಬೆಳೆಯುತ್ತಿದ್ದರಿಂದ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲದ ಮಟ್ಟವೂ ಹೆಚ್ಚಾಗುತ್ತಿತ್ತು.

krs-1

ವಾಡಿಕೆ ಮಳೆ ಆಗಿಲ್ಲ: ಈ ಬಾರಿ ವಾಡಿಕೆ ಮಳೆ ಸುರಿಯದ ಕಾರಣ ಕೊಡಗಿನಲ್ಲಿಯೂ ಭತ್ತದ ಕೃಷಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿಲ್ಲ. ಮಳೆಯನ್ನೇ ನಂಬಿ ಭತ್ತ ಬೆಳೆಯುವ ಇಲ್ಲಿನ ಕೃಷಿಕರು, ನೀರಿನ ಕೊರತೆಯಿಂದ ಭತ್ತ ಬೆಳೆಯಲು ಮುಂದಾಗಿಲ್ಲ. ಹೀಗಾಗಿ ಪಾಳು ಬಿದ್ದ ಭತ್ತದ ಬಯಲುಗಳು ಅಲ್ಲಲ್ಲಿ ಕಂಡು ಬರುತ್ತಿವೆ.[ತಮಿಳುನಾಡಿಗೆ ನೀರು ಬಿಡದಂತೆ ರೈತರ ಅರೆಬೆತ್ತಲೆ ಪ್ರತಿಭಟನೆ]

ಈ ಬಾರಿ ಕೆಆರ್‍ಎಸ್ ಜಲಾಶಯ ಭರ್ತಿಯಾಗುತ್ತದೆ, ಇದರಿಂದ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ. ನಾಲೆಗೆ ನೀರು ಹರಿದು ಬಂದಿದ್ದರಿಂದ ಕೆಲವರು ಭತ್ತದ ನಾಟಿ ಮಾಡಿದ್ದರು. ಆದರೆ ಆ.31ರಂದು ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿರುವುದರಿಂದ ರೈತರು ಪರದಾಡುವಂತಾಗಿದೆ.

ಗಾಯದ ಮೇಲೆ ಬರೆ: ನಾಲೆಗಳಿಗೆ ನೀರು ನಿಲ್ಲಿಸಿದ್ದರಿಂದ ಕೊಳವೆ ಬಾವಿಯ ನೀರಿಗೆ ಮೊರೆಹೋಗಿದ್ದಾರೆ. ಆದರೆ ಅಂತರ್ಜಲ ಸಮಸ್ಯೆಯಿಂದ ನೀರು ಸಾಕಷ್ಟು ಬಾವಿಯಲ್ಲಿ ಇಲ್ಲ. ಮೂಲಗಳ ಪ್ರಕಾರ ಅಂತರ್ಜಲ ಮಟ್ಟವೂ ಮಂಡ್ಯ ವ್ಯಾಪ್ತಿಯಲ್ಲಿ ಸುಮಾರು 14 ಅಡಿಯಷ್ಟು ಕುಸಿದಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

krs-2

ಅಂತರ್ಜಲ ಮಟ್ಟ ಕುಸಿತ: ಮಂಡ್ಯ ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಕಳೆದ ವರ್ಷ ಅಂತರ್ಜಲ ಮಟ್ಟ 6.96 ಮೀ. ಇದ್ದರೆ, ಈ ವರ್ಷ ಅದು 11.13 ಮೀ.ಗೆ ಕುಸಿದಿದೆ. ಇದು ಆತಂಕಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕೇವಲ ರೈತರು ಮಾತ್ರವಲ್ಲ ಶ್ರೀಸಾಮಾನ್ಯರು ಕೂಡ ನೀರಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯ ಎದುರಾಗುವುದರಲ್ಲಿ ಸಂಶಯವಿಲ್ಲ.[ಆ 30: ಕರ್ನಾಟಕ-ತಮಿಳುನಾಡು ನಡುವೆ ಬಸ್ ಸಂಚಾರ ಸ್ಥಗಿತ]

ಕೆಆರ್‍ಎಸ್ ಜಲಾಶಯದಲ್ಲಿರುವ ಪ್ರತಿ ಹನಿಯೂ ಜೀವಜಲವಾಗಿದೆ. ಸದ್ಯದ ಮಟ್ಟಿಗೆ ಗರಿಷ್ಠ 124.80 ಅಡಿಯಿರುವ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 93.03 ಅಡಿಯಷ್ಟಿದೆ. ಜಲಾಶಯಕ್ಕೆ 3603 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರಕ್ಕೆ(ನದಿಗೆ) 1700 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

ತಮಿಳುನಾಡಿಗೆ ನೀರು ಬಿಡಲು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಕೆಆರ್‍ಎಸ್ ನ ಇಇ ಬಸವರಾಜೇಗೌಡ ತಿಳಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೋ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KRS water level dip to 93 feet. Supreme court suggested Karnataka government to flow water to Tamilnadu. Water flow stopped to channels from August 31st. Now farmers are in deep trouble.
Please Wait while comments are loading...