ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕವಿ ಚನ್ನವೀರ ಕಣವಿರವರಿಗೆ ಮೈಸೂರು ದಸರಾಗೆ ಆಹ್ವಾನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 04 : ಐತಿಹಾಸಿಕ ಮೈಸೂರು ದಸರಾಕ್ಕೆ ಅಕ್ಟೋಬರ್ 1ರಂದು ಬೆಳಿಗ್ಗೆ 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ ಕರ್ನಾಟಕದ ಹೆಮ್ಮೆಯ ಕವಿ ಚನ್ನವೀರ ಕಣವಿ (88) ಅವರು ಚಾಲನೆ ನೀಡಲಿದ್ದು, ಈ ಸಂಬಂಧ ಅವರನ್ನು ಭಾನುವಾರ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.

ಧಾರವಾಡದ ಕಲ್ಯಾಣನಗರದಲ್ಲಿರುವ ಕವಿ ನಿವಾಸ ಚೆಂಬೆಳಕುಗೆ ಭಾನುವಾರ ಬೆಳಿಗ್ಗೆ ಮೈಸೂರು ಮಹಪೌರರಾದ ಬಿ.ಎಲ್.ಭೈರಪ್ಪ, 2016ರ ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಡಿ.ರಣದೀಪ್, ಉಪವಿಶೇಷಾಧಿಕಾರಿಗಳಾಗಿರುವ ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ, ಕಾರ್ಯದರ್ಶಿ ಪುಟ್ಟಶೇಷಗಿರಿ, ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರ ಗಣ್ಯರು ಭೇಟಿ ನೀಡಿ ಮೈಸೂರು ಪೇಟ, ಶಾಲು, ಶ್ರೀಗಂಧದ ಹಾರ, ಫಲ ಪುಷ್ಪ ನೀಡಿ ಸತ್ಕರಿಸಿ, ಆಮಂತ್ರಣ ನೀಡಿದರು.

Kannada poet Channaveera Kanavi invited for Mysuru Dasara

ಗೌರವ ಸ್ವೀಕರಿಸಿ ಮಾತನಾಡಿದ ಕವಿ ಚನ್ನವೀರ ಕಣವಿ, ವಿಜಯನಗರದ ಸ್ಥಾಪನೆಗೆ ಮುನ್ನುಡಿ ಬರೆದ ಗಂಡುಗಲಿ ಕುಮಾರರಾಮ ಆರಂಭಿಸಿದ ದಸರಾ ಉತ್ಸವವನ್ನು ಮೈಸೂರು ಅರಸರು ಮುಂದುವರೆಸಿಕೊಂಡು ಬಂದರು. ಕರ್ನಾಟಕ ಏಕೀಕರಣಗೊಂಡ ಬಳಿಕವೂ ಸರಕಾರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದೆ. ಸಾಂಸ್ಕೃತಿಕ ಕೇಂದ್ರವಾಗಿರುವ ಮೈಸೂರು ಬೆಳಕಿನ ಕಿಂಡಿಯಾಗಿ ಕನ್ನಡದ ಮೂಲಕ ವಿಶ್ವದರ್ಶನ ಮಾಡಿಸುತ್ತಿದೆ. ರಾಜ್ಯ ಸರಕಾರ ಮೈಸೂರು ದಸರಾ ಉತ್ಸವ ಉದ್ಘಾಟನೆಯ ಗೌರವ ನೀಡಿರುವದಕ್ಕೆ ಆಭಾರಿಯಾಗಿದ್ದೇನೆ ಎಂದರು.

ಮೈಸೂರು, ಧಾರವಾಡ, ಮಂಗಳೂರು ನಗರಗಳು ಕರ್ನಾಟಕದ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಇವು ನವೋದಯ ಸಾಹಿತ್ಯದ ಕೇಂದ್ರಗಳೂ ಆಗಿದ್ದವು. ಮೈಸೂರು ದಸರಾ ಉತ್ಸವವು ಏಕೀಕೃತ ಕರ್ನಾಟಕದ ಉತ್ಸವವಾಗಿದೆ. ಬಂಗಾಲದಲ್ಲಿ ದುರ್ಗಾಪೂಜೆಯ ಮೂಲಕ ವಂಗಭಂಗ ಚಳವಳಿ, ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವನ್ನು ಬಾಲ ಗಂಗಾಧರ ತಿಲಕರು ದೇಶಪ್ರೇಮ ಬಿತ್ತಲು ಬಳಸಿಕೊಂಡರು. ಕರ್ನಾಟಕದಲ್ಲಿ ದಸರಾ ಹಬ್ಬವು ನಾಡಿನ ಅಖಂಡತೆ ಸಾರಲು ಪ್ರೇರಣೆಯಾಯಿತು. ವರಕವಿ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರು ಧಾರವಾಡದಲ್ಲಿ 1925ರಿಂದಲೇ ನಾಡಹಬ್ಬ ಆಚರಿಸುವ ಪರಂಪರೆ ಆರಂಭಿಸಿದ್ದರು ಎಂದು ಹೇಳಿದರು.

Kannada poet Channaveera Kanavi invited for Mysuru Dasara

ಅನೆಗೊಂದಿಯ ಗಂಡುಗಲಿ ಕುಮಾರರಾಮ ಆರಂಭಿಸಿದ ದಸರಾ ಹಬ್ಬದ ಪರಂಪರೆ ವಿಜಯನಗರದ ಅರಸರು, ಮೈಸೂರು ಒಡೆಯರ ಮೂಲಕ ನಿರಂತರವಾಗಿ ಸಾಗಿಕೊಂಡು ಬಂದಿದೆ. ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಸರಕಾರಗಳು ದಸರಾ ಆಚರಣೆ ಮುಂದುವರೆಸಿಕೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜಗತ್ಪ್ರಸಿದ್ಧವಾಗಿರುವ ಮೈಸೂರು ದಸರೆಯ ಮೂಲಕ ವಿಶ್ವದರ್ಶನವಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಇದೇ ಮಾದರಿಯ ಸಾಂಸ್ಕೃತಿಕ ಉತ್ಸವಗಳು ನಡೆಯಬೇಕು. ಅವು ಜನತೆಯ ಹಬ್ಬಗಳಾಗಬೇಕು ಎಂದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಬಿ.ಎಲ್.ಭೈರಪ್ಪ ಮಾತನಾಡಿ, ತಾಯಿ ಚಾಮುಂಡೇಶ್ವರಿಯ ನಾಡಹಬ್ಬವನ್ನು ಕರ್ನಾಟಕ ಸರಕಾರ ಮುಂದುವರೆಸಿಕೊಂಡು ಬಂದಿದೆ. ಉನ್ನತಾಧಿಕಾರ ಸಮಿತಿಯು ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕೆಂಬ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯವನವರಿಗೆ ವಹಿಸಿತ್ತು. ಅವರ ಸೂಚನೆಯಂತೆ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಧಾರವಾಡಕ್ಕೆ ಬಂದು ದಸರಾ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇವೆ ಎಂದರು.

Kannada poet Channaveera Kanavi invited for Mysuru Dasara

ಮೈಸೂರು ಜಿಲ್ಲಾಧಿಕಾರಿ ಮೈಸೂರು ದಸರಾ ಉತ್ಸವ ಸ್ವಾಗತ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿ.ರಣದೀಪ, ಧಾರವಾಡ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಧಾರವಾಡದ ಪ್ರಭಾರ ಅಪರ ಜಿಲ್ಲಾಧಿಕಾರಿ ರಮೇಶ ಕೋನರಡ್ಡಿ, ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ಸೆಪ್ಟಂಬರ್ 28ರಂದು ಕವಿ ಚನ್ನವೀರ ಕಣವಿ ಅವರು ಪುತ್ರ ಶಿವಾನಂದ ಕಣವಿ ಅವರೊಂದಿಗೆ ರೈಲಿನ ಮೂಲಕ ಮೈಸೂರಿಗೆ ಆಗಮಿಸಲಿದ್ದು, ಅಕ್ಟೋಬರ್ 1ರಂದು ಬೆಳಿಗ್ಗೆ 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ 2016ರ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

English summary
Kannada poet Channaveera Kanavi was officially invited to inaugurate world famour Mysuru Dasara. Delegates from Mysuru went to Dharwad to invite 88 years old poet. Kanavi will be inaugurating Mysuru Dasara on October 1st in Chamundi Hills in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X