ಕಾವೇರಿ ಹೋರಾಟದಲ್ಲಿ ಸ್ತಬ್ಧವಾದ ಮೈಸೂರು!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 9: ಸುಪ್ರೀಂಕೋರ್ಟ್ ತೀರ್ಪಿಗೆ ತಲೆ ಬಾಗಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ರೈತ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮೈಸೂರು ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ನಗರದಾದ್ಯಂತ ವಿವಿಧ ಸಂಘಟನೆಗಳ ಕಾರ್ಯಕರ್ತರು, ಬೈಕ್ ಮೆರವಣಿಗೆ, ಧರಣಿಗಳ ಮೂಲಕ ಸರ್ಕಾರದ ಕ್ರಮಗಳನ್ನು ಖಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಗೆ ಕೈ ಜೋಡಿಸಿದ ಜನ: ಮೈಸೂರು ನಗರದಾದ್ಯಂತ ವರ್ತಕರು ತಮ್ಮ ಅಂಗಡಿ ಮಳಿಗೆಯನ್ನು ಮುಚ್ಚಿದ್ದರೆ, ಆಟೋ, ಟ್ಯಾಕ್ಸಿ, ಬಸ್ ಗಳು ರಸ್ತೆಗೆ ಇಳಿಯದ ಕಾರಣ ಇಡೀ ನಗರ ಸ್ತಬ್ಧಗೊಂಡಿತ್ತು. ಸಯ್ಯಾಜಿರಾವ್, ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಕಾಳಿದಾಸ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು.

Karnataka bandh: A patient died in Mysuru

ನಗರದ ಗಲ್ಲಿ ಗಲ್ಲಿಗಳಲ್ಲೂ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಬೆಳಗ್ಗೆಯಿಂದಲೇ ಬೆಂಬಲ ಸೂಚಿಸಿ ಜನ ರಸ್ತೆಗೆ ಬರಲಿಲ್ಲ. ಕೆಲವೆಡೆ ಅಂಗಡಿಗಳು ತೆರೆದಿದ್ದವಾದರೂ ಸಂಘಟನೆಗಳ ಸದಸ್ಯರು ಮುಚ್ಚಿಸಿದರು. ಮುಸ್ಲಿಂ ಸಂಘಟನೆಗಳ ಸದಸ್ಯರು ಬೈಕ್ ಮೆರವಣಿಗೆ ನಡೆಸಿ, ಜಯಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅರಮನೆ ಬಳಿಯಿರುವ ಕೋಟೆ ಆಂಜನೇಯ ದೇವಾಲಯದ ಬಳಿ ಬೆಳಗ್ಗೆ ಜಮಾಯಿಸಿದ ವಿವಿಧ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರಕಾರ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು. ಬೃಹತ್ ಮೆರವಣಿಗೆಯಲ್ಲಿ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಆಟೋ ಚಾಲಕರು ಮತ್ತು ಕನ್ನಡಪರ ಸಂಘಟನೆಗಳು ಒಟ್ಟಾಗಿ ಸೇರಿ ಜಯಲಲಿತಾರ ಅಣಕು ಶವಯಾತ್ರೆಯನ್ನು ಕೇಂದ್ರ ಬಸ್ ನಿಲ್ದಾಣ ಹಾಗೂ ನ್ಯಾಯಾಲಯದ ಎದುರು ನಡೆಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ರೈಲು ತಡೆದು, ಕೆಲಕಾಲ ಪ್ರತಿಭಟನೆ ನಡೆಸಿದರೆ ಮತ್ತೆ ಕೆಲವರು ಉರುಳು ಸೇವೆ ನಡೆಸಿದರು.

Karnataka bandh: A patient died in Mysuru

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನ್ಯಾಯಾಲಯದ ಮುಂಭಾಗ ಉದ್ಯಾನವನದಲ್ಲಿ ಸಾಮೂಹಿಕ ಸಂಧ್ಯಾವಂದನೆ ಮಾಡಿ ಪ್ರತಿಭಟನೆ ನಡೆಸಿದರು.

ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಹಲವೆಡೆ ತೆರಳಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದವರ ಮನವೊಲಿಸಿ ಬಂದ್ ಮಾಡಿಸಿದರು. ನಗರದ ಹೃದಯ ಭಾಗವಾದ ಸೀತಾವಿಲಾಸ ರಸ್ತೆಯಲ್ಲಿ ಕಚೇರಿ ಹೊಂದಿರುವ ತುಮಕೂರು ಗ್ರೈನ್ ಮರ್ಚೆಂಟ್ಸ್ ಬ್ಯಾಂಕ್ ಹೊರಗಿನಿಂದ ಬಾಗಿಲು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿದ್ದುದನ್ನು ಗಮನಿಸಿದ ಕಾರ್ಯಕರ್ತರು, ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಚೇರಿಯನ್ನು ಬಂದ್ ಮಾಡಿಸಿದರು.

ರಾಮವಿಲಾಸ ರಸ್ತೆಯಲ್ಲಿ ಟಾರ್ಪಾಲಿನ್ ಸಂಸ್ಥೆಯೊಂದರ ಗೋದಾಮಿನಲ್ಲಿಯೂ ಹೊರಗಿನಿಂದ ಬಾಗಿಲು ಹಾಕಿಕೊಂಡು, ಸುಮಾರು 40 ಮಂದಿ ಕೆಲಸ ನಿರ್ವಹಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ, ಅವರಿಗೆ ಬಂದ್ ಉದ್ದೇಶವನ್ನು ಮನದಟ್ಟು ಮಾಡಿಸಿ ಹೊರ ಕಳುಹಿಸಲಾಯಿತು. ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕನಿಗೆ ತನ್ನ ತಪ್ಪಿಗೆ ಹೋರಾಟಗಾರರಲ್ಲಿ ಕ್ಷಮೆ ಯಾಚಿಸಿದ ಪ್ರಸಂಗವೂ ನಡೆಯಿತು.

Karnataka bandh: A patient died in Mysuru

ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನಕ್ಕೆ ತೆರಳಿ ಕೆಲಸಗಾರರ ಮನವೊಲಿಸಿ ಬಂದ್ ಮಾಡಿಸಿದ್ದಲ್ಲದೆ, ಕುವೆಂಪುನಗರದ ಥಾಟ್ ಫೋಖಸ್ ಸಂಸ್ಥೆ, ಕಂಪ್ಯೂಟರ್ ತರಬೇತಿ ಕೆಂದ್ರ, ರಂಗೋಲಿ ಸೀರೆ ಅಂಗಡಿಯವರೂ ಸಹ ಬಾಗಿಲು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಸಂದರ್ಭದಲ್ಲಿ ಎಲ್ಲರ ಮನೊಲಿಸಿ ವ್ಯಾಪಾರ-ವಹಿವಾಟು ಬಂದ್ ಮಾಡಿ, ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕಾರ್ಯಕರ್ತರು ಕೋರಿದರು.

ತಮಿಳು ಅಭಿಮಾನಿಗೆ ಗೂಸಾ
ಕೋರ್ಟ್ ಮುಂಭಾಗ ರೊಚ್ಚಿಗೆದ್ದ ಪ್ರತಿಭಟನಾಕಾರರು ಜಯಲಲಿತಾ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಿದ್ದು, ಇದನ್ನು ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಸ್ಥಳೀಯರು ಥಳಿಸಿದ್ದಾರೆ.

Karnataka bandh: A patient died in Mysuru

ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ರವಿ ಎಂದು ತಿಳಿದು ಬಂದಿದ್ದು, ಈತ ಮೈಸೂರಿನ ಬಿಪಿಒನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂಲತಃ ತಮಿಳುನಾಡಿನ ಜಯಲಲಿತಾ ಅಭಿಮಾನಿಯಾಗಿದ್ದು, ಜಯಲಲಿತಾ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯುವುದನ್ನು ಸೆರೆಹಿಡಿದು ತಮಿಳುನಾಡಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ. ಬಳಿಕ ಆತನ ಚಪ್ಪಲಿಯಿಂದಲೇ ಜಯಲಲಿತಾ ಭಾವಚಿತ್ರಕ್ಕೆ ಹೊಡೆಸಿ, ಬಿಟ್ಟು ಕಳುಹಿಸಿದ್ದಾರೆ.

ರೋಗಿ ಸಾವು
ಬಂದ್ ಹಿನ್ನಲೆಯಲ್ಲಿ ಬಸ್ ಸೌಲಭ್ಯವಿಲ್ಲದೆ ಆಸ್ಪತ್ರೆಯಿಂದ ಮನೆಗೆ ತೆರಳಲು ಸಾಧ್ಯವಾಗದೆ ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ತನ್ನೂರಿಗೆ ತೆರಳಬೇಕಿದ್ದ ವ್ಯಕ್ತಿ ನಿಲ್ದಾಣದಲ್ಲಿ ಬಸ್ ಸಿಗದೆ ಮತ್ತು ತಿನ್ನಲು ಆಹಾರ ಸಿಗದೆ, ಕುಡಿಯಲು ನೀರಿಲ್ಲದೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.

ಈ ವ್ಯಕ್ತಿ ಯಾರು, ಎಲ್ಲಿಯವರು ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ. ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Different organisations participated in bandh in Mysuru. Bandh called off in the evening. A patient died in bus stand.
Please Wait while comments are loading...