ನಾಲೆ ನೀರು ಕುಡಿಯೋಕೆ ಆಗುತ್ತೇನ್ರಿ? ಸಿದ್ದು ಖಡಕ್ ಪ್ರಶ್ನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 29 : ನಮ್ಮಲ್ಲಿದ್ದರೆ ತಾನೆ ನಾಲೆಗಳಿಗೆ ನೀರು ಬಿಡೋದು? ನನಗೇನು ನಾಲೆಯಲ್ಲಿರುವ ನೀರು ಕುಡಿಯೋಕೆ ಆಗುತ್ತಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ದಬಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನಾನೂ ರೈತನೇ, ರೈತರಿಗೆ ನೀರು ಕೊಡಬೇಕೆಂಬುದೂ ಗೊತ್ತಿದೆ. ಆದ್ರೆ ನಮ್ಮಲ್ಲಿ ನೀರಿಲ್ಲ. ಹೀಗಾಗಿ ನೀರು ಬಿಡಲು ಆಗ್ತಿಲ್ಲ. ಈ ಬಗ್ಗೆ ಚರ್ಚಿಸಲು ಆಗಸ್ಟ್ 5ರಂದು ಸಭೆ ಕರೆಯಲಾಗಿದೆ. ಅಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಎಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರು ವಸ್ತುಸ್ಥಿತಿಯನ್ನು ಅರಿತು ಜವಾಬ್ದಾರಿಯುತವಾಗಿ ಮಾತನಾಡಬೇಕು. ತಮಿಳುನಾಡಿಗೆ ನೀರು ಬಿಡದೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ಇರಲಾರದು ಎಂದು ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

Is it possible to drink canal water? Siddu asks HDK

ಪ್ರತ್ಯೇಕ ಧರ್ಮದ ವಿಚಾರ ಮನವಿ ಬಂದಿರುವುದು ನಿಜ

ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕು, ಬೇಡ ಎಂಬ ಎರಡೂ ಮನವಿ ಬಂದಿದ್ದು, ಕೂತು ಚರ್ಚೆ ಮಾಡಿ ಬಳಿಕ ಕಾನೂನಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು. ಪ್ರತ್ಯೇಕ ಲಿಂಗಾಯಿತ ಧರ್ಮದ ಕುರಿತು ಪರ, ವಿರೋಧದ ಚರ್ಚೆಗಳು ನಡೆಯುತ್ತಿದ್ದು ಒಂದೆಡೆ ಎರಡೂ ಕಡೆಯವರನ್ನು ಸೇರಿಸಿ ಚರ್ಚೆ ಮಾಡಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಪ್ರಚಲಿತ ವಿವಾದಾತ್ಮಕ ವಿದ್ಯಮಾನದ ಬಗ್ಗೆ ಸ್ಪಷ್ಟೀಕರಣ ನೀಡಿದರು.

ಲಿಂಗಾಯತ ಧರ್ಮವನ್ನು ಒಡೆಯುವ ಮೂಲಕ ಸಮಾಜವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಸಮಾಜವನ್ನು ಒಗ್ಗೂಡಿಸಲು ಶ್ರಮಿಸುತ್ತದೆಯೇ ಹೊರತು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದರು.

ರಾಕೇಶ್ ಸಿದ್ದರಾಮಯ್ಯ ಪುಣ್ಯತಿಥಿ

ಸರಿಯಾಗಿ ಒಂದು ವರ್ಷದ ಹಿಂದೆ ಅಕಾಲಿಕ ಮೃತ್ಯುವಿಗೀಡಾಗಿದ್ದ ಪುತ್ರ ರಾಕೇಶ್ ಸಿದ್ದರಾಮಯ್ಯರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ತಾಲೂಕಿನ ಟಿ. ಕಾಟೂರಿನ ತೋಟದ ಮನೆಯಲ್ಲಿ ನಡೆಯಲಿರುವ ಕಾರ್ಯದಲ್ಲಿ ಪಾಲ್ಗೊಳ್ಳಲು ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿದ್ದರು.

ಗುಜರಾತ್ ಶಾಸಕರ ಬಗ್ಗೆ ಗೊತ್ತಿಲ್ಲ

ಮಂಗಳೂರು ಕೋಮುಗಲಭೆ ವಿಚಾರ ಕುರಿತು ಕೇಂದ್ರ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿದ್ದಾರೆ ಎಂದು ಕೆಲವು ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಬಂದಿರುವ ವಿಚಾರವೂ ನನಗೆ ಗೊತ್ತಿಲ್ಲ ಎಂದರು. ಆಗಸ್ಟ್ ತಿಂಗಳಲ್ಲಿ ಸಂಪುಟ ಖಾಲಿ ಸ್ಥಾನ ಭರ್ತಿ ನಡೆಯಲಿದ್ದು, ಖಾಲಿ ಇರುವ ಮೂರು ಮಂತ್ರಿ ಸ್ಥಾನ ಭರ್ತಿ ಮಾಡುವಾಗ ಗೃಹ ಸಚಿವರು ಯಾರು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದರು.

ಮಹದಾಯಿ ಯೋಜನೆ ಕುರಿತು ಪಿಎಂ ನಿರ್ಲಕ್ಷ್ಯ

ಮಹದಾಯಿ ಯೋಜನೆ ಕುರಿತು ವ್ಯಾಜ್ಯವನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಇಚ್ಛೆ ತೋರುತ್ತಿಲ್ಲ. ನ್ಯಾಯಾಲಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು, ಪ್ರಧಾನಿ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿದ್ದು, ಒತ್ತಡ ಹೇರುವ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದರು.

ಈ ಸಂದರ್ಭ ಸಚಿವ ಸಮಾಜ ಕಲ್ಯಾಣ ಸಚಿವ ಮತ್ತು ಹೊಳಲ್ಕೆರೆಯ ಶಾಸಕ ಎಚ್.ಆಂಜನೇಯ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗಳ ಜೊತೆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Siddaramaiah has lambasted HD Kumaraswamy for asking CM to release Cauvery water to canals in Mysuru. He was in Mysuru to participate in 1st death anniversary of his son Rakesh. Siddaramaiah also said, he will never divide society on religious basis.
Please Wait while comments are loading...