ಹಿಂದೂ-ಮುಸ್ಲಿಂ ಮದುವೆ : ಕ್ರಾಂತಿಗೆ ಬುದ್ಧಿಜೀವಿಗಳ ನಾಂದಿ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 18 : ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ಮಂಡ್ಯದ ವೈದ್ಯರ ಮಗಳು ಆಶಿತಾ ಮತ್ತು ಶಕೀಲ್ ಅವರ ವಿವಾಹ ಮೈಸೂರಿನಲ್ಲಿ ಬಿಗಿಬಂದೋಬಸ್ತ್‌ನಲ್ಲಿ ನಡೆದಿದೆ. ಈ ಮದುವೆಗೆ ಜಿಲ್ಲಾಡಳಿತ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದಂತು ನಿಜ.

ಎಲ್ಲ ಅಡ್ಡಿ ಆತಂಕಗಳ ನಡುವೆ ಹಿಂದೂ ವಧು, ಮುಸ್ಲಿಂ ವರ ಒಂದಾಗಿದ್ದಾರೆ. ಅದು ಆಚೆಗಿರಲಿ. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಈ ವಿವಾಹದ ನಂತರ ಅಂತರ್‌ಧರ್ಮೀಯ ವಧು-ವರರ ರಕ್ಷಣೆಗೆ ರಾಜ್ಯ ಮಟ್ಟದ ಸಂಘಟನೆ ರಚಿಸಲು ವಿಚಾರವಾದಿಗಳು, ಪ್ರಗತಿಪರರು ಮುಂದಾಗಿದ್ದಾರೆ. ಇಂತಹ ಸಂಘಟನೆ ಹುಟ್ಟಿಗೆ ಆಶಿತಾ ಮತ್ತು ಶಕೀಲ್ ವಿವಾಹ ಪ್ರಕರಣ ವೇದಿಕೆಯಾಗಿದೆ ಎಂದರೆ ತಪ್ಪಾಗಲಾರದು. [ಕಡೆಗೂ ನಡೆದೇಹೋಯಿತು ಆಶಿತಾ-ಶಕೀಲ್ ವಿವಾಹ]

ವಿವಾಹ ಸಮಾರಂಭಕ್ಕೆ ಆಗಮಿಸಿದ ಪ್ರೊ. ಕೆ.ಎಸ್.ಭಗವಾನ್, ಸಾಹಿತಿ ದೇವನೂರು ಮಹದೇವ, ಗೌರಿ ಲಂಕೇಶ್, ಜನವಾದಿ ಸಂಘಟನೆ ಮುಖ್ಯಸ್ಥೆ ವಿಮಲಾ, ವಿಚಾರವಾದಿ ಪ.ಮಲ್ಲೇಶ್ ಸೇರಿದಂತೆ ಹಲವರು ಸಂಘಟನೆ ಹುಟ್ಟು ಹಾಕುವ ಬಗ್ಗೆ ತೀರ್ಮಾನಿಸಿದ್ದಾರೆ, ಬಹುದೊಡ್ಡ ಸಮಾಜವಾದಿ ಚಳವಳಿಗೆ, ಕ್ರಾಂತಿಗೆ ಶ್ರೀಕಾರ ಹಾಕಲು ಸಜ್ಜಾಗಿದ್ದಾರೆ. [ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]

Kannada intellectuals moot security for Hindu muslim couple

ವಿವಾಹ ಸಮಾರಂಭಕ್ಕೂ ಮುನ್ನ ಮೈಸೂರು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಶಾಲೆಯ ಎಫ್.ಕೆ.ಇರಾನಿ ಸಭಾಂಗಣದಲ್ಲಿ ಸೇರಿದ ಸಮಾನ ಮನಸ್ಕರು ಅಂತರ್ ಧರ್ಮೀಯ, ಅಂತರ್‌ಜಾತಿ ವಿವಾಹಿತರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಲು, ಆಯ್ಕೆ ಮತ್ತು ಸಂವಿಧಾನ ಬದ್ಧ ಹಕ್ಕುಗಳ ರಕ್ಷಣೆಗಾಗಿ ಹೋರಾಟ ರೂಪಿಸಲು ರಾಜ್ಯಮಟ್ಟದ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ನಡೆಸಲು ತೀರ್ಮಾನಿಸಿತು.

ತಮಿಳುನಾಡಿನಲ್ಲಿರುವಂತೆ ಅಂತರ್‌ಜಾತಿ, ಅಂತರ್‌ಧರ್ಮೀಯ ವಿವಾಹಿತರಿಗಾಗಿ ಪ್ರತ್ಯೇಕ ಕೋಶಗಳನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ವೈದಿಕಶಾಹಿ, ಮನುವಾದಿಗಳು ಹಂತಹಂತವಾಗಿ ಬದುಕುವ ಹಕ್ಕನ್ನು ಕಿತ್ತುಕೊಂಡು ವಂಚಿಸುತ್ತಿದ್ದಾರೆ ಎಂಬ ಆಕ್ರೋಶವೂ ವ್ಯಕ್ತವಾಯಿತು.

ಸಭೆಯಲ್ಲಿ ಪಿಯುಸಿಎಲ್ ಅಧ್ಯಕ್ಷ ಡಾ.ವಿ.ಲಕ್ಷ್ಮೀನಾರಾಯಣ, ಸಿಪಿಐಎಂ ಮುಖಂಡರಾದ ಲ.ಜಗನ್ನಾಥ್, ಜಯರಾಮ್, ಕೆ.ಬಸವರಾಜು, ಸಮತಾವೇದಿಕೆಯ ಇ.ರತಿರಾವ್. ಜನವಾದಿ ಸಂಘಟನೆಯ ಉಪಾಧ್ಯಕ್ಷೆ ನೀಲಾ, ಸಮುದಾಯ ಸಂಸ್ಥೆಯ ಜಿಲ್ಲಾ ಸಂಚಾಲಕ ವಜ್ರಮುನಿ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಸಭೆಯಲ್ಲಿದ್ದರು.

ಕನ್ನಡ ನಾಡಿನ ಬುದ್ಧಿಜೀವಿಗಳು, ಪ್ರಗತಿಪರರು ತಲೆತೂರಿಸುವುದರಿಂದ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ತರಲು ಸಾಧ್ಯವೆ? ಅಥವಾ, ಹಿಂದೂ ಮುಸ್ಲಿಂ ಜೋಡಿಗಳು ಕೈಕೈ ಹಿಡಿದುಕೊಂಡು ಹೋದರೆ ಸಂಘರ್ಷವೇಳುತ್ತಿರುವಾಗ ಇಂಥ ಚಳವಳಿಯ ಅಗತ್ಯವಿದೆಯೆ? ನಿಮ್ಮ ವಸ್ತುನಿಷ್ಠ ಅಭಿಪ್ರಾಯ ಮಂಡಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Intellectuals from Karnataka KS Bhagawan, Gowri Lankesh, Devanur Mahadeva, Vimala have decided to form an ornization to ensure social security for Hindu-Muslim couple. They have decided this in the aftermath of marriage of Ashitha and Shakeel in Mysuru.
Please Wait while comments are loading...