ಪತ್ರಕರ್ತರು ಕಾವಲುನಾಯಿ : ಔಟ್ ಲುಕ್ ಕೃಷ್ಣಪ್ರಸಾದ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 15 : ಸಮಾಜವನ್ನು ತಿದ್ದಿ ಸರಿದಾರಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ಪತ್ರಿಕೋದ್ಯಮಕ್ಕಿದ್ದು, ಪತ್ರಕರ್ತರು ಸಮಾಜವನ್ನು ಕಾಯುವ ಕಾವಲು ನಾಯಿಗಳಂತೆ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್‍ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಔಟ್ ಲುಕ್ ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ಕೃಷ್ಣ ಪ್ರಸಾದ್ ಮಾತನಾಡಿದರು.

ಸಮಾಜದ ಅಂಕು ಡೊಂಕುಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಮುಖ ಅಂಗವಾಗಿರುವ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸ ಬಯಸುವವರು ಹಣಕ್ಕೆ ಪ್ರಾಮುಖ್ಯತೆ ನೀಡದೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನೀವು ಮಾಡುವ ವರದಿ ಪೂರ್ವಾಗ್ರಹ ಪೀಡಿತವಾಗಿರದೆ ನೇರ ಹಾಗೂ ಸತ್ಯದ ಪರವಾಗಿಬೇಕು ಎಂದು ಹಿತವಚನ ಹೇಳಿದರು.

Journalists are supposed to be watchdogs : Krishna Prasad

ಭಾರತೀಯ ಪತ್ರಿಕೋದ್ಯಮ ಸುಮಾರು 200 ವರ್ಷಗಳ ಇತಿಹಾಸ ಹೊಂದಿದೆ. ಅಂದಿನಿಂದ ಇಂದಿನವರೆಗೆ ಮಹತ್ತರ ಬದಲಾವಣೆಗಳನ್ನು ಕಂಡಿದೆ. ದೇಶದ ಜನತೆಗೆ ಅಗತ್ಯವಿರುವ ಸುದ್ದಿಗಳನ್ನು ತಿಳಿಸುವಲ್ಲಿ ಮುಂದಿದೆ ಎಂದು ಅವರು ಇತಿಹಾಸದ ಕೆಲ ಪುಟಗಳನ್ನು ತೆರೆದಿಟ್ಟರು.

ಇಂದು ಈ ರಂಗಕ್ಕೆ ಪಾದಾರ್ಪಣೆ ಮಾಡುವವರು ಹಣ ಸಂಪಾದನೆಯನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡಿದ್ದಾರೆ. ಇದರಿಂದ ಅಂತಹ ಪತ್ರಿಕೆಗಳು ಹೆಚ್ಚು ದಿನ ಬದುಕಲಾರವು. ಎಂದಿಗೂ ಹಣಕ್ಕೆ ಪ್ರಾಮುಖ್ಯತೆ ನೀಡಬಾರದು. ಸಮಸ್ಯೆಗಳನ್ನು ಎತ್ತಿಹಿಡಿದು ಅವುಗಳಿಗೆ ಪರಿಹಾರ ನೀಡಬೇಕು ಎಂದು ಅವರು ಮರಿ ಪತ್ರಿಕೋದ್ಯಮಿಗಳಿಗೆ ಸಲಹೆ ನೀಡಿದರು.

ದಶಕಗಳ ಹಿಂದೆ ರಾಷ್ಟ್ರದ ಜನತೆ ಸುದ್ದಿಗಾಗಿ ಪತ್ರಿಕೆಗಳನ್ನೇ ಅವಲಂಬಿಸಿದ್ದರು. ಆದರೆ ತಂತ್ರಜ್ಞಾನದ ಬದಲಾವಣೆಯಿಂದ ಮೊಬೈಲ್ ನಲ್ಲಿಯೇ ವಿಶ್ವದ ಯಾವುದೇ ಮೂಲೆಯಲ್ಲಿ ಸಂಭವಿಸುವ ಘಟನೆಗಳನ್ನು ಓದಬಹುದಾಗಿದೆ. ಈ ಸೌಲಭ್ಯ ಉಳ್ಳವರಿಗೆ ಮಾತ್ರ ಲಭ್ಯವಿದೆ. ಇತರರು ಪತ್ರಿಕೆಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆ ಇರುವುದರಿಂದ, ಪತ್ರಿಕೆಗಳು ತಮ್ಮ ಎಂದಿನ ಮೌಲ್ಯವನ್ನು ಕಾಯ್ದುಕೊಳ್ಳಬೇಕು. ಯಾರ ಪರವೂ ಇಲ್ಲದೆ ವಿಶ್ವಾಸಾ‍ರ್ಹ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಸಹಾಯಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಪಬ್ಲಿಕ್ ಟಿವಿಯ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಬದ್ರುದ್ದೀನ್ ಕೆ. ಮಾಣಿ, ಟೈಮ್ಸ್ ಆಫ್ ಇಂಡಿಯಾ ಸಂಪಾದಕ ಸಾಹಿದ್ ಅತಾವುಲ್ಲಾ ಉಪನ್ಯಾಸ ನೀಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಶಂಕರಪ್ಪ, ಶಿಬಿರದ ಸಂಚಾಲಕ ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Journalists should never run behind money and they should act like watchdogs of society, Krishna Prasad, former editor-in-chief told budding journalists in Mysuru. He was addressing Karnataka State Open University students in Mysuru on 15th February.
Please Wait while comments are loading...